ಲಕ್ಷ್ಮೇಶ್ವರ: ಹಬ್ಬಗಳನ್ನು ಸಾಂಪ್ರದಾಯಿಕ ಮತ್ತು ವಿಜೃಂಭಣೆಯಿಂದ ಆಚರಿಸಲು ಯಾವುದೇ ಅಡ್ಡಿಯಿಲ್ಲ. ಆದರೆ ಹಬ್ಬಗಳ ಆಚರಣೆ ನೆಪದಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ಮತ್ತು ಶಾಂತಿ-ಸೌಹಾರ್ದತೆ ಕದಡುವ ಘಟನೆಗಳು ನಡೆದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಬಾಲಚಂದ್ರ ಲಕ್ಕಂ ಎಚ್ಚರಿಕೆ ನೀಡಿದರು.
ಪಟ್ಟಣದ ಜ| ವೀರಗಂಗಾಧರ ಸಮುದಾಯ ಭವನದಲ್ಲಿ ಸೆ. 13ರಂದು ನಡೆಯುವ ಗಣೇಶೋತ್ಸವ ಮತ್ತು ಸೆ.21ರಂದು ನಡೆಯುವ ಮೊಹರಂ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸುವ ಮಂಡಳಿಯವರು ಪೂರ್ವಭಾವಿಯಾಗಿ ಪುರಸಭೆ, ಗ್ರಾಪಂ ಪಂಚಾಯತಿ, ಹೆಸ್ಕಾಂ, ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗಣೇಶನ ವಿಗ್ರಹ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ ವರೆಗೂ ಅವುಗಳ ಸಂಪೂರ್ಣ ಜವಾಬ್ದಾರಿ ಮಂಡಳಿಯವರದ್ದಾಗಿದೆ. ಇದಕ್ಕೆ ಆ ಪ್ರದೇಶದ ಜನಪ್ರತಿನಿ ಧಿಗಳು, ಹಿರಿಯರೂ ಜವಾಬ್ದಾರಿ ವಹಿಸಬೇಕು. ಲಕ್ಷ್ಮೇಶ್ವರ ಹೋಬಳಿ ವ್ಯಾಪ್ತಿಯಲ್ಲಿ 180ಕ್ಕೂ ಹೆಚ್ಚು ಮತ್ತು ಪಟ್ಟಣವೊಂದರಲ್ಲೇ 50ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ವಿಗ್ರಹಗಳು ಪ್ರತಿಷ್ಠಾಪನೆಯಾಗಲಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಮತ್ತು ಪ್ರಮುಖ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಮತ್ತು ಬೈನಾಕೂಲರ್ ವ್ಯವಸ್ಥೆ ಮಾಡಲಾಗಿದೆ. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಿತಿ ಮೀರಿ ಶಬ್ದ ಮಾಡುವ ಧ್ವನಿವರ್ಧಕಗಳಿಗೆ ಅವಕಾಶ ನೀಡುವುದಿಲ್ಲ.
ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಜಯಕ್ಕ ಕಳ್ಳಿ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಸಾತಪುತೆ ಮಾತನಾಡಿ, ಹಬ್ಬ ಹರಿದಿನಗಳು ಸಂಸ್ಕೃತಿ ಪ್ರತೀಕಗಳಾಗಿವೆ. ಶಾಂತಿ- ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಅದಕ್ಕೆ ಅಪಚಾರವಾಗದಂತೆ ಹಬ್ಬಗಳ ಮೂಲ ಉದ್ದೇಶ ಗಮನದಲ್ಲಿಟ್ಟುಕೊಂಡು ಶಿಸ್ತು, ಸಂಯಮ ಮತ್ತು ಸಾಂಪ್ರದಾಯಿಕವಾಗಿ ಆಚರಿಸಬೇಕು. ಗಣೇಶ ಮೂರ್ತಿ ವಿಸರ್ಜನೆ 9ನೇ ದಿನ ಮೊಹರಂ ಹಬ್ಬ ಇದೆ. ಅದಕ್ಕಾಗಿ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯನ್ನು 9ರ ಬದಲಾಗಿ 7 ಮತ್ತು 11ನೇ ದಿನಕ್ಕೆ ನೆರವೇರಿಸುವ ಮೂಲಕ ಸಹಕಾರ ನೀಡೋಣ. ದರ್ಗಾ ಕಮಿಟಿಯ ಸುಲೇಮಾನಸಾಬ್ ಕಣಿಕೆ ,ರಾಮಣ್ಣ ರಿತ್ತಿ ಇದ್ದರು. ಪಿಎಸ್‌ಐ ವಿಶ್ವನಾಥ ಚೌಗುಲೆ, ಸಿಬ್ಬಂದಿ ಪಿ.ಡಿ. ಮ್ಯಾಗೇರಿ ಸ್ವಾಗತಿಸಿ ನಿರೂಪಿಸಿದರು.