ಲಕ್ಷ್ಮೇಶ್ವರ: ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರಿನ ಮಳೆಗಳು ಸಂಪೂರ್ಣ ಕೈಕೊಟ್ಟಿದ್ದರಿಂದ ತಾಲೂಕಿನಲ್ಲಿನ ಎಲ್ಲ ಕೆರೆ, ಹಳ್ಳಗಳು ಬರಿದಾಗಿ ಬರಗಾಲದ ಭೀಕರತೆಯನ್ನು ಪ್ರದರ್ಶಿಸುತ್ತಿದೆ.
ತಾಲೂಕಿನಲ್ಲಿ ಜಿಪಂ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ನೂರಾರು ಎಕರೆ ವಿಸ್ತಾರದ ಅನೇಕ ಕೆರೆಗಳಿವೆ. ಆದರೆ ಇವುಗಳ ನಿರ್ಲಕ್ಷದಿಂದ ಹೂಳು ತುಂಬಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿವೆ. ಗಿಡಗಂಟಿಗಳು ಬೆಳೆದು ಇಲ್ಲಿ ಕೆರೆ ಇತ್ತೆ? ಎಂದು ಯೋಚಿಸುವ ಸ್ಥಿತಿ ನಿರ್ಮಾಣವಾಗಿವೆ.
234 ಎಕರೆ ವಿಸ್ತೀರ್ಣದ ಶೆಟ್ಟಿಕೆರೆಯು 540 ಎಕರೆ ವಿಸ್ತೀರ್ಣದ ಅಚ್ಚುಕಟ್ಟು ಪ್ರದೇಶ ಮತ್ತು 28 ಎಂಸಿಎಫ್‌ಟಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಇದಷ್ಟೇ ಅಲ್ಲದೇ ಈ ಕೆರೆಗೆ ಹೊಂದಿಕೊಂಡು ಅರಣ್ಯ ಇಲಾಖೆಗೆ ಸಂಬಂಧಿಸಿದ 200 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಕೆರೆಯ ಪ್ರದೇಶ ವ್ಯಾಪಿಸಿಕೊಂಡಿದೆ.
ಇಷ್ಟೊಂದು ವಿಸ್ತೀರ್ಣವುಳ್ಳ ಕೆರೆಯ ನೀರನ್ನು ಮೊದಲು ಸುತ್ತಲಿನ ನೂರಾರು ಎಕರೆ ಜಮೀನುಗಳ ನೀರಾವರಿಗೆ ಬಳಸಲಾಗುತ್ತಿತ್ತು. ಮೀನುಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದು ಮೀನುಗಾರಿಕೆ ಮಾಡಲಾಗುತ್ತಿದೆ. ಈ ಕೆರೆ ತುಂಬಿಕೊಂಡರೆ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳು, ಕುರಿ ಮೇಕೆ, ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುತ್ತದೆ. ಅಂತೆಯೇ ಪ್ರತಿವರ್ಷ ಚಳಿಗಾಲದಲ್ಲಿ ವಿದೇಶಿ ಪಕ್ಷಿಗಳಿಗೂ ಆತಿಥ್ಯ ನೀಡುತ್ತದೆ. ಬರಗಾಲದ ಸಂದರ್ಭಲ್ಲಿ ಕೆರೆಯ ಪ್ರದೇಶದಲ್ಲಿ ಗೋಶಾಲೆ ತೆರೆಯಲಾಗುತ್ತದೆ. ಕೆರೆಯಲ್ಲಿ ನೀರಿದ್ದರೆ ಸುತ್ತಲಿನ ಭಾಗದ ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿ ಕೆರೆಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರಗಳಿಗೂ ಆಸರೆಯಾಗುತ್ತದೆ. ಒಟ್ಟಿನಲ್ಲಿ ಈ ಕೆರೆ ಈ ಭಾಗದ ಜನರ ನಿತ್ಯದ ಬದುಕಿನ ಜೀವ ಸೆಲೆಯಾಗಿದೆ.
ಆದರೆ ಈ ಕೆರೆಯಲ್ಲಿ ನೂರಾರು ವರ್ಷಗಳಿಂದ ತುಂಬಿಕೊಂಡಿರುವ ಹೂಳನ್ನು ಒಮ್ಮೆಯೂ ತೆಗೆಯದಿರುವುದರಿಂದ ನೂರಾರು ಕೆರೆಯ ಅಚ್ಚುಕಟ್ಟು ಪ್ರದೇಶ ಹೂಳಿನಿಂದಾವೃತವಾಗಿದೆ. ಅಲ್ಲದೇ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಮರಳು, ಕಲ್ಲು ಮತ್ತು ಮಣ್ಣಿನ ದಂಧೆ ಅವ್ಯಾಹತವಾಗಿ ಸಾಗಿದ್ದರಿಂದ ಕೆರೆಗೆ ನೀರು ಹರಿದು ಬರುವ ಮಾರ್ಗಗಳು ದಿಕ್ಕು ತಪ್ಪಿವೆ. ಈ ಕೆರೆಗೊಜನೂರ, ಬಟ್ಟೂರ, ಮಾಗಡಿ 3 ಗ್ರಾಪಂ ವ್ಯಾಪ್ತಿಗೆ ಒಳಪಡುತ್ತಿದ್ದು ಪ್ರತಿವರ್ಷ ಕೆರೆಗಳ ಅಭಿವೃದ್ಧಿಗಾಗಿ ಆಯಾ ಗ್ರಾಪಂ ಮಟ್ಟದಲ್ಲಿ ಎನ್‌ಆರ್‌ಇಜಿ ಯೋಜನೆ ಮತ್ತು ಕೆರೆಗಳ ಪುನಃಶ್ಚೇತನ ಯೋಜನೆಯಡಿ ಹೂಳೆತ್ತಲು ಹಣ ತೆಗೆದಿರಿಸಲಾಗುತ್ತಿದೆ. 2018-19ನೇ ಸಾಲಿನಲ್ಲಿ ಬಟ್ಟೂರ ಗ್ರಾಪಂನಿಂದ ಕೆರೆ ಹೂಳೆತ್ತಲು 40 ಲಕ್ಷ ರೂ. ಕ್ರಿಯಾಯೋಜನೆ ಅನುಮೋದನೆ ಪಡೆದು ಅರ್ಧಂಭರ್ದ ಕಾಮಗಾರಿ ಮಾಡಿದ್ದಾರೆ. ಆದರೆ ಇದು ಕೇವಲ ಕಾಗದದ ಲೆಕ್ಕಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ತಾಲೂಕಿನಲ್ಲಿನ ಪ್ರಮುಖ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ 140 ಕೋಟಿ ರೂ ಅನುದಾನ ಬಜೆಟ್‌ನಲ್ಲಿ ಮೀಸಲಿರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದಕ್ಕೆ ಸಂಬಂಧಪಟ್ಟಂತೆ 2 ವರ್ಷದಿಂದ ಕಾಮಗಾರಿಗಳ ಪ್ರಗತಿ ಮಾತ್ರ ಕುಂಟುತ್ತಾ ಸಾಗಿದೆ. ಒಂದು ವೇಳೆ ಈ ಯೋಜನೆ ಸಾಕಾರಗೊಂಡರೂ ಮೊದಲು ಹೂಳೆತ್ತುವ ಕಾರ್ಯ ಮಾಡುವುದು ಅತಿ ಅವಶ್ಯವಾಗಿದೆ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ದೊಡ್ಡಮೊತ್ತದ ಅನುದಾನವೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಸಂಸದರು, ಅಧಿಕಾರಿಗಳು ಪûಾತೀತವಾಗಿ ಶ್ರಮಿಸಿದರೆ ಭವಿಷ್ಯದಲ್ಲಿ ಈ ಭಾಗದ ಜನರ, ಜಾನುವಾರುಗಳ ಮತ್ತು ರೈತರ ನೀರಿನ ಬವಣೆಯನ್ನು ಶಾಶ್ವತವಾಗಿ ನೀಗಿಸಬಹುದು ಎಂಬುದು ನಿತ್ಯ ಈ ಕೆರೆಯ ಪ್ರದೇಶದಲ್ಲಿ ದನಕರುಗಳನ್ನು ಮೇಯಿಸಲು ಬರುವ ಕುಂದ್ರಳ್ಳಿ ತಾಂಡಾದ ನಾಥೆಪ್ಪ ನಾಯಕ, ಅಕ್ಕಿಗುಂದ ತಾಂಡಾದ ರೈತ ರಾಮಪ್ಪ ಲಮಾಣಿ, ಮೀನುಗಾರಿಕೆ ಮಾಡುತ್ತಿದ್ದ ಶೆಟ್ಟಿಕೇರಿಯ ಕಿರಣ ಲಮಾಣಿ ಅಭಿಪ್ರಾಯವಾಗಿದೆ.
ಎಲ್ಲ ಕೆರೆಗಳು ಖಾಲಿ ಖಾಲಿ
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿನ ಕುಂದ್ರಳ್ಳಿ ಕೆರೆ 42 ಎಕರೆ, ಶೆಟ್ಟಿಕೇರೆ 237 ಎಕರೆ, ಬಾಲೆಹೊಸೂರ ಕೆರೆ 80 ಎಕರೆ, ಲಕ್ಷ್ಮೇಶ್ವರ ಕೆರೆ 32 ಎಕರೆಗಳಷ್ಟು ವಿಸ್ತಾರವಾಗಿವೆ. ಇನ್ನು ಜಿಪಂರಾ ಇಲಾಖೆಯ ವ್ಯಾಪ್ತಿಯಲ್ಲಿ ಗೋವನಾಳ, ಯಳವತ್ತಿ, ಗುಲಗಂಜಿಕೊಪ್ಪ, ಶ್ಯಾಬಳಾ, ಉಂಡೇನಹಳ್ಳಿ, ಪು. ಬಡ್ನಿ, ರಾಮಗೇರಿ, ಬಾಲೆಹೊಸೂರ, ಸೂರಣಗಿ, ಬಸಾಪುರ ಇನ್ನಿತರೆ ಗ್ರಾಮಗಳಲ್ಲಿ ಹತ್ತಾರು ಎಕರೆಗಳಷ್ಟು ವಿಸ್ತಾರವುಳ್ಳ ಕೆರೆಗಳಿವೆ. ಇವುಗಳೆಲ್ಲ ಬರಿದಾಗಿವೆ.