ಲಕ್ಷ್ಮೇಶ್ವರ: ಅಂತರ್ಜಲಮಟ್ಟ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಹಳ್ಳಗಳಿಗೆ ಅಲ್ಲಲ್ಲಿ ಬಾಂದಾರಗಳನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಬಾಂದಾರಗಳು ಹೂಳು ತುಂಬಿದ್ದರಿಂದ ಒಡೆದು ನೀರು ನಿಲ್ಲದಂತಾಗಿವೆ. ಇನ್ನು ಕೆಲವು ಬತ್ತಿ ಬರಡಾಗಿವೆ. ಇದರಿಂದ ಸರ್ಕಾರದ ಉದ್ದೇಶವೂ ಈಡೇರದೆ ಲಕ್ಷಾಂತರ ರೂ. ಹಳ್ಳದ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಹೌದು, ತಾಲೂಕಿನಾದ್ಯಂತ ಕಳೆದ 5 ವರ್ಷಗಳ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 57, ಕೃಷಿ ಇಲಾಖೆ ವತಿಯಿಂದ 22 ಬಾಂದಾರಗಳನ್ನು ನಿರ್ಮಿಸಲಾಗಿದೆ. ಜಿಪಂ ವತಿಯಿಂದ 190 ಬಾಂದಾರಗಳನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ 20 ಬಾಂದಾರ ಪೂರ್ಣಗೊಂಡಿವೆ. ಉಳಿದ 170 ಬಾಂದಾರಗಳು ಪ್ರಗತಿ ಹಂತದಲ್ಲಿವೆ. ತಾಲೂಕಿನ ಬಟ್ಟೂರ, ಬಡ್ನಿ, ದೊಡ್ಡೂರು, ತಾರಿಕೊಪ್ಪ, ಆದ್ರಳ್ಳಿ, ಶ್ಯಾಬಳ, ಉಂಡೇನಹಳ್ಳಿ, ಆದ್ರಳ್ಳಿ, ಯಳವತ್ತಿ, ಮಾಡಳ್ಳಿ, ಸೂರಣಗಿ ಅನೇಕ ಕಡೆ ಹಳ್ಳಗಳಲ್ಲಿ ಬಾಂದಾರ ನಿರ್ಮಿಸಲಾಗಿದೆ.
ಮುಖ್ಯವಾಗಿ ಸಣ್ಣ ನೀರಾವರಿ ಇಲಾಖೆಯಿಂದಲೇ ಲಕ್ಷ್ಮೇಶ್ವರ ತಾಲೂಕಿನ ಗೊಜನೂರಿನಿಂದ ಸಂಕದಾಳ ವರೆಗಿನ ದೊಡ್ಡ ಹಳ್ಳಕ್ಕೆ 12 ಕೋಟಿ ರೂ. ವೆಚ್ಚದಲ್ಲಿ 18 ಸರಣಿ ಬಾಂದಾರ ನಿರ್ಮಿಸಲಾಗಿದೆ. ಇದರಲ್ಲಿ ಕಳೆದ ವರ್ಷ ಮುಂಗಾರಿನ ರಭಸದ ಮಳೆಗೆ ಕೆಲವು ಕೊಚ್ಚಿಕೊಂಡು ಹೋಗಿದ್ದವು. ಇವುಗಳಲ್ಲಿ ಕೆಲವೊಂದಿಷ್ಟು ಬಾಂದಾರಗಳನ್ನು ದುರಸ್ತಿ ಮಾಡಲಾಗಿದೆ. ಇನ್ನು ಕೆಲವು ಹಾಗೆಯೇ ಉಳಿದಿವೆ. ಮತ್ತೆ ಕೆಲವನ್ನು ಆಯಾ ಗ್ರಾಪಂ ವ್ಯಾಪ್ತಿಯವರು ಎನ್‌ಆರ್‌ಇಜಿಯಲ್ಲಿ ದುರಸ್ತಿ ಮಾಡಿಸುತ್ತಿದ್ದಾರೆ.
ಆದರೆ, ಈಗ ಈ ಎಲ್ಲ ಬಾಂದಾರಗಳಲ್ಲಿ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ನೀರಾವರಿ ಇಲಾಖೆಯವರು ಬಾಂದಾರ ನಿರ್ಮಿಸಲಕ್ಕೆ ಮಾತ್ರ ಸೀಮಿತವಾಗಿದ್ದು, ಅವುಗಳಲ್ಲಿನ ಹೂಳು ಮತ್ತು ದುರಸ್ತಿ ಮಾಡಿಸುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಕೆಲ ಗ್ರಾಪಂಗಳು ನರೇಗಾದಲ್ಲಿ ಅಲ್ಪಸ್ವಲ್ಪ ಹಣ ಮೀಸಲಿರಿಸಿದ್ದರೂ ಇದು ಕೇವಲ ದಾಖಲೆಗೆ ಮಾತ್ರ ಸೀಮಿತವಾಗಿದೆ.
‘ಬಾಂದಾರ ನಿರ್ಮಾಣ ಸಂದರ್ಭದಲ್ಲಿ ಈ ಯೋಜನೆಯಿಂದ ನಿಮಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಹೇಳಿ ಅಲ್ಪಸ್ವಲ್ಪ ಜಮೀನುಗಳನ್ನು ಒತ್ತುವರಿ ಮಾಡಿದ್ದರು. ಆದರೆ ಈಗ ಈ ಬಾಂದಾರದಲ್ಲಿ ಹೂಳು, ಕಸಕಡ್ಡಿ ತುಂಬಿ ಹನಿ ನೀರು ನಿಲ್ಲದಂತಾಗಿದೆ. ಸಂಬಂಧಪಟ್ಟವರಿಗೆ ಅನೇಕ ಬಾರಿ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವ ಪುರುಷಾರ್ಥಕ್ಕೆ ಈ ಬಾಂದಾರ ನಿರ್ಮಿಸಿದ್ದಾರೂ ಳಿಯದಂತಾಗಿದೆ ಎಂದು ಬಟ್ಟೂರ ಗ್ರಾಮದ ರೈತ ನಿಂಗಪ್ಪ ಹರಿಜನ ಮತ್ತು ಸಂಕದಾಳ ಗ್ರಾಮದ ಹಾಲಪ್ಪ ಸೂರಣಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವೇನೂ ಬಾಂದಾರ ನಿರ್ಮಾಣಕ್ಕೆ ಕೋಟಿ-ಕೋಟಿ ಹಣವನ್ನು ವಿನಿಯೋಗಿಸಿದ್ದರೂ ಸಾರ್ಥಕತೆ ಮಾತ್ರ ಶೂನ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳ ಮುಖಾಂತರ ಮಳೆಗಾಲ ಆರಂಭವಾಗುವುದರೊಳಗೆ ಬಾಂದಾರಗಳಲ್ಲಿನ ಹೂಳೆತ್ತಬೇಕು. ಇದರಿಂದ ಬಾಂದಾರಗಳಲ್ಲಿ ಹೆಚ್ಚು ನೀರು ಸಂಗ್ರಹಗೊಂಡು ಅಂತರ್ಜಲಮಟ್ಟ ಹೆಚ್ಚಲು ಸಹಕಾರಿ ಆಗುತ್ತಿದೆ. ಜತೆಗೆ ಈ ಭಾಗದ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ.
ಬಾಂದಾರಗಳು ಹೂಳು ತುಂಬಿರುವ ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಪಂ ಪಿಡಿಒಗಳಿಗೆ ಈಗಾಗಲೇ ಎನ್‌ಆರ್‌ಇಜಿ ಯೋಜನೆಯಡಿ ಹೂಳು ತೆಗೆಯುವ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅದರಂತೆ ಬಟ್ಟೂರ ಗ್ರಾಪದಿಂದ ಹೂಳೆತ್ತುವ ಕಾರ್ಯದ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಒಟ್ಟಿನಲ್ಲಿ ಬಾಂದಾರ ಮತ್ತು ಕೆರೆ ಹೂಳೆತ್ತುವ ಕಾರ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.
ಆರ್.ವೈ. ಗುರಿಕಾರ, ತಾಪಂ ಇಒ