ಲಕ್ಷ್ಮೇಶ್ವರ: ಕೃಷಿಯಲ್ಲೇ ಖುಷಿ ಕಾಣುತ್ತಿರುವ ತಾಲೂಕಿನ ಮಂಜಲಾಪುರ ಗ್ರಾಮದ ಪ್ರಗತಿಪರ ರೈತ ಬಸವರಾಜ ಆದಿ ಅವರು ಪ್ಲಾಸ್ಟಿಕ್ ಮಲ್ಚಿಂಗ್ ಪ್ರಯೋಗದ ಮೂಲಕ ಬೆಳೆದ ಕಲ್ಲಂಗಡಿಯಿಂದ ಎರಡೇ ತಿಂಗಳಲ್ಲಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ತಮ್ಮ 3 ಎಕರೆ ಜಮೀನಿನಲ್ಲಿ ಪ್ಲಾಸ್ಟಿಕ್ ಮಲ್ಚಿಂಗ್ ಮತ್ತು ಹನಿ ನೀರಾವರಿ ಮೂಲಕ ವಿರಾಟ್ ತಳಿಯ ಕಲ್ಲಂಗಡಿ ಸಸಿ ತಂದು ಬೆಳೆಸಿದ್ದರು. ಒಂದು ಬಳ್ಳಿಗೆ ಕೇವಲ 2 ಹಣ್ಣು ಮಾತ್ರ ಬಿಡುವ ಈ ತಳಿ 55 ರಿಂದ 60 ದಿನಕ್ಕೆ ಫಲ ಬರುತ್ತದೆ. ನವಂಬರ್ ತಿಂಗಳಲ್ಲಿ ಬೆಳೆದ ಬೆಳೆಯಿಂದ 60 ಟನ್ ಫಸಲು ಮಾರಾಟ ಮಾಡಲಾಗಿದೆ. ರುಚಿಕರವಾದ ಒಂದು ಹಣ್ಣು ನಾಲ್ಕೈದು ಕೆಜಿ ಇರುತ್ತದೆ. ಪ್ರತಿ ಕೆಜಿಗೆ 12 ರೂ. ನಂತೆ 40 ಟನ್ ಮತ್ತು 8 ರೂ. ನಂತೆ 20 ಟನ್ ಇಳುವರಿ ಬಂದಿದ್ದು, ಇದರ ಮಾರಾಟದಿಂದ 5.65 ಲಕ್ಷ ರೂ. ಆದಾಯವಾಗಿದೆ. ಇದರಲ್ಲಿ ಮಲ್ಚಿಂಗ್, ನಿರ್ವಹಣೆ, ಆಳು, ಸಾಗಾಟ ಖರ್ಚು-ವೆಚ್ಚ ಕಳೆದು 3 ಲಕ್ಷ ರೂ. ಲಾಭ ಬಂದಿದೆ.
ಮಿಶ್ರ ಬೆಳೆ ಮೆಣಸಿಕಾಯಿ: ಪ್ಲಾಸ್ಟಿಕ್ ಮಲ್ಚಿಂಗ್ ಕಾಲಾವಧಿ 6 ತಿಂಗಳಿರುತ್ತದೆ. ಮಲ್ಚಿಂಗ್ ಬೇಸಾಯದಿಂದ ನೀರಿನ ಮಿತ ಬಳಕೆ ಜತೆಗೆ ಕಳೆ, ಕೀಟ ನಿರ್ವಹಣೆ ವೆಚ್ಚವೂ ಅತ್ಯಂತ ಕಡಿಮೆ ಇರುತ್ತದೆ. ಕಲ್ಲಂಗಡಿ ಬೆಳೆದ 1 ತಿಂಗಳಲ್ಲಿ ಮಿಶ್ರ ಬೆಳೆಯಾಗಿ ಮೆಣಸಿನಕಾಯಿ ಬೆಳೆಯಲಾಗಿದೆ. ಒಟ್ಟು 13 ಸಾವಿರ ಮೆಣಸಿನಕಾಯಿ ಸಸಿ ಬೆಳೆಯಲಾಗಿದ್ದು, ಕನಿಷ್ಟ ಆದಾಯದ ಲೆಕ್ಕಾಚಾರದಿಂದ 2 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಇನ್ನೊಂದು ವಾರದಲ್ಲಿ ಮೆಣಸಿನಕಾಯಿ ಫಸಲು ಪ್ರಾರಂಭವಾಗುತ್ತದೆ. ಹೀರೆ-ಹಾಗಲ ಬೆಳೆಯಲು ಸಿದ್ಧತೆ: ಈಗಾಗಲೇ ಕಲ್ಲಂಗಡಿ ಬಳ್ಳಿ ತೆರವುಗೊಳಿಸಿ ಭೂಮಿಯನ್ನು ಸ್ವಚ್ಛ ಮಾಡಲಾಗಿದೆ. ಈ ಜಾಗದ ಅರ್ಧ ಜಮೀನಿನಲ್ಲಿ ಹಾಗಲ, ಇನ್ನರ್ಧ ಜಾಗದಲ್ಲಿ ಹೀರೆಕಾಯಿ ಬಳ್ಳಿ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಂದೂವರೆ ತಿಂಗಳಲ್ಲಿ ಹೀರೆಕಾಯಿ ಫಸಲು ಪ್ರಾರಂಭವಾಗುತ್ತದೆ. ನಂತರ ಹಾಗಲ ಬೆಳೆ ಬರುತ್ತದೆ. ಒಟ್ಟಿನಲ್ಲಿ ಮಲ್ಚಿಂಗ್ ಕೃಷಿ ಪದ್ಧತಿಯಿಂದ ಕಡಿಮೆ ಅವಧಿಯಲ್ಲಿ ಮಿಶ್ರ ಬೆಳೆ ಬೆಳೆದು ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳುತ್ತಿರುವ ರೈತ ಬಸವರಾಜ ಆದಿ ಇತರರಿಗೆ ಪ್ರೇರಣೆಯಾಗಿದ್ದಾರೆ.
ನೀರಾವರಿ ಜಮೀನಿನಲ್ಲಿ ವರ್ಷಕ್ಕೆ 2 ಬೆಳೆಯಂತೆ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದ ನಮಗೆ ಅಷ್ಟೊಂದು ಲಾಭ
ಸಿಗುತ್ತಿರಲಿಲ್ಲ. ಇದೀಗ ಪ್ಲಾಸ್ಟಿಕ್ ಮಲ್ಚಿಂಗ್ ಪದ್ಧತಿಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡುವ ಕಲ್ಲಂಗಡಿ ಜತೆಗೆ ಮಿಶ್ರ ಬೆಳೆಯಾಗಿ ತರಕಾರಿ ಬೆಳೆಯುತ್ತಿರುವುದು ಖುಷಿ ತಂದಿದೆ. ಬಹಳಷ್ಟು ಕಾಳಜಿ, ಸಕಾಲಿಕ ಪೋಷಣೆಯೊಂದಿಗೆ ಈ ಬೆಳೆ ಬೆಳೆಯಲು ಯುವ ರೈತ ಅಜಿತ ಪಾಟೀಲ ಅವರ ಸಹಕಾರ, ಮಾರ್ಗದರ್ಶನ ಸಹಾಯಕವಾಗಿದೆ.
ಬಸವರಾಜ ಆದಿ