Advertisement

ಲಕ್ಷ್ಮಣ ಸವದಿ ಕಾಯಂ ಡಿಸಿಎಂ: ಸಿಎಂ

09:55 AM Nov 25, 2019 | Lakshmi GovindaRaj |

ಅಥಣಿ: ಅಥಣಿಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಲಕ್ಷ್ಮಣ ಸವದಿ ಅವರ ಉಪಮುಖ್ಯಮಂತ್ರಿ ಸ್ಥಾನ ಕಾಯಂ ಮುಂದುವರಿಸುವ ಜೊತೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನೂ ನೀಡಲಾಗುವುದು. ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದು ಟೀಕಾಕಾರರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಸ್ಥಳೀಯ ಜೆ.ಎ. ಪದವಿ ಪೂರ್ವ ಮಹಾವಿದ್ಯಾಲಯ ದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಹೇಶ ಕುಮಟಳ್ಳಿ ಸೇರಿ 17 ಜನ ಶಾಸಕರ ತ್ಯಾಗದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿ ತತ್ವ ಹಾಗೂ ಸಿದ್ಧಾಂತ ನಂಬಿ ಪಕ್ಷಕ್ಕೆ ಬಂದಿದ್ದರಿಂದ ಅವರಿಗೆ ಯಾವುದೇ ಮೋಸವಾಗದಂತೆ ಎಲ್ಲರಿಗೂ ನ್ಯಾಯ ದೊರಕಿಸುವುದು ನಮ್ಮ ಕರ್ತವ್ಯ. ಮುಂದೆ ಅಥಣಿ ಯಿಂದ ಇಬ್ಬರು ಮಂತ್ರಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.

ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿ ಮುಂದುವರಿ ಯಲಿದ್ದಾರೆ. ಮಹೇಶ ಕುಮಟಳ್ಳಿ ಅವರಿಗೂ ಮಂತ್ರಿ ಸ್ಥಾನ ನೀಡಲಾಗುವುದು. ಇದು ಅಥಣಿ ಕ್ಷೇತ್ರದ ಇತಿಹಾ ಸದಲ್ಲಿ ಸಾರ್ವಕಾಲಿಕ ದಾಖಲೆಯಾಗಲಿದೆ ಎಂದರು. ಅಥಣಿ ತಾಲೂಕಿನ ಜ್ವಲಂತ ಸಮಸ್ಯೆಗಳಾದ ಸವಳು ಜವಳು, ಪ್ರವಾಹ ನಿರಾಶ್ರಿತರಿಗೆ ಪರಿಹಾರ, ಪೂರ್ವ ಭಾಗದ 7 ಹಳ್ಳಿಗಳ ಕೊಟ್ಟಲಗಿ ಏತ ನೀರಾವರಿ ಯೋಜನೆ, ಹಿಪ್ಪರಗಿ ಏತ ನೀರಾವರಿ ಯೋಜನೆ,

ಜನವಾಡ, ಹುಲಗಬಾಳಿ, ರಾಮವಾಡಿ ಮತ್ತು ಕರ್ಲಟ್ಟಿ ಸೇರಿ ಮುಳುಗಡೆಯಾದ ಗ್ರಾಮಗಳ ಸಂಪೂರ್ಣ ಸ್ಥಳಾಂತರ, ಮೂಲ ಸೌಲಭ್ಯ ಒಳಗೊಂಡ ಸುಸಜ್ಜಿತ ಕಾಲೋನಿ ನಿರ್ಮಾಣ ಮಾಡಿ ಕೊಡುವುದಾಗಿ ಇದೇ ವೇಳೆ ಸಿಎಂ ಭರವಸೆ ನೀಡಿದರು. ಲಕ್ಷ್ಮಣ ಸವದಿ ಹಾಗೂ ಕುಮಟಳ್ಳಿ ಜೊತೆಗೂಡಿ ಪ್ರಚಾರ ಕೈಗೊಳ್ಳುವ ಮೂಲಕ ದಿಗ್ವಿಜಯ ಸಾಧಿಸಲಿದ್ದಾರೆ. ಇದು ಕುಮಟಳ್ಳಿ ಚುನಾವಣೆಯಲ್ಲ. ಇದು ಲಕ್ಷ್ಮಣ ಸವದಿ ಹಾಗೂ ಯಡಿಯೂರಪ್ಪ ಚುನಾವಣೆ.

ಬಿಜೆಪಿ ಗೆಲುವಿಗೆ ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಚುನಾವಣೆಯಲ್ಲಿ ಗೆಲುವು ಸಾ ಧಿಸಿದ ಬಳಿಕ ನೆರೆ ಸ್ಥಳಕ್ಕೆ ನೇರವಾಗಿ ಬಂದು ಅಲ್ಲಿಯೇ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಅಥಣಿ ಕಾಂಗ್ರೆಸ್‌ ಪ್ರಮುಖ ಮುಖಂಡ ಹಾಗೂ ಮೂರು ಬಾರಿ ಕಾಗವಾಡ, ಅಥಣಿ ವಿಧಾನಸಭೆಗೆ ಕಾಂಗ್ರೆಸ್‌ ಪಕ್ಷದಿಂದ ಸ್ಪ ರ್ಧಿಸಿದ್ದ ಕಿರಣಗೌಡ ಪಾಟೀಲ ಹಾಗೂ ಅವರ ಅಭಿಮಾನಿಗಳು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

Advertisement

ಗೆದ್ದ ಎಲ್ಲ ಶಾಸಕರಿಗೂ ಮಂತ್ರಿ ಭಾಗ್ಯ
ಬೆಳಗಾವಿ: ಬಿಜೆಪಿ ಅಧಿ ಕಾರಕ್ಕೆ ಬರಲು ಶ್ರಮಿಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಗೆದ್ದು ಬರುವ ಶಾಸಕರಿಗೆ ಮಂತ್ರಿ ಭಾಗ್ಯ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಕಾಗವಾಡ ಕ್ಷೇತ್ರದ ಶಿರಗುಪ್ಪಿಯಲ್ಲಿ ಶನಿವಾರ ನಡೆದ ಬಿಜೆಪಿ ಸಮಾವೇಶ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಶಾಸಕರು ರಾಜೀನಾಮೆ ನೀಡಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದೇನೆ. ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಅವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು. ಎಲ್ಲರನ್ನೂ ಮಂತ್ರಿ ಮಾಡಲಾಗುವುದು ಎಂದರು.

ವೀರಶೈವ ಮತ ಬಿಜೆಪಿ ಬಿಟ್ಟು ಹೋಗಬಾರದು: ಬಳಿಕ ಕಾಗವಾಡ ತಾಲೂಕಿನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಅಥಣಿ ಹಾಗೂ ಕಾಗವಾಡ ಮತ ಕ್ಷೇತ್ರಗಳ ವೀರಶೈವ ಮತಗಳು ಬಿಜೆಪಿ ಬಿಟ್ಟು ಹೋಗಬಾರದು. ಎಲ್ಲರೂ ಬಿಜೆಪಿ ಬೆಂಬಲಿಸಬೇಕು. ವೀರಶೈವ ಮತಗಳು ಯಾವುದೇ ಕಾರಣಕ್ಕೂ ಬೇರೆ ಕಡೆಗೆ ಹೋಗಬಾರದು. ಬಿಜೆಪಿಯನ್ನು ಬೆಂಬಲಿಸಿ ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಎಲ್ಲರೂ ಬೆಂಬಲಕ್ಕೆ ನಿಲ್ಲಬೇಕು ಎಂದರು.

“ಎಚ್ಡಿಕೆಗೆ ನೊಬೆಲ್‌ ಪ್ರಶಸ್ತಿ ಕೊಡಲೇಬೇಕು’
ಅಥಣಿ: ಲೋಕಸಭಾ ಚುಣಾವಣೆಯಲ್ಲಿ ಸ್ವಂತ ಅಪ್ಪ ದೇವೇಗೌಡ ಹಾಗೂ ಮಗ ನಿಖೀಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲಾಗದ ಎಚ್‌.ಡಿ. ಕುಮಾರಸ್ವಾಮಿ ಅನರ್ಹ ಶಾಸಕರನ್ನು ಹೇಗೆ ಸೋಲಿಸುತ್ತಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸ್ತೀನಿ ಎಂದು ಶಪಥ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೊಬೆಲ್‌ ಪ್ರಶಸ್ತಿ ಕೊಡಲೇಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ಳೋದೆಲ್ಲ ಸುಳ್ಳು.

ಅವರು ಹೇಳಿದ್ದು ಯಾವತ್ತೂ ನಿಜವಾಗಿಲ್ಲ ಎಂದರು. ಸಿದ್ದರಾಮಯ್ಯ ಅವರಿಗೆ ಬೇಕಾದ ಅಭ್ಯರ್ಥಿಗಳನ್ನು ಉಪಚುನಾವಣೆಗೆ ನಿಲ್ಲಿಸಿರುವುದರಿಂದ ಮೂಲ ಕಾಂಗ್ರೆಸ್‌ನವರಾದ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಜಮೀರ ಅಹ್ಮದ್‌, ಎಚ್‌.ಮುನಿಯಪ್ಪ, ಡಿ.ಕೆ.ಶಿವಕುಮಾರ ಸೇರಿ ಅನೇಕರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ಕೇವಲ ಸಿದ್ದರಾಮಯ್ಯ ಒಬ್ಬರೇ ಉಪಚುನಾವಣೆ ಎದುರಿಸುತ್ತಾ ಒಬ್ಬಂಟಿ ಆಗಿದ್ದಾರೆ ಎಂದರು.

ಅಭ್ಯರ್ಥಿ ಗೆಲ್ಲಿಸಿ ವಿಧಾನಸಭೆ ಮೆಟ್ಟಿಲೇರುತ್ತೇನೆ – ಸವದಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಪಕ್ಷಕ್ಕಾಗಿ ನಾನು ಯಾವ ತ್ಯಾಗಕ್ಕಾದರೂ ಸಿದ್ಧನಿದ್ದೇನೆ. ಮಹೇಶ ಕುಮಟಳ್ಳಿ ಅಭ್ಯರ್ಥಿ ಆಗಿರುವುದು ಲಕ್ಷ್ಮಣ ಸವದಿ ಒಪ್ಪಿಗೆ ಮೇರೆಗೆ ಮಾತ್ರ. ಬೇರೆ ಪಕ್ಷದಲ್ಲಿ ಸೋತರೆ ಮೂಲೆ ಗುಂಪು ಮಾಡುತ್ತಾರೆ. ಆದರೆ ಬಿಜೆಪಿಯಲ್ಲಿ ನನಗೆ ಎಲ್ಲ ಸ್ಥಾನಮಾನ ಕೊಟ್ಟು ಗೌರವಿಸಿದ್ದಾರೆ. ಸೋತವನಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ಬಿಜೆಪಿ ಹಿರಿಮೆ. ಅಥಣಿ ಶಿವಯೋಗಿಗಳ ಆಣೆ ಮಾಡಿ ಹೇಳುತ್ತೇನೆ. ಕಾಗವಾಡ ಮತ್ತು ಅಥಣಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನನ್ನ ಹೆಗಲ ಮೇಲೆ ಹೊತ್ತುಕೊಂಡು ವಿಧಾನಸಭೆ ಮೆಟ್ಟಿಲೇರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next