Advertisement
ರಾಜ್ಯದವರೇ ಆದ ಲಕ್ಷ್ಮಮ್ಮ ಅವರನ್ನು ಆಂಧ್ರಕ್ಕೆ ಮದುವೆ ಮಾಡಿಕೊಡಲಾಗಿತ್ತು. 25 ವರ್ಷಗಳ ಹಿಂದೆ ಪಾವಗಡಕ್ಕೆ ಬಂದ ಲಕ್ಷ್ಮಮ್ಮ, ತನ್ನ ಜೀವನ ಆಧಾರಕ್ಕೆ ಆಯ್ದುಕೊಂಡಿದ್ದು, ಹೋಟೆಲ್ ಮಾಡೋದು. ಪಟ್ಟಣದ ತಾಲೂಕು ಕಚೇರಿ ಮುಂದೆ ಒಂದು ಪೆಟ್ಟಿಗೆ ಅಂಗಡಿಗೆ ಚಪ್ಪರ ಹಾಕಿಕೊಂಡು ಜನರ ಅಭಿರುಚಿಗೆ ತಕ್ಕಂತೆ ಇಡ್ಲಿ, ಚಿತ್ರನ್ನಾ ಸೇರಿದಂತೆ ನಾಲ್ಕೈದು ತಿಂಡಿಗಳೊಂದಿಗೆ ಹೋಟೆಲ್ ಆರಂಭಿಸಿದ್ದರು. ಮೂರು ವರ್ಷಗಳ ಹಿಂದೆ ಪಟ್ಟಣ ಬಸ್ ನಿಲ್ದಾಣ ಸ್ವಲ್ಪ ದೂರದ ರೊಪ್ಪದಲ್ಲಿ ಒಂದು ಸಿಮೆಂಟ್ ಇಟ್ಟಿಗೆಯಿಂದ ಗೋಡೆ ಕಟ್ಟಿಕೊಂಡು ಅದಕ್ಕೆ ಶೀಟು ಹಾಕಿ ಹೋಟೆಲ್ ನಡೆಸುತ್ತಿದ್ದಾರೆ. ಇವರಿಗೆ ಮಗಳು ಮತ್ತು ಅಳಿಯ ಸಾಥ್ ನೀಡುತ್ತಿದ್ದಾರೆ.
ಹಳ್ಳಿಗಳಲ್ಲೂ ಈಗ ಅಡುಗೆ ಅನಿಲ ಬಳಸುತ್ತಿದ್ದಾರೆ. ಇಂತಹದರಲ್ಲಿ ಲಕ್ಷ್ಮಮ್ಮ ಇಂದಿಗೂ ಸೌದೆ ಒಲೆಯಲ್ಲೇ ತಿಂಡಿ, ಅಡುಗೆ ಮಾಡುತ್ತಾರೆ. ಹೋಟೆಲ್‌ಗೆ ಎಷ್ಟೇ ಜನ ಬಂದರೂ ಒಲೆಯಲ್ಲೇ ಆಹಾರ ಬೇಯಿಸಿ ಕೊಡುತ್ತಾರೆ. ಹೀಗಾಗಿ ಆಹಾರವೂ ಮನೆಯಲ್ಲೇ ಮಾಡಿದ ಊಟದ ಥರಾನೇ ಇರುತ್ತದೆ ಎಂಬುದು ಗ್ರಾಹಕರ ಮಾತು. ತಿಂಡಿಗೆ ಶೇಂಗಾ ಚಟ್ನಿಯೇ ರುಚಿ:
ಹೋಟೆಲ್‌ನಲ್ಲಿ ಬೆಳಗ್ಗೆ ಇಡ್ಲಿ, ಟೊಮೆಟೋ ಬಾತ್, ಚಿತ್ರಾನ್ನ ಹೀಗೆ ನಾಲ್ಕೈದು ತಿಂಡಿಗಳನ್ನು ಮಾಡಲಾಗುತ್ತದೆ. ಇದರ ಜತೆ ಕೊಡುವ ಶೇಂಗಾ ಚಟ್ನಿ, ಸಾಂಬರ್ ರುಚಿ ಹೆಚ್ಚಿಸುತ್ತದೆ. ದರ ಮಾತ್ರ ಅರ್ಧ ಪ್ಲೇಟ್ ತೆಗೆದುಕೊಂಡರೆ 20 ರೂ., ಫುಲ್ ಆದ್ರೆ 30 ರೂ.
Related Articles
ಲಕ್ಷ್ಮಮ್ಮ ಹೋಟೆಲ್‌ನ ವಿಶೇಷತೆ ಮುದ್ದೆ ಊಟ, ಬದನೆಕಾಯಿ ಪಲ್ಯ. 30 ರೂ. ಕೊಟ್ರೆ ಹೊಟ್ಟೆ ತುಂಬಾ ಮುದ್ದೆ ಊಟ ಮಾಡಬಹುದು. ಮುದ್ದೆ ಜತೆ ಬದನೆಕಾಯಿ ಬಜ್ಜಿ, ಬೇಳೆ (ಪಪ್ಪು), ಸಾಂಬಾರ್, ರಸಂ, ಮಜ್ಜಿಗೆ ಇರುತ್ತದೆ.
ಹಳ್ಳಿಯ ಮನೆಯಂತೆ ಇರುವ ಲಕ್ಷ್ಮಮ್ಮರ ಹೋಟೆಲ್‌ಗೆ ಸ್ಥಳೀಯ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಕೂಲಿ ಕಾರ್ಮಿಕರು ಹೆಚ್ಚಾಗಿ ಭೇಟಿ ನೀಡುತ್ತಾರೆ.
Advertisement
ಹೋಟೆಲ್ ಸಮಯ:ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 4ಗಂಟೆವರೆಗೆ, ಭಾನುವಾರ ಮಧ್ಯಾಹ್ನದವರೆಗೆ ಹೋಟೆಲ್ ತೆರೆದಿರುತ್ತದೆ. ಹೋಟೆಲ್ ವಿಳಾಸ:
ಹೋಟೆಲ್‌ಗೆ ಯಾವುದೇ ನಾಮಫಲಕ ಇಲ್ಲದಿದ್ದರೂ ಲಕ್ಷ್ಮಮ್ಮ ಹೋಟೆಲ್ ಎಲ್ಲಿದೆ ಅಂದ್ರೆ ದಾರಿ ತೋರಿಸುತ್ತಾರೆ. ರೊಪ್ಪದಲ್ಲಿರುವ ಮಾರಮ್ಮನ ದೇವಸ್ಥಾನದ ಸಮೀಪ, ಟೀಚರ್ಸ್ ಕಾಲೋನಿ ರಸ್ತೆಯಲ್ಲಿ ಈ ಹೋಟೆಲ್ ಇದೆ.
– ಭೋಗೇಶ ಆರ್. ಮೇಲುಕುಂಟೆ
ಫೋಟೋ ಕೃಪೆ: ಆರ್.ಸಂತೋಷ್‌ಕುಮಾರ್