Advertisement
2018ರ ಚುನಾವಣೆಯಿಂದಲೂ ರಮೇಶ್ ಜಾರಕಿಹೊಳಿ ಅವರೇ ನನ್ನ ರಾಜಕೀಯ ಗುರು ಎಂದು ಹೇಳಿಕೊಂಡೇ ಬಂದಿದ್ದ ಹಾಲಿ ಶಾಸಕ ಮಹೇಶ ಕುಮಟಳ್ಳಿ ಮತ್ತೂಮ್ಮೆ ಗುರುಗಳ ಕೃಪಾ ಕಟಾಕ್ಷದಿಂದ ಟಿಕೆಟ್ ಪಡೆಯುವ ಸನಿಹದಲ್ಲಿದ್ದಾರೆ. ತಮ್ಮನ್ನೇ ಸಂಪೂರ್ಣ ನಂಬಿಕೊಂಡಿದ್ದ ಮಹೇಶ ಕುಮಟಳ್ಳಿ ಅವರನ್ನು ರಮೇಶ್ ಕೈಬಿಟ್ಟಿಲ್ಲ. ಈ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಮಹೇಶ ಕುಮಟಳ್ಳಿ ಚುನಾವಣೆಯ ಒಂದು ಹಂತವನ್ನು ಯಶಸ್ವಿಯಾಗಿ ಗೆದ್ದಿದ್ದಾರೆ ಎಂದರೆ ತಪ್ಪಿಲ್ಲ.
Related Articles
Advertisement
ಸವದಿ, ರಮೇಶ್ ತಿಕ್ಕಾಟಕ್ಕೆ ಕಾರಣ ಏನು?ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಕೊಡಬಾರದು ಎಂಬುದಕ್ಕೆ ಡಿಸಿಸಿ ಬ್ಯಾಂಕ್ ರಾಜಕಾರಣ, ಇನ್ನೊಂದು ಕ್ಷೇತ್ರದಲ್ಲಿ ಹಸ್ತಕ್ಷೇಪ ಸಹಿತ ಒಂದೆರಡು ಬಲವಾದ ಕಾರಣಗಳಿದ್ದವು. ಕಳೆದ ಚುನಾವಣೆ ಸಂದರ್ಭದಲ್ಲಿ ಲಕ್ಷ್ಮಣ್ ಸವದಿ ಗೋಕಾಕ್‌ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ಮಾಡಿ ಜಾರಕಿಹೊಳಿ ಸಹೋದರರ ವಿರುದ್ಧ ಹರಿ ಹಾಯ್ದಿದ್ದರು. ಚುನಾವಣೆ ಬಳಿಕವೂ ಸವದಿ ಗೋಕಾಕ್ ಕ್ಷೇತ್ರದಲ್ಲಿ ತಮ್ಮ ಹಸ್ತಕ್ಷೇಪ ಬಿಟ್ಟಿರಲಿಲ್ಲ. ಅವಕಾಶ ಸಿಕ್ಕಾಗಲೊಮ್ಮೆ ಗೋಕಾಕ್ ಕ್ಷೇತ್ರ, ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಲೇ ಬಂದಿದ್ದರು ಎಂಬ ಆರೋಪಗಳು ಬಂದಿದ್ದವು. ಈ ಸಿಟ್ಟು ಜಾರಕಿಹೊಳಿ ಸಹೋದರರ ಮನಸ್ಸಿನಲ್ಲಿ ಬಲವಾಗಿ ಬೇರೂರಿತ್ತು. ಅದರ ಫಲ ಈಗ ಟಿಕೆಟ್ ಕೈತಪ್ಪುವ ಮೂಲಕ ಬಂದಿದೆ. ಇನ್ನೊಂದು ಕಡೆ ಈಗ ಸವದಿ ಹೇಗೂ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇನ್ನೂ ಐದು ವರ್ಷ ಅವಧಿ ಇದೆ. ಹೀಗಿರುವಾಗ ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಶ ಕುಮಟಳ್ಳಿಗೆ ಅವಕಾಶ ಕೊಡಬೇಕು ಎಂಬುದು ರಮೇಶ್ ಜಾರಕಿಹೊಳಿ ವಾದವಾಗಿತ್ತು. ಇದೇ ವಾದಕ್ಕೆ ವರಿಷ್ಠರ ಮನ್ನಣೆ ಸಿಕ್ಕಿದೆ. ನಾಳೆ ಬೆಂಬಲಿಗರ ಸಭೆಯಲ್ಲಿ ನಿರ್ಧಾರ
ವಿಧಾನ ಪರಿಷತ್ ಸದಸ್ಯರಾಗಿರುವ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಆಲೋಚನೆ ಮಾಡಲಿಕ್ಕಿಲ್ಲ. ಆದರೆ ರಾಜಕೀಯದಲ್ಲಿ ನಿರೀಕ್ಷೆಯಂತೆ ನಡೆಯುವ ಪ್ರಸಂಗಗಳು ಬಹಳ ಕಡಿಮೆ. ಯಾವಾಗ ಏನೂ ಬೇಕಾದರೂ ಆಗಬಹುದು. ಅದರಂತೆ ಸವದಿ ಕಾಂಗ್ರೆಸ್‌ನಿಂದ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಟಿಕೆಟ್ ಸಿಗದೆ ಇರುವುದಕ್ಕೆ ತೀವ್ರ ನೊಂದಿರುವ ಲಕ್ಷ್ಮಣ ಸವದಿ ತಮ್ಮ ನಿರ್ಧಾರ ಇನ್ನೂ ಪ್ರಕಟ ಮಾಡಿಲ್ಲ. ಎಲ್ಲವನ್ನೂ ಬೆಂಬಲಿಗರ ಮೇಲೆ ಬಿಟ್ಟಿದ್ದಾರೆ. ತಮ್ಮ ಮತ್ತು ತಮ್ಮ ಪುತ್ರ ಚಿದಾನಂದನ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ದುಡುಕಿನ ನಿರ್ಧಾರ ಕೈಗೊಳ್ಳಲು ಸವದಿ ಹಿಂದೇಟು ಹಾಕಿದ್ದಾರೆ. ಆದರೆ ಚುನಾವಣೆಗೆ ಇಳಿಯಬೇಕೋ ಅಥವಾ ಬೇಡವೋ. ಸ್ಪರ್ಧೆ ಮಾಡಿದರೆ ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಇಲ್ಲವೇ ತಮ್ಮ ಪುತ್ರ ಚಿದಾನಂದನನ್ನು ಕಣಕ್ಕಿಳಿಸಬೇಕೇ ಬೇಡವೇ ಎಂಬುದರ ಬಗ್ಗೆ ನಿರ್ಧರಿಸಲು ಲಕ್ಷ್ಮಣ ಸವದಿ ಎ.13ರಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಈಗ ಈ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸವದಿ ತೆಗೆದುಕೊಳ್ಳುವ ನಿರ್ಧಾರ ಕುತೂಹಲ ಮೂಡಿಸಿದೆ. – ಕೇಶವ ಆದಿ