Advertisement

Lakshadweep ಯಾನಕ್ಕೆ ಇದೆ ಮಂಗಳೂರಿನಿಂದಲೂ ಅವಕಾಶ

01:20 AM Jan 10, 2024 | Team Udayavani |

ಮಂಗಳೂರು: ಮಾಲ್ದೀವ್ಸ್‌ ದ್ವೀಪ ಮಂಗಳೂರು ಭಾಗದ ಅನೇಕರ ಹನಿಮೂನ್‌ ಸ್ಪಾಟ್‌ ಎಂದೇ ಪ್ರಸಿದ್ಧ. ಆದರೆ ಬಲು ದುಬಾರಿ. ಹಾಗಾಗಿಯೇ ಅದಕ್ಕೆ ಪರ್ಯಾಯವಾದ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ತೆರಳುವ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.

Advertisement

ಕೆಲವು ವರ್ಷಗಳ ಹಿಂದೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ತೆರಳುತ್ತಿತ್ತು. ಆದರೆ ಈಗ ಸ್ಥಗಿತಗೊಂಡಿದೆ. ಈ ಹಡಗು ಸೇವೆ ಮತ್ತೆ ಪ್ರಾರಂಭಗೊಳ್ಳಬೇಕಿದೆ. ಅದಕ್ಕಾಗಿ ಜಿಲ್ಲಾಡಳಿತ ಕಾರ್ಯಾರಂಭ ಮಾಡಿದೆ. ಈ ಸಂಬಂಧ ಕೆಲವರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲು ಮುಂದಾಗಿದೆ.

ಸದ್ಯ ಮಾಲ್ದೀವ್ಸ್‌ ಜತೆ ಭಾರತದ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಅದಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಲಕ್ಷ ದ್ವೀಪಕ್ಕೆ ಹಾಗೂ ಅಂಡಮಾನ್‌ ದ್ವೀಪಗಳಿಗೆ ಪ್ರವಾಸ ಸಂಪರ್ಕ ಕಲ್ಪಿಸಬೇಕಿದೆ. ಹಾಗೆಯೇ ಪೂರಕ ಮೂಲ ಸೌಕರ್ಯ ಕಲ್ಪಿಸಿದರೆ ಅನುಕೂಲ ಎಂಬುದು ಮಂಗಳೂರಿನ ಟ್ರಾವೆಲ್‌ ಏಜೆನ್ಸಿಯವರ ಅಭಿಪ್ರಾಯ.

ಮಾಲ್ದೀವ್ಸ್‌ಗೆ ಮಂಗಳೂರಿನಿಂದ ಹೆಚ್ಚಾಗಿ ನವದಂಪತಿ ಹೋಗುತ್ತಿದ್ದರು. ಆದರೆ ಅದು ತೀರಾ ದುಬಾರಿ; ಹೊಟೇಲ್‌ ದರವೇ 1 ರಿಂದ 2 ಲಕ್ಷ ರೂ., ಕುಡಿಯುವ ನೀರು ಲೀ.ಗೆ 300 ರೂ. ನೀಡಬೇಕು ಎಂಬುದು ಪ್ರವಾಸ ನಿರ್ವಹಿಸುವವರ ಅಭಿಪ್ರಾಯ.

ಲಕ್ಷದ್ವೀಪವೂ ಮಾಲ್ದೀವ್ಸ್‌ನಷ್ಟೇ ಸುಂದರ ವಾಗಿದೆ. ಈಗ ಪ್ರಧಾನಿಯವರು ಅಲ್ಲಿಗೆ ಭೇಟಿ ನೀಡಿದ ಕಾರಣ ಜನಪ್ರಿಯವಾಗುತ್ತಿದೆ. ಕೆಲವು ಫೋನ್‌ ಕರೆಗಳೂ ಬರತೊಡಗಿದ್ದು, ಮುಂದೆ ಲಕ್ಷದ್ವೀಪಕ್ಕೆ ಪ್ರವಾಸಿಗರು ಹೆಚ್ಚಾಗಬಹುದು ಎನ್ನುತ್ತಾರೆ ಮಂಗಳೂರು ವಿಕ್ರಮ್‌ ಟ್ರಾವೆಲ್ಸ್‌ನ ಎಂಡಿ ಶಿವಾನಂದ್‌.

Advertisement

ಮಂಗಳೂರಿನಿಂದ ಪ್ರಸ್ತುತ ಲಕ್ಷದ್ವೀಪಕ್ಕೆ ಹೋಗಲು ಕ್ರೂಸ್‌ ಹಡಗು ಅಥವಾ ವಿಮಾನವೇ ಆಯ್ಕೆ. ಎರಡಕ್ಕೂ ಪ್ರವಾಸಿಗರು ಕೊಚ್ಚಿಗೆ ತೆರಳಬೇಕು. ಲಕ್ಷದ್ವೀಪಕ್ಕೆ ತೆರಳಲು ಬೋರ್ಡಿಂಗ್‌ ಪಾಸನ್ನೂ ಕೊಚ್ಚಿಯಲ್ಲಿರುವ ಕಚೇರಿಯಲ್ಲೇ ಪಡೆಯಬೇಕಿದೆ.

ಮಂಗಳೂರಿನಲ್ಲಿ ಲಕ್ಷದ್ವೀಪ ಪ್ರವಾಸ ಆರಂಭಿಸಲು ಸಾಕಷ್ಟು ಅವಕಾಶಗಳಿವೆ. ಪ್ರಾರಂಭಿಕ ಹಂತದಲ್ಲಿ ನವಮಂಗಳೂರು ಬಂದರಿಗೆ ಕ್ರೂಸ್‌ ಹಡಗುಗಳು ಬರುವಂತೆ ಮಾಡಬೇಕಿದೆ. ಸದ್ಯ ಮುಂಬಯಿಯಿಂದ ಹೊರಡುವ ಲಕ್ಷದ್ವೀಪದ ಕ್ರೂಸ್‌ ಹಡಗುಗಳು ಗೋವಾಕ್ಕೆ ಬರುತ್ತಿವೆ. ಅವು ಮಂಗಳೂರಿಗೆ ಬರಬೇಕು. ಇಲ್ಲಿ ಪ್ರವಾಸಿಗರಿಗೆ ಕ್ರೂಸ್‌ ಲಾಂಜ್‌ ವ್ಯವಸ್ಥೆ ಇದ್ದು, ಬಳಸಬಹುದಾಗಿದೆ.

ಸವಲತ್ತು ಬೇಕಿದೆ
ಅರೇಳು ವರ್ಷಗಳ ಹಿಂದೆಯೇ ಲಕ್ಷದ್ವೀಪಕ್ಕೆಂದೇ ಪ್ರತ್ಯೇಕ ಜೆಟ್ಟಿಯನ್ನು 65 ಕೋಟಿ ರೂ. ಗಳ ವೆಚ್ಚದಲ್ಲಿ ಮಂಗಳೂರು ಹಳೆ ಬಂದರಿನಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. 300 ಮೀಟರ್‌ ಉದ್ದದ ಜೆಟ್ಟಿ ನಿರ್ಮಾಣ, ಗೋದಾಮು ಹಾಗೂ ಪ್ರಯಾಣಿಕರಿಗಾಗಿ ಸುಸಜ್ಜಿತ ತಂಗುದಾಣ ನಿರ್ಮಿಸುವ ಆ ಯೋಜನೆಯನ್ನು ಕೂಡಲೇ ಸಿಆರ್‌ಝಡ್‌ ಮತ್ತಿತರ ಅನುಮತಿ ಪಡೆದು ಜಾರಿಗೊಳಿಸಬೇಕಿದೆ. ಆದರೆ ಲಭ್ಯ ಮಾಹಿತಿಯ ಪ್ರಕಾರ ಈ ಹಿಂದೆಯೇ ಬಂದರಿನಲ್ಲಿ ತಮ್ಮ ಕಚೇರಿ ಮತ್ತು ಇನ್ನಿತರ ಸೌಲಭ್ಯ ಕಲ್ಪಿಸಲು ಲಕ್ಷದ್ವೀಪ ಆಡಳಿತಕ್ಕೆ ಅನುಮತಿ ನೀಡಲಾಗಿತ್ತು. ಬಂದರು ಇಲಾಖೆಯೂ ಇದಕ್ಕೆ ಸೂಕ್ತವಾದ ಜಾಗವನ್ನು ಕೊಡಲು ಒಪ್ಪಿತ್ತು. ಆದರೂ ಯೋಜನೆ ಜಾರಿಗೊಂಡಿರಲಿಲ್ಲ.

ಸದ್ಯ ಲಕ್ಷದ್ವೀಪದಿಂದ ಜನರು ಮಂಗಳೂರಿಗೆ ಬಂದು ತಮಗೆ ಬೇಕಾದ ಸಾಮಗ್ರಿ ಕೊಂಡೊಯ್ಯುತ್ತಿದ್ದಾರೆ. ಆದರೆ ಇಲ್ಲಿಂದ ಜನರಿಗೆ ಹೋಗುವ ವ್ಯವಸ್ಥೆ ಆಗಬೇಕಿದ್ದು, ಬೋರ್ಡಿಂಗ್‌ ಪಾಸ್‌ ಇಲ್ಲಿಯೇ ಲಭ್ಯವಾಗುವಂತೆ ಮಾಡಬೇಕಿದೆ ಎಂಬುದು ಪ್ರವಾಸಿಗರ ಆಗ್ರಹ. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ದೂರ ಹೆಚ್ಚು (391 ಕಿ.ಮೀ.), ಮಂಗಳೂರಿನಿಂದ ಹೋಗುವುದಾದರೆ ಕಡಿಮೆ (356 ಕಿ.ಮೀ.). ಇದು ಕೂಡ ಮಂಗಳೂರಿಗೆ ಇರುವ ಮತ್ತೂಂದು ಅನುಕೂಲವಾಗಿದೆ.

ಮಂಗಳೂರಿನಿಂದ ಹಿಂದೆ ಯಾವ ರೀತಿ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಹೋಗುತ್ತಿತ್ತು ಎನ್ನುವುದನ್ನು ತಿಳಿದುಕೊಂಡು ಮತ್ತೆ ಆರಂಭಿಸುವಂತೆ ಸಂಸದರು ಸೂಚಿಸಿದ್ದಾರೆ. ಆ ಬಗ್ಗೆ ಮಾಹಿತಿ ಇರುವವರ ಕರೆದು ಸಭೆ ನಡೆಸಿ ತೀರ್ಮಾನಿಸಲಾಗುವುದು.
– ಮುಲ್ಲೈಮುಗಿಲನ್‌, ಜಿಲ್ಲಾಧಿಕಾರಿ, ಮಂಗಳೂರು

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next