Advertisement

ಲಕ್ಷದ್ವೀಪ- ಮಂಗಳೂರು ವಾಣಿಜ್ಯ ವ್ಯವಹಾರಕ್ಕೆ ಪೂರಕ

12:34 PM Nov 10, 2017 | |

ಮಹಾನಗರ: ಲಕ್ಷದ್ವೀಪ ಹಾಗೂ ಮಂಗಳೂರು ನಡುವೆ ವಾಣಿಜ್ಯ ವ್ಯವಹಾರಕ್ಕೆ ಪೂರಕವಾಗುವ ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಒಟ್ಟು 65 ಕೋಟಿ ರೂ. ವೆಚ್ಚದಲ್ಲಿ ಬೆಂಗ್ರೆ ಬದಿಯ ಮೂರನೇ ಹಂತದ ಮೀನುಗಾರಿಕೆ ದಕ್ಕೆಯ ಉತ್ತರ ಭಾಗದ 350 ಮೀಟರ್‌ ವ್ಯಾಪ್ತಿಯಲ್ಲಿ ನೂತನ ವಾಣಿಜ್ಯ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ.

Advertisement

ಸಾಗರ ಮಾಲಾ ಯೋಜನೆಯಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣದ ನೆಲೆಯಲ್ಲಿ ಯೋಜನೆಗೆ ಅನುಮೋದನೆ ದೊರಕಿದ್ದು, ರಾಜ್ಯ ಸರಕಾರದ ಒಪ್ಪಿಗೆಯ ನಿರೀಕ್ಷೆಯಲ್ಲಿದೆ. ಒಟ್ಟು 65 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪುಗೊಳ್ಳಲಿದ್ದು, ಇದರಲ್ಲಿ 25 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಲಿದ್ದು, 40 ಕೋ.ರೂ.ಗಳನ್ನು ರಾಜ್ಯ ಸರಕಾರ ನೀಡಬೇಕಿದೆ. ಇದರಲ್ಲಿ ಸ್ವಲ್ಪ ಪಾಲನ್ನು ಲಕ್ಷದ್ವೀಪದಿಂದ ಪಡೆಯುವ ಸಂಬಂಧವೂ ಶಾಸಕ ಜೆ.ಆರ್‌.ಲೋಬೋ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ.

ಬೆಂಗ್ರೆ ಬದಿಯ ಮೂರನೇ ಹಂತದ ಮೀನುಗಾರಿಕೆ ದಕ್ಕೆಯ ಉತ್ತರ ಭಾಗದ 350 ಮೀಟರ್‌ ವ್ಯಾಪ್ತಿಯಲ್ಲಿ ಪ್ರಸ್ತಾವಿತ
ಜೆಟ್ಟಿ ನಿರ್ಮಾಣವಾಗಲಿದೆ. 

ಇದರಲ್ಲಿ 2 ದೊಡ್ಡ ಪ್ರಮಾಣದ ಗೋಡೌನ್‌ ಕಟ್ಟಡ, ಪ್ರಯಾಣಿಕ ಹಡಗಿನ ಪ್ರಯಾಣಿಕರಿಗೆ ಒಂದು ಕಟ್ಟಡ ಸೌಲಭ್ಯ, ಜತೆಗೆ ಶೌಚಾಲಯ ವ್ಯವಸ್ಥೆ ಇರುತ್ತದೆ. ಮುಖ್ಯವಾಗಿ, ಅಳಿವೆಬಾಗಿಲಿನಿಂದ ಹೊಸ ಜೆಟ್ಟಿ ನಿರ್ಮಾಣವಾಗಲಿರುವ ಬೆಂಗ್ರೆಯವರೆಗೆ ಸಂಪರ್ಕ ಕಲ್ಪಿಸಲು ಬಹುವೆಚ್ಚದಲ್ಲಿ ಡ್ರೆಜ್ಜಿಂಗ್‌ ಕಾಮಗಾರಿ ಆಯೋಜಿಸಲಾಗುತ್ತದೆ.

ಲಕ್ಷದ್ವೀಪದ ಬಳಕೆಗೆ ಮಾತ್ರ ನಿರ್ಮಿಸುವ ಈ ಜೆಟ್ಟಿಯಿಂದ ಮಂಗಳೂರು, ಲಕ್ಷದ್ವೀಪದ ಜನರಿಗೆ ಪ್ರಯಾಣ ಹಾಗೂ ಕಾರ್ಗೊ ಸಾಗಾಟ ಇನ್ನಷ್ಟು ಸುಲಭವಾಗಲಿದೆ. ಲಕ್ಷದ್ವೀಪಕ್ಕೆ ಮಂಗಳೂರು ಆದಿಯಾಗಿ ಸಾಮಾನು- ಸರಕು ಹೇರಲು ಹಾಗೂ ಇಳಿಸಲು ಇಲ್ಲಿ ಪೂರ್ಣ ರೀತಿಯ ಅವಕಾಶವಾಗಲಿದೆ. ಸಣ್ಣ ಧಾರಣಾ ಶಕ್ತಿಯ ಮಂಜುಗಳು ಈಗ ಹಳೆ ಬಂದರಿಗೆ ಬರುತ್ತಿದ್ದು, ಮುಂದೆ ಸುಸಜ್ಜಿತ ಜೆಟ್ಟಿ ನಿರ್ಮಾಣವಾದ ಬಳಿಕ ಅಧಿಕ ಸಾಮರ್ಥ್ಯದ ಹಡಗುಗಳು ಬರುವ ನಿರೀಕ್ಷೆ ಹೊಂದಲಾಗಿದೆ. ಇದರಿಂದ ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ನಿರೀಕ್ಷಿಸಬಹುದು. ಪ್ರಯಾಣಿಕರಿಗೆ ಸುಸಜ್ಜಿತ ತಂಗು ದಾಣ ವ್ಯವಸ್ಥೆ ಕೂಡ ನಿರ್ಮಾಣವಾಗಲಿದೆ.

Advertisement

ಈಡೇರದ ಕನಸು
ಮಂಗಳೂರು ಹಾಗೂ ಲಕ್ಷದ್ವೀಪದ ನಡುವೆ ಹೆಚ್ಚಿನ ವಾಣಿಜ್ಯ ವ್ಯವಹಾರ ನಡೆಯುವ ನಿಟ್ಟಿನಲ್ಲಿ ಲಕ್ಷದ್ವೀಪ ಆಡಳಿತದ ನೆರವಿನೊಂದಿಗೆ ಹಳೆ ಬಂದರಿನಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಈ ಹಿಂದೆ ಅನುಮತಿ ನೀಡಲಾಗಿತ್ತು. ಲಕ್ಷದ್ವೀಪದ ಸರಕಾರದ ಕೋರಿಕೆಗೆ ಸ್ಪಂದಿಸಿ ಬಂದರು ಇಲಾಖೆಯು ಹಳೆ ಬಂದರಿನಲ್ಲಿ ಸುಮಾರು 8000 ಚದರ ಮೀಟರ್‌ ವಿಸ್ತೀರ್ಣ ಜಾಗವನ್ನು ಲಕ್ಷದ್ವೀಪಕ್ಕೆ ಸರಕು, ಇತರ ಆಹಾರ ಸಾಮಗ್ರಿಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಕಲ್ಪಿಸಿತ್ತು. ಲಕ್ಷದೀಪ ಆಡಳಿತ ಮತ್ತು ಬಂದರು ಸಚಿವಾಲಯದ ಜತೆ ಭೂಮಿ ನೀಡುವ ಒಡಂಬಡಿಕೆಗೆ ಸಹಿ ಕೂಡ ಮಾಡಲಾಗಿತ್ತು. 

ಸುಮಾರು 65 ಕೋ. ರೂ. ವೆಚ್ಚದ ಈ ಯೋಜನೆಯಲ್ಲಿ ಲಕ್ಷದ್ವೀಪ ಜೆಟ್ಟಿನಲ್ಲಿ ದೊಡ್ಡ ನೌಕೆಗಳು ತಂಗಲು ಪೂರಕವಾಗಿ ಸುಸಜ್ಜಿತ ಬರ್ತ್‌, ಪ್ರಯಾಣಿಕರಿಗೆ ತಂಗುದಾಣ ನಿರ್ಮಾಣ, ಸರಕು ಸಂಗ್ರಹಕ್ಕಾಗಿ ಗೋದಾಮು ರಚನೆ ಮತ್ತಿತರ ಮೂಲಸೌಕರ್ಯ ನಿರ್ಮಿಸುವುದು ಇದರಲ್ಲಿ ಒಳಗೊಂಡಿತ್ತು. ಲಕ್ಷದ್ವೀಪ ಆಡಳಿತದ ಒಂದು ಅಂಗಸಂಸ್ಥೆಯಾಗಿರುವ ಸೊಸೈಟಿ ಫಾರ್‌ ಪ್ರಮೋಶನ್‌ ಆಫ್‌ ನೇಚರ್‌ ಟೂರಿಸ್ಟ್ ಆ್ಯಂಡ್‌ ನ್ಪೋರ್ಟ್ಸ್ ವತಿಯಿಂದ ಹಳೆ ಬಂದರು ಪ್ರದೇಶದಲ್ಲಿ 20 ಕೋ.ರೂ. ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಕಾಮಗಾರಿಗಳು ಕೂಡ ಇದರಲ್ಲಿ ಒಳಗೊಂಡಿತ್ತು. ಆದರೆ, ಈ ಎಲ್ಲ ಯೋಜನೆಗಳು ಅನುಷ್ಠಾನ ಹಂತಕ್ಕೆ ಬರುವುದು ಮಾತ್ರ ವಿಳಂಬವಾಗಿದೆ.

ವಾಣಿಜ್ಯ ವ್ಯವಹಾರಕ್ಕೆ ಐತಿಹಾಸಿಕ ಹಿನ್ನೆಲೆ
ಮಂಗಳೂರು  ಮತ್ತು ಲಕ್ಷದ್ವೀಪ ನಡುವೆ ವಾಣಿಜ್ಯ ವ್ಯವಹಾರಕ್ಕೆ ಒಂದು ಐತಿಹಾಸಿಕ ಹಿನ್ನೆಲೆಯಿದೆ. ಮಂಗಳೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸರಕು-ಸಾಮಗ್ರಿಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿಂದ ಕೆಲವು ಉತ್ಪನ್ನಗಳನ್ನು ಇಲ್ಲಿಗೆ ತರಲಾಗುತ್ತಿದೆ. ಇದು ನೂರಾರು ವರ್ಷಗಳಿಂದ ನಡೆಯುತ್ತಿದೆ.

ಮಂಗಳೂರಿನಿಂದ ಸುಮಾರು 365 ಕಿ.ಮೀ.( 277 ಮೈಲು ) ದೂರದಲ್ಲಿ ಪ್ರಾರಂಭವಾಗುತ್ತವೆ ಲಕ್ಷ ದ್ವೀಪ ಸಮೂಹ. ಕವರೆಟ್ಟಿ , ಅಗಾಟ್ಟಿ , ಕಲ್ಪೆನಿ, ಮಿನಿಕ್ವಾಯ್‌, ಅಮಿನಿ, ಚತ್ತಲತ್‌, ಕಿಲ್ತಾನ್‌ ಹಾಗೂ ಬಿತ್ತಾ, ಅಂದ್ರೋತ್‌, ಕಡಮಟ್ಟ್ ಪ್ರಮುಖ ದ್ವೀಪಗಳು. ಕ್ರೂಜ್‌ನಲ್ಲಿ ಸುಮಾರು 16ರಿಂದ 18 ತಾಸುಗಳ ಪ್ರಯಾಣ. ಲಕ್ಷದ್ವೀಪ ತಮ್ಮ ಪ್ರಮುಖ ಆವಶ್ಯಕತೆಗಳಿಗೆ ಮುಖ್ಯವಾಗಿ ಆಶ್ರಯಿಸುವುದು ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರು ನಗರವನ್ನು.

ನೌಕೆಗಳ ಮೂಲಕ ಅಲ್ಲಿಂದ ವ್ಯಾಪಾರಿಗಳು, ಪ್ರಯಾಣಿಕರು ಮಂಗಳೂರು ಹಳೆ ಬಂದರಿಗೆ ಆಗಮಿಸಿ ಮಂಗಳೂರಿನಿಂದ ಕಟ್ಟಡ ಸಾಮಗ್ರಿಗಳು, ಆಹಾರ ಧಾನ್ಯಗಳು, ಸಂಬಾರ ಪದಾರ್ಥಗಳನ್ನು, ಜೀವನಾವಶ್ಯಕ ವಸ್ತುಗಳನ್ನು ತುಂಬಿಸಿಕೊಂಡು ಲಕ್ಷದ್ವೀಪಕ್ಕೆ ಹೋಗುತ್ತಿದ್ದಾರೆ. ಅದೇ ರೀತಿ ಪ್ರವಾಸಿ ತಾಣವೂ ಆಗಿರುವ ಲಕ್ಷದ್ವೀಪ ಸಮೂಹಕ್ಕೆ ಅವಿಭಜಿತ ದ.ಕನ್ನಡ ಜಿಲ್ಲೆಯಿಂದ ಬಹಳಷ್ಟು ಪ್ರವಾಸಿಗರು ಹೋಗುತ್ತಿರುತ್ತಾರೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next