Advertisement

ಭಕ್ತರ ವಾತ್ಸಲ್ಯಕ್ಕೆ ಪ್ರತಿರೂಪ ಜನಕಲ್ಯಾಣ: ಡಾ|ಹೆಗ್ಗಡೆ

01:36 AM Nov 30, 2021 | Team Udayavani |

ಬೆಳ್ತಂಗಡಿ: ಧರ್ಮದ ಜಾಗೃತಿ ಹಾಗೂ ಉತ್ಥಾನದೊಂದಿಗೆ ಅಧರ್ಮ, ಅನ್ಯಾಯದ ನಾಶವೇ ನಮ್ಮ ಗುರಿಯಾಗಿರಬೇಕು. ಇತರರನ್ನು ಅರಿತು ಜಾಣನಾಗಬೇಕೋ, ತನ್ನನ್ನು ತಾನು ಅರಿತು ಜ್ಞಾನಿಯಾಗಬೇಕೋ ಎಂಬ ಜಾಗೃತ ಶಕ್ತಿ ನಮಲ್ಲಿ ಸದಾ ಬೆಳೆಯಬೇಕಿದೆ. ಅಂತೆಯೇ ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ಸದಾ ನೆಲೆ ನಿಂತಿರುವುದರಿಂದ ಭಕ್ತರು ಕೊಟ್ಟಿರುವ ವಾತ್ಸಲ್ಯದ ಆಸ್ತಿ ಸಂಪಾದಿಸಿದ್ದೇನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಧನ್ಯತಾಭಾವ ವ್ಯಕ್ತಪಡಿಸಿದರು.

Advertisement

ಕಾರ್ತಿಕ ಸೋಮವಾರ ಮೊದಲ್ಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಥಮ ದಿನವಾದ ಸೋಮವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗಿಬಂದ ಪಾದಯಾತ್ರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಳುತ್ತಾ ಬಂದ ಈ ಜೀವ ಭೂಮಿಯ ಋಣ ಮೀರುವ ಹೊತ್ತಲ್ಲಿ ನಗುತ್ತಿರಬೇಕು. ಅದಕ್ಕಾಗಿ ಸದ್ವಿಚಾರ, ಸತ್ಕಾರ್ಯದ ಸೇವೆಯಿಂದ ಪುಣ್ಯ ಸಂಚಯದೊಂದಿಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿ ಜೀವನ ನಡೆಸಬೇಕು. ಬದುಕಿನಲ್ಲಿ ಸಿಗುವ ಅನುಭವದಿಂದ ಪ್ರಗತಿ ಹಾಗೂ ಲೋಕಕಲ್ಯಾಣ ಸಾಧ್ಯವಾಗು ವಾಗುವುದರಿಂದ ಧರ್ಮಸ್ಥಳದಿಂದ ನಿತ್ಯರೂಪಕವಾಗಿ ನಾನು ಜನಹಿತ, ಜನಪರ, ಜನಕಲ್ಯಾಣ ಆದ್ಯತೆಯಾಗಿದೆ ಎಂದು ಉದ್ಘೋಷಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌ ಮಾತನಾಡಿ, ಪಾದಯಾತ್ರೆಯು ಲಕ್ಷದೀಪೋತ್ಸವದ ಸಜ್ಜನಶಕ್ತಿಯ ದೀಪವಾಗಿ ಪ್ರಜ್ವಲಿಸಿದೆ. ಧರ್ಮ ಮತ್ತು ಸತ್ಯ ಎಂದಿಗೂ ಗೆದ್ದೇ ಗೆಲ್ಲುತ್ತದೆ. ಈ ದೇಶದ ಮೂಲಶಕ್ತಿಯಾಗಿ, ಸಮಾಜಕ್ಕೆ ಆಶಾಭಾವವಾಗಿ ಕಾಲಕ್ಕೆ ಸರಿಯಾಗಿ ಶ್ರೇಷ್ಠ ಪುರುಷರು ಉದಯಿ ಸುತ್ತಾರೆ. ಅದು ಹೆಗ್ಗಡೆ ಅಂಥವರಿಂದ ಋಜುವಾತಾಗಿದೆ ಎಂದು ಬಣ್ಣಿಸಿದರು.

ಇದನ್ನೂ ಓದಿ:ಬಾಲಿವುಡ್‌ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್‌ ಅಣ್ಣ-ತಂಗಿ

Advertisement

ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಶರತ್‌‍ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ ಕುಮಾರ್‌ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌ ವಂದಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ನಿರ್ವಹಿಸಿದರು.

ಪೇಜಾವರ ಶ್ರೀಗಳು ಶ್ರೇಷ್ಠ ಯತಿವರ್ಯರು
ಭಗವಂತನಿಗೆ ನಿಂದಾಸ್ತುತಿ ಮಾಡುವ ಪದ್ಧತಿ ಇದೆ. ಇದರಿಂದ ಭಗವಂತ ಇನ್ನೂ ನಮ್ಮ ಹತ್ತಿರಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಪೇಜಾವರ ಶ್ರೀಗಳ ಬಗೆಗಿನ ನಿಂದನೆಯಿಂದಾಗಿ ಅವರನ್ನು ಮತ್ತೊಮ್ಮೆ ಸಮಾಜ ನೆನೆಯುವಂತಾಗಿದೆ. ಶ್ರೀಗಳು ಸಾತ್ವಿಕ ಶಕ್ತಿಯನ್ನು ಜಾಗೃತಗೊಳಿಸಿದ ನಿಷ್ಕಲ್ಮಶ ಶ್ರೇಷ್ಠ ಸಂತರಾಗಿದ್ದರು. ಈ ಮೂಲಕ ಅವರ ಸತ್ಕಾರ್ಯವನ್ನು ಸ್ಮರಣೆಗೆ ತಂದಂತಾಗಿದೆ. ಇದರಿಂದ ನಮಗೆ ಪುಣ್ಯ ಬರುತ್ತದೆ. ಅವರನ್ನು ನಾನು ಮೊದಲಿನಿಂದಲೂ ಪ್ರತೀದಿನ ಬೆಳಗ್ಗೆ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರಂತಹ ಯತಿಗಳು ಮತ್ತೊಮ್ಮೆ ಅವತರಿಸಲಿ
– ಡಾ| ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ

ಹೊಸಕಟ್ಟೆ ಉತ್ಸವ
ಸೋಮವಾರ ರಾತ್ರಿ ಲಕ್ಷದೀಪೋ ತ್ಸವದ ಅಂಗವಾಗಿ ಹೊಸಕಟ್ಟೆ ಉತ್ಸವ ನಡೆಯಿತು. ದೇಗುಲದ ಅಂಗಣದಲ್ಲಿ ಪಲ್ಲಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತು ಇತ್ಯಾದಿ ಒಟ್ಟು 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನ. 30 ರಂದು ಕೆರೆಕಟ್ಟೆ ಉತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next