Advertisement

ಲಕ್ಷದೀಪೋತ್ಸವದ ವೈಭವ ಹೆಚ್ಚಿಸಿದ ಆಹಾರ ಮೇಳ    

04:00 PM Dec 05, 2021 | Team Udayavani |

ಧರ್ಮಸ್ಥಳ:  ಎಲ್ಲೆಡೆ ಜಗಮಗಿಸುವ ದೀಪಾಲಂಕಾರ, ವೈಭವೋಪೇತವಾಗಿ ನಡೆಯುತ್ತಿದ್ದ ದೇವರ ಉತ್ಸವ , ಸಹಸ್ರರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಗಣ , ಸಾಲು ಸಾಲು ಅಂಗಡಿಗಳು ಇವೆಲ್ಲದರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಕಂಡುಬಂದ  ಮತ್ತೊಂದು ವಿಶೇಷತೆಯೆಂದರೆ ಆಹಾರಮೇಳ.

Advertisement

ಮಾತು ಬಿಡದ ಮಂಜುನಾಥನ ಕ್ಷೇತ್ರ ಧರ್ಮಸ್ಥಳವು ತಲಾತಲಾಂತರರಗಳಿಂದ ಚತುರ್ದಾನಗಳಿಂದಲೇ ವಿಶೇಷ ಸ್ಥಾನಮಾನ ಪಡೆದಿದೆ. ಧರ್ಮಸ್ಥಳ ಎನ್ನುವ ಹೆಸರೇ ಸೂಚಿಸುವಂತೆ ಧರ್ಮದ ನೆಲೆಬೀಡಾಗಿರುವ ಇಲ್ಲಿ ಅನ್ನದಾನ, ವಿದ್ಯಾದಾನ , ಔಷಧದಾನ ಮತ್ತು ಅಭಯದಾನದ ಮೂಲಕ ಸ್ವಾಮಿಯನ್ನು ಪ್ರಸನ್ನಗೊಳಿಸಲಾಗುತ್ತಿದೆ.

ಕ್ಷೇತ್ರದ ಅನ್ನಛತ್ರದಲ್ಲಿ ಪ್ರತಿನಿತ್ಯವು ಅನ್ನದಾನ ನಡೆಯುತ್ತಿದ್ದು ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸುವ ಮೂಲಕ ಧನ್ಯತೆಯನ್ನು ಅನುಭವಿಸುತ್ತಾರೆ.  ಆದರೆ ಕಳೆದ ಹನ್ನೊಂದು ವರ್ಷದಿಂದ ಲಕ್ಷದೀಪೋತ್ಸವ ಕೊನೆಯ ದಿನ ಭಕ್ತವೃಂದದವರೇ ಬೃಹತ್ ಉಚಿತ ಆಹಾರ ಮೇಳ ಆಯೋಜನೆ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ಖಾದ್ಯಗಳು ತುಂಬಿರುವ  ಆಹಾರ ಮೇಳವು ಭಕ್ತಜನರ ಹಸಿವನ್ನು ತಣಿಸುತ್ತಿದೆ.

ವರ್ಷದಲ್ಲಿ ಒಂದು ದಿವಸ ಧರ್ಮಸ್ಥಳ ಅನ್ನಛತ್ರದ ಎಲ್ಲ ಸಿಬ್ಬಂದಿಗಳಿಗೆ ಲಕ್ಷದೀಪೋತ್ಸವದ ಪ್ರಯುಕ್ತ ರಜೆ ನೀಡಲಾಗುತ್ತದೆ. ಆದ್ದರಿಂದ ಆ ದಿನ ಭಕ್ತಗಣಕ್ಕೆ ಮಂಜುನಾಥನ ಅನ್ನಪ್ರಸಾದ ಸ್ವೀಕರಿಸುವ ಭಾಗ್ಯ ಇರುತ್ತಿರಲಿಲ್ಲ. ಇದನ್ನು ಮನಗಂಡ ದಾನಿಗಳು ಆ ದಿನ ನಾವು ಅನ್ನದಾನ ಮಾಡುವ ಭಕ್ತರನ್ನು ಸಂತುಷ್ಟಿಗೊಳಿಸುತ್ತೇವೆ ಎಂದು ತೀರ್ಮಾನಿಸಿ ಆಹಾರ ಮೇಳದ ಪರಿಕಲ್ಪನೆಯನ್ನು ಅನುಷ್ಠಾನ ಕ್ಕೆ ತಂದರು.

ಇದನ್ನೂ ಓದಿ:- ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

Advertisement

ರಾಜ್ಯದ ವಿವಿಧ ಭಾಗಗಳ ಭಕ್ತರು ತಾವು ಬೆಳೆದ ಆಹಾರ ಧಾನ್ಯಗಳನ್ನು ಕ್ಷೇತ್ರಕ್ಕೆ ತಂದು ಅದರಿಂದ ಅನ್ನ ಸಾಂಬಾರ್ , ದೋಸೆ ,ಮುದ್ದೆ ರೊಟ್ಟಿ , ಇಡ್ಲಿ ಮತ್ತು ಸಿಹಿಖಾದ್ಯ ಮುಂತಾದ ರುಚಿಯಾದ ತಿಂಡಿತಿನಸುಗಳನ್ನು ತಯಾರಿಸಿ ತಾವೇ ಕೈಯಾರೆ ಭಕ್ತಾದಿಗಳಿಗೆ ಬಡಿಸುತ್ತಾರೆ. ಕ್ಷೇತ್ರವು ಸೂಕ್ತ ವ್ಯವಸ್ಥೆಗಳನ್ನು ಮಾಡುವ ಮೂಲಕ ಆಹಾರಮೇಳವು ಅಚ್ಚುಕಟ್ಟಾಗಿ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದೆ.

ಈ ಬಾರಿಯ ಆಹಾರ ಮೇಳಕ್ಕೆ 19 ತಂಡಗಳು ಆಗಮಿಸಿದ್ದು 18 ಬಗೆಯ ಹಲವಾರು ಬಗೆಯ ಖಾದ್ಯಗಳೊಂದಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದರು. ಸಂಜೆಯಿಂದಲೇ ಆಹಾರ ಮೇಳದತ್ತ ಜನ ಗುಂಪು ಗುಂಪಾಗಿ ದೌಡಾಯಿಸಿ ಒಟ್ಟಾರೆಯಾಗಿ 2 ಲಕ್ಷದಷ್ಟು ಜನ  ಮೇಳದಲ್ಲಿ ಭಾಗವಹಿಸಿ ಸವಿಯನ್ನು ಸವಿದರು.  ನೂರಾರು ಸ್ವಯಂಸೇವಕರು ಆಹಾರಮೇಳ ಯಶಸ್ವಿಯಾಗಾಲು ಕಾರಣಿಭೂತರಾದರು.

ಹೀಗೆ ಲಕ್ಷದೀಪೋತ್ಸವವದ ಮಹಾ ವೈಭವದಲ್ಲಿ ಆಹಾರ ಮೇಳವು ಖ್ಯಾತಿಯನ್ನು ಪಡೆದಿದ್ದು ಲಕ್ಷಾಂತರ  ಭಕ್ತರ ಹಸಿವ ನೀಗಿಸುವ ಪುಣ್ಯ ಕಾರ್ಯವಾಗಿದೆ. ಈ ಮೂಲಕ ಧರ್ಮಸ್ಥಳದ ಅನ್ನದಾನದ ಸೇವೆಗೆ ನಿರಂತರತೆಯ  ಸ್ಪರ್ಶ ದೊರಕಿದೆ.

ಜಗದೀಶ್ ಬಳಂಜ,  ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next