ಚಳಿಗಾಲ ಅಂದ್ರೆ, ಬಿಸಿಬಿಸಿ- ಖಾರ ಖಾರದ್ದೇನಾದರೂ ತಿನ್ನೋಣ ಅನ್ನಿಸುತ್ತೆ. ಆದರೆ, ಲಕ್ಕವ್ವ ಮಾಡುವ ಬಿಸಿಬಿಸಿ ಬಜ್ಜಿ ಸವಿಯಲು ಕಾಲಗಳಿಗಾಗಿ ಕಾಯಬೇಕಿಲ್ಲ…
“ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ’- ವಯಸ್ಸಾಯ್ತು ಅಂದ್ರೆ, ಈ ಮಾತು ವೃದ್ಧರ ಬಾಯಿಂದ ತಪ್ಪಿದ್ದಲ್ಲ. ಆದರೆ, ಈ ಅಜ್ಜಿ ಯಾವತ್ತೂ, ಊರು ತನ್ನನ್ನು ಹೋಗು ಅಂತಿದೆ ಎಂದು ಬೆರಳು ತೋರಿಸಿದವರೇ ಅಲ್ಲ. ಲಕ್ಕವ್ವ ಅಂದ್ರೆ, ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಜನ, “ಇವರು ನಮ್ಮವ್ವ’ ಎನ್ನುವ ಪ್ರೀತಿ ತೋರಲು ಮುಖ್ಯ ಕಾರಣವೇ ಒಂದು ಪ್ಲೇಟ್ ಬಜ್ಜಿ, ಒಂದು ಬಟ್ಟಲು ಖಡಕ್ ಚಹಾ! ಅಜ್ಜಿಯ ಕೈರುಚಿಯೇ ಈ ಊರಿಗೊಂದು ಚೈತನ್ಯ.
“ವಯಸ್ಸಾದವರ ಕೈಯಿಂದ ಏನಾಗುತ್ತೆ? ಅವರು ನಮ್ಮ ದುಡಿಮೆ ತಿಂದೇ ಬದುಕ್ತಾರೆ…’ ಎಂದು ಕೆಲವು ಮಕ್ಕಳು ತಮ್ಮ ತಂದೆ- ತಾಯಿಗಳನ್ನು ಹೀಗಳಿಯುವುದು ಉಂಟು. ಬದುಕಿನ ಪ್ರತಿ ಘಟ್ಟದಲ್ಲೂ ತಂದೆ- ತಾಯಿ, ನಮಗೆ ಹೆಗಲು ನೀಡುತ್ತಾರೆ. ಆದರೆ, ನಾವು ನಮ್ಮ ಜೀವನದಲ್ಲಿ ಒಂದು ಉತ್ತಮ ಸ್ಥಾನಕ್ಕೆ ಬಂದು ನಿಂತಾಗ ಅವರನ್ನು ನಿರ್ಲಕ್ಷಿಸುತ್ತೇವೆ. ಇದರಿಂದ ಅವರು ಮಾನಸಿಕವಾಗಿ ಕುಗ್ಗಬಹುದು. ಆದರೆ, ಈ ಅಜ್ಜಿ ಹಾಗಲ್ಲ. 9 ಸದಸ್ಯರಿರುವ ಕುಟುಂಬದ ದೋಣಿ ಸಾಗಲು ತಾವೂ ಹೆಗಲು ಕೊಟ್ಟ ಸಾಹಸಿ.
ಲಕ್ಕವ್ವನ ಉತ್ಸಾಹ ಕಂಡು ಯಾರೂ ಇವರಿಗೆ 75 ವರ್ಷ ಆಯ್ತು ಅನ್ನಲು ಮನಸ್ಸು ಬರುವುದಿಲ್ಲ. ಸುಮಾರು 35 ವರ್ಷದಿಂದ ತೊರವಿಯ ನರಸಿಂಹ ದೇವಸ್ಥಾನದ ಕ್ರಾಸ್‌ನ ಬಳಿ ಒಂದು ಪುಟ್ಟ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಅಂಗಡಿಯಲ್ಲಿ ಮಿರ್ಚಿ (ಬಜ್ಜಿ), ಮಸಾಲಾ ರೈಸ್, ಚೂಡಾ, ಚಹಾವೇ ಹೈಲೈಟ್. ದಿನಕ್ಕೆ ಏನಿಲ್ಲವೆಂದರೂ, 400 ರೂ. ದುಡಿಯುವ ಅಜ್ಜಿ, ದಣಿವು ಎಂದು ಮೂಲೆಯಲ್ಲಿ ಕುಳಿತವರೇ ಅಲ್ಲ. ಒಂದೂವರೆ ವರ್ಷದ ಹಿಂದೆ ಮಗನನ್ನು ಕಳಕೊಂಡ ಇವರು, ಮೊಮ್ಮಕ್ಕಳೊಂದಿಗೆ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ಮೊಮ್ಮಕ್ಕಳಿಂದ ತರಿಸಿಕೊಂಡು, ಇಡೀ ದಿನ ಅಂಗಡಿಗೆ ಸಾರಥಿ ಆಗಿರುತ್ತಾರೆ. ಸೊಸೆ, ಮೊಮ್ಮಕ್ಕಳು, ಮರಿಮಕ್ಕಳ ಸಹಕಾರದಿಂದ ಸ್ವಾವಲಂಬಿಯಾಗಿ, ನಾಲ್ಕೂರಿಗೆ ಮಾದರಿಯಾಗಿದ್ದಾರೆ.
ಚಳಿಗಾಲ ಅಂದ್ರೆ, ಬಿಸಿಬಿಸಿ- ಖಾರ ಖಾರದ್ದೇನಾದರೂ ತಿನ್ನೋಣ ಅನ್ನಿಸುತ್ತೆ. ಆದರೆ, ಈ ಅಜ್ಜಿ ಮಾಡುವ ಬಿಸಿಬಿಸಿ ಬಜ್ಜಿ ಸವಿಯಲು ಕಾಲಗಳಿಗಾಗಿ ಕಾಯಬೇಕಿಲ್ಲ. ಈ ಅಜ್ಜಿ, ಕೈಯಿಂದ ಏನೇ ಮಾಡಿದರೂ, ಅದಕ್ಕೆ ಅದ್ಭುತ ರುಚಿ. ಸಂಜೆಯ ಹೊತ್ತಿನಲ್ಲಿ ಬಿಸಿಬಿಸಿ ಬಜ್ಜಿ ಸವಿಯಲು ಇಲ್ಲಿ ಕ್ಯೂ ನಿಲ್ಲುತ್ತದೆ. ಪುಟ್ಟ ಗೂಡಿನಂಥ ಹೋಟೆಲ್‌ನಲ್ಲಿ ಬಾಗಿದ ಬೆನ್ನು ಇಟ್ಟುಕೊಂಡು, ಲಕ್ಕವ್ವ ಕುದಿಸಿಕೊಡುವ ಚಹಾದಲ್ಲಿ ಮಾನವೀಯತೆಯ ಆಸ್ವಾದವಿದೆ. ಅದಕ್ಕಾಗಿಯೇ ಜನ ಇಲ್ಲಿಗೆ ಮುಗಿಬೀಳುತ್ತಾರೆ. ಬೆಳಗ್ಗೆ ಇವರ ಕಾಯಕ ಶುರುವಾದರೆ, ರಾತ್ರಿ ಮೊಮ್ಮಗ ಬಂದು ಕರಕೊಂಡು ಹೋಗುವ ವರೆಗೂ ಈ ಅಜ್ಜಿ ಬಿಡುವಿಲ್ಲದೇ ದುಡಿಯುತ್ತಿರುತ್ತಾರೆ.
ಐಶ್ವರ್ಯ ಬ. ಚಿಮ್ಮಲಗಿ