ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನ.22ರಿಂದ 27ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಮೃತವರ್ಷಿಣಿ ಸಭಾಭವನದಲ್ಲಿ ನ.25ರಂದು ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಲೋಕಸಭಾ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಉದ್ಘಾಟಿಸುವರು. ಇಸ್ಕಾನ್ ಸಂಸ್ಥೆಯ ಗೌರ್ ಗೋಪಾಲದಾಸ್ ಅಧ್ಯಕ್ಷತೆ ವಹಿಸುವರು. ಮೈಸೂರಿನ ಫೋಕಸ್ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಟಿ.ರಾಮಾನುಜಮ್, ದಿ ಟೈಮ್ಸ್ ಗ್ರೂಪ್ಸ್‌ನ ಉಪ ಮಹಾಪ್ರಬಂಧಕ ಕದ್ರಿ ನವನೀತ ಶೆಟ್ಟಿ ಮತ್ತು ಪುತ್ತೂರಿನ ಲೇಖಕ ಬೊಳುವಾರು ಮಹಮದ್ ಕುಂಞ ಧಾರ್ಮಿಕ ಉಪನ್ಯಾಸ ನೀಡುವರು.
ನ.26ರಂದು ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ| ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸುವರು. ಕುಮಟಾದ ಸಾಹಿತಿ ಶ್ರೀಧರ ಬಳಗಾರ, ಉಡುಪಿಯ ವೀಣಾ ಬನ್ನಂಜೆ ಮತ್ತು ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡುವರು.
ವಸ್ತುಪ್ರದರ್ಶನ ಮಂಟಪದಲ್ಲಿ ನ.22ರಿಂದ 25ರ ವರೆಗೆ ಪ್ರತಿ ದಿನ ಸಂಜೆ 6ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನ.24ರಂದು ಸಂಜೆ 3ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ, ಸಂಜೆ 5.30ರಿಂದ ನೃತ್ಯ ಕಾರ್ಯಕ್ರಮ, ಸಂಜೆ 7ರಿಂದ ಸಂಗೀತ ಮೇಳ, ರಾತ್ರಿ8.30ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ನ.27ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.
ರಾತ್ರಿ 12 ಗಂಟೆ ಬಳಿಕ ನಡೆಯುವ ಲಕ್ಷ ದೀಪೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತರು ಆಗಮಿಸಲಿದ್ದಾರೆ. ದೀಪೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ನ.22ರಂದು ಹೊಸಕಟ್ಟೆ ಉತ್ಸವ, 23ರಂದು ಕೆರೆಕಟ್ಟೆ ಉತ್ಸವ, 24ರಂದು ಲಲಿತೋದ್ಯಾನ ಉತ್ಸವ, 25ರಂದು ಕಂಚಿಮಾರುಕಟ್ಟೆ ಉತ್ಸವ, 26ರಂದು ಗೌರಿಮಾರುಕಟ್ಟೆ ಉತ್ಸವ, 27ರಂದು ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ನೆರವೇರಲಿದೆ.