Advertisement

Sringeri: ಶಾರದಾ ಪೀಠದಲ್ಲಿ ಲಕ್ಷ ದೀಪೋತ್ಸವ

11:45 PM Nov 28, 2023 | Team Udayavani |

ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಕಾರ್ತಿಕ ಹುಣ್ಣಿಮೆ ದಿನವಾದ ಸೋಮವಾರ ಲಕ್ಷ ದೀಪೋತ್ಸವ ಸಂಭ್ರಮದಿಂದ ನಡೆಯಿತು.

Advertisement

ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಈಶ್ವರಗಿರಿಯಲ್ಲಿ ಮೊದಲ ದೀಪವನ್ನು ಬೆಳಗುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಮಠದ ಸುತ್ತಲೂ ರಂಗವಲ್ಲಿ ಚಿತ್ತಾರಗಳು, ಹೊರ ಪ್ರಾಂಗಣದ ವಿದ್ಯುತ್‌ ದೀಪಾಲಂಕಾರಗಳು ನೋಡುಗರ ಗಮನ ಸೆಳೆದವು. ಮುಖ್ಯಬೀದಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜೋಡಿಸಿದ ಹಣತೆಗಳು, ರಂಗವಲ್ಲಿ ಚಿತ್ತಾರಗಳು, ತಳಿರು ತೋರಣಗಳು ದೀಪೋತ್ಸವಕ್ಕೆ ಮೆರುಗು ನೀಡಿದವು.

ಈಶ್ವರಗಿರಿಯಲ್ಲಿ ಪರಕಾಳಿ ದಹನದ ಧಾರ್ಮಿಕ ಪ್ರಕ್ರಿಯೆ ನೆರವೇರಿತು. ಈಶ್ವರಗಿರಿಯಿಂದ ಜಗದ್ಗುರುಗಳು ಕಾಲ್ನಡಿಗೆಯಲ್ಲಿ ಶ್ರೀಮಠಕ್ಕೆ ಮೆರವಣಿಗೆಯಲ್ಲಿ ವಾದ್ಯಮೇಳ, ಛತ್ರ ಚಾಮರ, ಆನೆ, ಅಶ್ವ ಹಾಗೂ ಸದ್ವಿದ್ಯಾ ಸಂಜೀವೀನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಆಗಮಿಸಿದರು. ಅನಂತರ ಭಕ್ತರು ಶ್ರೀಮಲಹಾನಿಕರೇಶ್ವರ ದೇವಾಲಯದ ಆವರಣ ಹಾಗೂ ಶ್ರೀಮಠದ ಆವರಣದ ತನಕ ಸಹಸ್ರಾರು ಹಣತೆ ಬೆಳಗಿಸಿದರು. ದೀಪೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸಾಂಪ್ರದಾಯಿಕ ಪೂಜಾರಾಧನೆಗಳು, ರುದ್ರಯಾಗ ನೆರವೇರಿತು. ಶ್ರೀಮಲಹಾನಿಕರೇಶ್ವರ ಸ್ವಾಮಿಗೆ ಬಿಲ್ವಾರ್ಚನೆ, ಶ್ರೀಭವಾನೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀಶಾರದಾ, ಶ್ರೀಶಂಕರಾಚಾರ್ಯ, ಶ್ರೀ ವಿದ್ಯಾಶಂಕರ ಸ್ವಾಮಿ ತೆಪ್ಪೋತ್ಸವ, ತುಂಗಾರತಿ ನೆರವೇರಿತು.

ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀಮಠದ ಎದುರು ಹರಿಹರಪುರದ ಸುವರ್ಣ ಕೇಶವ್‌ ತಂಡ ಹಾಕಿದ್ದ ಬೃಹತ್‌ ರಂಗೋಲಿ ಆಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿ ಕಾರಿ ಗೌರಿಶಂಕರ, ಲಕ್ಷ ದೀಪೋತ್ಸವ ಸಮಿತಿಯ ಗಜಾನನ ಎಂ. ಭಟ್‌, ಹನಕೋಡು ವಿಶ್ವೇಶ್ವರ, ತ್ಯಾಗರಾಜ್‌, ಬಾಲಗಂಗಾಧರ್‌, ಜಗದ್ಗುರುಗಳ ಸಹಾಯಕರಾದ ಕೃಷ್ಣಮೂರ್ತಿ ಭಟ್‌, ಶಮಂತಶರ್ಮ, ಅರ್ಚಕರಾದ ಶಿವಕುಮಾರ ಶರ್ಮ, ಸೀತಾರಾಮಶರ್ಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next