ಕುಷ್ಟಗಿ: ತಾಲೂಕಿನಲ್ಲಿರುವ ಕೆರೆಗಳ ನಿರ್ವಹಣೆ ಅಷ್ಟಕಷ್ಟೇ ಆಗಿದೆ. ಅಸಮರ್ಪಕ ಮಳೆಯಿಂದ ಬಹುತೇಕ ಕೆರೆಗಳು ನೀರಿಲ್ಲದೇ ಭಣಗುಡುತ್ತಿವೆ. ಬಹುತೇಕ ಕೆರೆಗಳಿಗೆ ಕಾಯಕಲ್ಪದ ಅಗತ್ಯವಿದೆ. ತಾಲೂಕಿನ ಕೆರೆಗಳ ತುಂಬುವ ಯೋಜನೆ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆಯ ಅಧೀನದಲ್ಲಿರುವ ಕೆರೆಗಳ ಸರಹದ್ದು ಗುರುತಿಸುವಿಕೆ, ಹೂಳೆತ್ತುವ ಕಾರ್ಯ ಪ್ರಸ್ತುತವೆನಿಸಿದೆ.
ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೊಪ್ಪಳ ಗವಿಶ್ರೀಗಳ ಪ್ರೇರಣೆಯೊಂದಿಗೆ ತಾಲೂಕಿನ ನಿಡಶೇಸಿ ಕೆರೆ, ತಾವರಗೇರಾದ ರಾಯನ ಕೆರೆ ಅಭಿವೃದ್ಧಿ ನಂತರ ಸಾರ್ವಜನಿಕರಲ್ಲಿ ಆ ಸಮೂಹಸನ್ನಿ ಕಾಣದಂತಾಗಿದೆ. ಉಳಿದ ಕೆರೆಗಳಲ್ಲಿ ಹೂಳು ತೆಗೆಸದೇ ನಿರ್ಲಕ್ಷಿತವಾಗಿದ್ದರೂ, ಕೆರೆ ತುಂಬುವ ಯೋಜನೆಯ ಜಪದಲ್ಲಿವೆ. ಸತತ ಬರ ಎದುರಿಸುವ ಕುಷ್ಟಗಿ ತಾಲೂಕಿನ 177 ಗ್ರಾಮಗಳಿಗೆ ಸಣ್ಣ ನೀರಾವರಿ, ಜಿಪಂ ಕಂದಾಯ ಇಲಾಖೆ ಸೇರಿದಂತೆ 70ಕ್ಕೂ ಅಧಿಕ ಕೆರೆಗಳಿವೆ. ಅವುಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ ಒಟ್ಟು 41 ಕೆರೆಗಳಿವೆ. ಅದರಲ್ಲಿ 20 ಜಿನಗು ಕೆರೆ, 21 ನೀರಾವರಿ ಕೆರೆಗಳಿವೆ. ಜಿನಗು ಕೆರೆಗಳು ಅಂತರ್ಜಲಮಟ್ಟ ವೃದ್ಧಿಸುವ ಹಿನ್ನೆಲೆಯಲ್ಲಿ ನಿರ್ಮಾಣವಾದರೆ, ನೀರಾವರಿ ಕೆರೆಗಳು ಕಾಲುವೆಗಳ ಮೂಲಕ ಜಮೀನುಗಳಿಗೆ ನೀರುಣಿಸುವುದಾಗಿದೆ. ಆದರೆ ಈ ತಾಲೂಕಿನಲ್ಲಿ ಅಸಮರ್ಪಕ ಮಳೆ ಹಿನ್ನೆಲೆಯಲ್ಲಿ ಎಲ್ಲವೂ ಜಿನಗು ಕೆರೆಯಂತಾಗಿವೆ.
ಬಯಲು ಖಜಾನೆಯಂತಿರುವ ಕೆರೆಯ ಪ್ರದೇಶ ಒತ್ತುವರಿ, ಕೆರೆಯಲ್ಲಿರುವ ಮರಳು, ಮರಂ ಮಣ್ಣು ಅಕ್ರಮ ಎತ್ತುವಳಿಗೆ ಕಡಿವಾಣ ಇಲ್ಲದಂತಾಗಿದೆ. ತಾಲೂಕಿನ ಹಿರೇನಂದಿಹಾಳ ಕೆರೆ ಪ್ರದೇಶದಲ್ಲಿ ಅಕ್ರಮ ಲೂಟಿಯಿಂದ ಮರಂ ನಿಕ್ಷೇಪ ಬರಿದಾಗುತ್ತಿದೆ. ಸುಮಾರು ಹತ್ತಾರು ಅಡಿಗಳವರೆಗೆ ಮರಂ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ, ಇಲಾಖೆ ಈ ಅಕ್ರಮ ತಡೆಯುವಲ್ಲಿ ಅಸಹಾಯಕವಾಗಿದೆ. ಅಲ್ಲದೇ ಈ ಕೆರೆಯ ಬಗ್ಗೆ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಕೆರೆಯ ಪ್ರದೇಶದಲ್ಲಿ ನೀಲಗಿರಿ ಕಾಡಿನಂತೆ ಬೆಳೆದಿದ್ದು, ಕೆರೆ ಅಸ್ತಿತ್ವ ಕಳೆದುಕೊಂಡಿದೆ. ಇನ್ನೂ ಕೆಬಿಜೆಎನ್‌ಎಲ್ ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ ನೀರಾವರಿಯಲ್ಲಿ ಕೆರೆ ತುಂಬಿಸುವ ಯೋಜನೆಯಲ್ಲಿ ಅಂಟರಠಾಣಾ ಪುರಾತನ ಕೆರೆ ತುಂಬಿಸಲು ಯೋಜಿಸಿದೆ. ಆದರೆ ಇಲ್ಲಿ ಕೆರೆಯ ಅಸ್ತಿತ್ವವೇ ಇಲ್ಲದಂತಾಗಿದೆ. ಅಕ್ರಮ ಕ್ವಾರಿ ಗಣಿಗಾರಿಕೆಯಲ್ಲಿ ಮೂಲ ಕೆರೆಯೇ ಕಣ್ಮರೆಯಾಗಿದೆ. ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ವಿಭಾಗೀಯ ಕಚೇರಿ ಕೊಪ್ಪಳಕ್ಕೆ ಸ್ಥಳಾಂತರಗೊಂಡ ಮೇಲೆ, ಕೆರೆಗಳ ಬಗ್ಗೆ ನಿಗಾ ಕಡಿಮೆಯಾಗಿದೆ.
ಅನುದಾನ: ನಿಡಶೇಸಿ ಕೆರೆ ಮೂಲ ಒಡ್ಡಿನ ಬಲವರ್ಧನೆಗಾಗಿ 2 ಕೋಟಿ ರೂ. ಮಂಜೂರಿಯಾಗಿದೆ. ಸದರಿ ಮೊತ್ತದಲ್ಲಿ ಮೂಲ ಒಡ್ಡಿನ ಒಳಮೈ ಕಪ್ಪು ಮಣ್ಣಿನವರೆಗೆ ತೆಗೆದು, ಪುನಃ ಕಪ್ಪು ಮಣ್ಣನ್ನು ಸೇರಿಸಿ, ಲೆವಲಿಂಗ್, ವಾಟರಿಂಗ್ ಮೂಲಕ ನಂತರ ಒಡ್ಡಿಗೆ ಸ್ಟೋನ್ ಪಿಚ್ಚಿಂಗ್‌ನಿಂದ ಸುಭದ್ರಗೊಳಿಸುವ ಯೋಜನೆ ಇದೆ. ಜುಮ್ಲಾಪೂರ ಕೆರೆಗೆ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನೀರಾವರಿ ಕಾಲುವೆ, ಹಳೆ ಕಾಲುವೆ ದುರಸ್ತಿ ಬಂಡ್ ಅಭಿವೃದ್ಧಿಗೆ 15.80 ಲಕ್ಷ ರೂ. ವೇಸ್ಟವೇರ್ ದುರಸ್ತಿಗೆ 14.70 ಲಕ್ಷ ರೂ. ಗೇಟ್, ಕ್ಯಾಚ್‌ಮೆಂಟ್ ಏರಿಯಾ ಟ್ರೀಟ್‌ಮೆಂಟ್‌ಗೆ 4 ಲಕ್ಷರೂ. ವ್ಯಯಿಸಲಾಗುತ್ತಿದೆ. ಇನ್ನುಳಿದಂತೆ ಕೆರೆಗಳ ನಿರ್ವಹಣೆ, ದುರಸ್ತಿಗಾಗಿ ಒಟ್ಟಾರೆಯಾಗಿ 25.91 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಮೊತ್ತದಲ್ಲಿ ಕೆರೆಗಳಲ್ಲಿ ಬೆಳೆದಿರುವ ಜಂಗಲ್ ಕಟಿಂಗ್, ಸಣ್ಣಪುಟ್ಟ ದುರಸ್ತಿ ಕೆಲಸಕ್ಕಾಗಿ ಬಿಡುಗಡೆಯಾಗಿರುವುದಾಗಿ ಜೆಇ ರಾಜು ಕಟ್ಟಿಮನಿ ವಿವರಿಸಿದರು.
ಕೆರೆ ತುಂಬುವ ಯೋಜನೆ : ಕಳೆದ ವರ್ಷ 498 ಕೋಟಿ ರೂ. ವೆಚ್ಚದಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರಿಂದ 2.3 ಕ್ಯೂಸೆಕ್ಸ್ ನೀರನ್ನು ತಾಲೂಕಿನ 15 ಕೆರೆಗಳಿಗೆ ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಯೋಜನೆ ಇಲಾಖೆಯ ಮಾಹಿತಿ ಪ್ರಕಾರ ಟೆಂಡರ್ ಕೊನೆಯ ಹಂತದಲ್ಲಿದ್ದು, ಶೀಘ್ರವೇ ಕಾರ್ಯಾರಂಭಿಸುವ ನಿರೀಕ್ಷೆಗಳಿವೆ. ಅಲ್ಲದೇ ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆಯ 3ನೇ ಹಂತದ ಕಾಮಗಾರಿಯಲ್ಲಿ ಕುಷ್ಟಗಿ ತಾಲೂಕಿನ ಹೂಲಗೇರಾ ಬ್ರ್ಯಾಂಚ್ ನಲ್ಲಿ ಅಂಟರಠಾಣ, ಹೂಲಗೇರಿ, ಕಾಟಾಪೂರ, ಅಚನೂರು, ವಕ್ಕಂದುರ್ಗ, ರಾಂಪೂರ, ಕೊಡ್ತಗೇರಿ, ದೇವಲಾಪೂರ ಕೆರೆಗಳು, ಹನುಮಸಾಗರ ಬ್ರಾ ಬ್ರ್ಯಾಂಚ್ ಗೆ ಯಲಬುಣಚಿ ಕೆರೆ ಕೆವೈಕೆ ಮೇನ್ (ಕುಷ್ಟಗಿ, ಯಲಬುರ್ಗಾ, ಕನಕಗಿರಿ) ಚಳಗೇರಿ, ಹಿರೇನಂದಿಹಾಳ ಶಾಖಾಪೂರ ಹಾಗೂ ತಾವರಗೇರಾ ಬ್ರ್ಯಾಂಚ್ ನಲ್ಲಿ ಗಂಗನಾಳ, ಹಿರೇಮನ್ನಾಪೂರ ಕೆರೆಗಳನ್ನು ತುಂಬಿಸುವ ಯೋಜನೆ ಇದೆ.
ನೀರಿನ ಬವಣೆ ನೀಗಲು ಸರ್ಕಾರ ಕೊಳವೆಬಾವಿ ಕೊರೆಸುವುದು, ಟ್ಯಾಂಕರ್ ಮೂಲಕ ನೀರು ಪೂರೈಸುವುದೇ ಆದ್ಯತೆಯಾಗಿರುತ್ತದೆ. ಇದಕ್ಕೆ ವ್ಯಯಿಸುವ ಹಣದಲ್ಲಿ ಇರುವ ಕೆರೆಗಳ ದುರಸ್ತಿ, ಮೂಲ ಒಡ್ಡು ಸದೃಢಗೊಳಿಸಬೇಕಿದೆ. ಕೆರೆ ತುಂಬುವ ಯೋಜನೆ ಹಾಗೂ ಕೃಷ್ಣಾ ಬಿಸ್ಕೀಂ ಯೋಜನೆ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. –
ದೇವೇಂದ್ರಪ್ಪ ಬಳೂಟಗಿ, ಅಧ್ಯಕ್ಷರು, ಕೆರೆ ಅಭಿವೃದ್ಧಿ ಸಮಿತಿ
–ಮಂಜುನಾಥ ಮಹಾಲಿಂಗಪುರ