ಬೆಂಗಳೂರು: ಬೆಳ್ಳಂದೂರು ಹಾಗೂ ವರ್ತೂರು ಕೆರೆ ಸಂಬಂಧ ಹಲವು ಬಾರಿ ಹಸಿರು ನ್ಯಾಯಮಂಡಳಿ ಕೆಂಗಣ್ಣಿಗೆ ಗುರಿಯಾದ ಬಿಡಿಎ, ಕೊನೆಗೂ ಆಡಳಿತ ಮಂಡಳಿ ಸಭೆಯಲ್ಲಿ ಕಾಮಗಾರಿ ಆರಂಭಿಸಲು ಒಪ್ಪಿಗೆ ಪಡೆದಿದೆ. ಆದರೆ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ. ಕೋವಿಡ್ 19 ಹಾವಳಿ ಮತ್ತು ಮಳೆಗಾಲದ ಹಿನ್ನೆಲೆಯಲ್ಲಿ ಸಕಾಲದಲ್ಲಿ ನಿರೀಕ್ಷಿತ ಗುರಿ ಸಾಧನೆ ಅನುಮಾನವಾಗಿದ್ದು, ಇದು ಕಾಮಗಾರಿ ವಿಳಂಬ ರೂಪದಲ್ಲಿ ಪರಿಣಮಿಸಲಿದೆ.
ಪ್ರಾಧಿಕಾರವು 245.89 ಕೋಟಿ ರೂ. ವೆಚ್ಚದಲ್ಲಿ ಬೆಳ್ಳಂದೂರು ಕೆರೆ ಹಾಗೂ 116.95 ಕೋಟಿ ರೂ. ವೆಚ್ಚದಲ್ಲಿ ವರ್ತೂರು ಕೆರೆ ಅಭಿವೃದ್ಧಿಗೆ ಜನವರಿಯಲ್ಲಿಯೇ ಟೆಂಡರ್ ಆಹ್ವಾನಿಸಿತ್ತು. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿತ್ತು. ಆದರೆ, ಕೋವಿಡ್ 19 ಹಿನ್ನೆಲೆ ಲಾಕ್‌ಡೌನ್ ನಿಂದ ಕಾಮಗಾರಿ ವಿಳಂಬವಾಯಿತು. ಆದರೆ ಈಗ ಮುಂಗಾರು ಮಳೆ ಶುರುವಾಗಿದ್ದು, ಹೂಳೆತ್ತುವುದು ಸವಾಲಿನ ಕೆಲಸವಾಗಿದೆ.
ಕೆರೆಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿ ಈಗಾಗಲೇ ಆರು ತಿಂಗಳು ಕಳೆದಿದ್ದು, ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಇನ್ನಷ್ಟು ತಿಂಗಳು ಬೇಕಾಗುತ್ತದೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಆರ್‌ಎಂಎನ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಹಾಗೂ ವರ್ತೂರು ಕೆರೆ ಅಭಿವೃದ್ಧಿಗೆ ಸ್ಟಾರ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಟೆಂಡರ್ ಪಡೆದಿದ್ದು, ಪ್ರಾಧಿಕಾರ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಇನ್ನೂ ಈ ಕಂಪನಿಗಳಿಗೆ ಕಾಮಗಾರಿಯ ಕಾರ್ಯಾದೇಶ ನೀಡಿಲ್ಲ. ಆದರೂ, ಎನ್‌ಜಿಟಿಗೆ ಅನುಪಾಲನಾ ವರದಿ ಸಲ್ಲಿಸಬೇಕಾಗಿರುವುದರಿಂದ ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ಪಡೆದು ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಆದರೆ ಈಗ ಕೋವಿಡ್ 19 ಭೀತಿ ಹಾಗೂ ಮಳೆಗಾಲದಿಂದ ನಿರ್ದಿಷ್ಟ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಕೆರೆಗಳ ಹೂಳು ಬಳಸಿ ಇಟ್ಟಿಗೆ ತಯಾರಿ:ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ಹೆಚ್ಚಾಗಿ ಹೂಳು ತುಂಬಿಕೊಂಡಿದ್ದು, ಅದನ್ನು ಬಳಸಿ ಇಟ್ಟಿಗೆ ತಯಾರಿಸಲು ಬಿಡಿಎ ಅವಕಾಶ ನೀಡಿತ್ತು. ಈ ಸಂಬಂಧ ಇಟ್ಟಿಗೆ ತಯಾರಿಕಾ ಘಟಕಗಳಿಗೆ ತಿಳಿಸಿತ್ತು. ಮಳೆಗಾಲದಲ್ಲಿ ಹೂಳೆತ್ತಲು ಮುಂದಾದರೂ, ಇಟ್ಟಿಗೆ ತಯಾರಿಗೆ ಕಷ್ಟವಾಗಲಿದೆ.
ಏನೆಲ್ಲಾ ಅಭಿವದ್ಧಿ: ಬೆಳ್ಳಂದೂರು ಕೆರೆ, ವರ್ತೂರು ಕೆರೆಯಲ್ಲಿ ಹೂಳೆತ್ತುವುದು, ಜೌಗು ಪ್ರದೇಶ (ವೆಟ್‌ಲ್ಯಾಂಡ್) ಅಭಿವೃದ್ಧಿ, ಕೊಳಗಳ ನಿರ್ಮಾಣ, ನೀರು ಸಂಸ್ಕರಣಾ ಘಟಕ ನಿರ್ಮಾಣ, ದಂಡೆಗಳನ್ನು ಬಲಪಡಿಸು ವುದು, ನಡಿಗೆ ಪಥ, ಸೈಕಲ್ ಪಥ, ಬಯಲು ರಂಗಮಂದಿರಗಳನ್ನು ನಿರ್ಮಾಣ ಕಾಮಗಾರಿ ಕೈಗೊಳ್ಳಲು ಬಿಡಿಎ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿತ್ತು. ಆದರೆ, ಹಸಿರು ನ್ಯಾಯಮಂಡಳಿ ಸೂಚಿಸಿರುವ ಕೆಲವು ಕಾಮಗಾರಿಗಳನ್ನೂ ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.
ಬೆಳ್ಳಂದೂರು ಹಾಗೂ ವರ್ತೂರು ಕೆರೆ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿಯಲ್ಲಿ ಒಪ್ಪಿಗೆ ನೀಡಲಾಗಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣ ಕಾಮಗಾರಿ ಆರಂಭಿಸಲಾ ಗುವುದು. ಮಳೆಗಾಲ ಆರಂಭ ಹಾಗೂ ಕೋವಿಡ್ 19 ಹಿನ್ನೆಲೆ ಹೂಳೆತ್ತುವ ಕಾರ್ಯ ಮುಂದೂಡ ಲಾಗುವುದು. ಈ ಸಮಯದಲ್ಲಿ ಉಳಿದ ಕಾರ್ಯ ನಿರಂತರವಾಗಿ ನಡೆಯಲಿವೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
-ಡಾ.ಎಚ್.ಆರ್.ಮಹಾದೇವ್, ಬಿಡಿಎ ಆಯುಕ್ತರು
* ಮಂಜುನಾಥ ಗಂಗಾವತಿ