ದೇವನಹಳ್ಳಿ: ಮಳೆಗಾಲದಲ್ಲಿ ನೀರು ನಿಂತು ಅಂತರ್ಜಲ ಮಟ್ಟ ಹೆಚ್ಚಿದರೆ, ಕೊಳವೆ ಬಾವಿಗಳಲ್ಲಿ ನೀರು ಶೇಖರಣೆಯಾಗಲು ಸಹಕಾರಿಯಾಗುತ್ತದೆ. ಎಲ್ಲಾ ಗ್ರಾಮದ ರೈತರು ಕೆರೆ ಅಭಿವೃದ್ಧಿಗೆ ಸಹಕಾರ ನೀಡಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಯೋಜನಾಧಿಕಾರಿ ವಸಂತ್ ಸಾಲಿಯಾನ ಹೇಳಿದರು.
ತಾಲೂಕಿನ ಬಿದಲಪುರ ಗ್ರಾಮದ ಕೆರೆ ಹೂಳೆತ್ತುವ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿ, ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ 150 ಕರೆಗಳು ಅಭಿವೃದ್ಧಿ ಮಾಡಲಾಗುತ್ತದೆ. ಈ ವರ್ಷ ಸರ್ಕಾರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿ ಕೆರೆ ಸಂಜೀವಿನಿ ಕಾರ್ಯಕ್ರಮ ರೂಪಿಸಿಕೊಂಡು ಜಿಲ್ಲೆಯಲ್ಲಿ 3 ಕೆರೆಗಳು ಸೇರಿದ್ದು, ಇದರಲ್ಲಿ ಬಿದಲಪುರ ಗ್ರಾಮದ ಕೆರೆಯು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.
ಕೆರೆ ಅಭಿವೃದ್ಧಿ ಸಮಿತಿ ರಚನೆ: ಗ್ರಾಮದ ರೈತರು ಕೆರೆ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿಕೊಂಡು, ಕೆರೆ ಹೂಳೆತ್ತುವುದಕ್ಕೆ ಸಹಕಾರ ನೀಡಿದರೆ ಕರೆ ಅಭಿವೃದ್ಧಿ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಕೆರೆಗಳಲ್ಲಿ ಹೂಳೆತ್ತುವ ಮುಖಾಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮುಂದಾಗಿದೆ. ಇದರಿಂದ ಮಳೆ ನೀರು ನಿಂತು ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕೊಳವೆ ಬಾವಿ ಹತ್ತಿರ ಇಂಗುಗುಂಡಿ ನಿರ್ಮಿಸಿ: ನಲ್ಲೂರು ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ, ಗ್ರಾಪಂನಿಂದ ಉದ್ಯೋಗ ಖಾತರಿ ಯೋಜನೆ ಮೂಲಕ ಕೊಳವೆ ಬಾವಿ ಹತ್ತಿರ ಇಂಗು ಗುಂಡಿ ನಿರ್ಮಾಣ ಮಾಡಿಸಿದರೆ ಅನುಕೂಲವಾಗುತ್ತದೆ. ಮಳೆಯ ನೀರನ್ನು ಭೂಮಿಯಲ್ಲಿ ಇಂಗಿದರೆ, ಕೊಳವೆ ಬಾವಿಯಲ್ಲಿ ನೀರು ಸಿಗುತ್ತದೆ. ಇಂದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಎಲ್ಲರೂ ಸಹಕರಿಸಬೇಕು.
ಮನುಷ್ಯ ಮುಂದಿನ ದಿನಗಳಲ್ಲಿ ನೀರಿಗೂ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಮನುಷ್ಯರು ಎಚ್ಚೆತ್ತುಕೊಂಡು ಪರಿಸರದ ಬಗ್ಗೆ ಕಾಳಜಿ ವಹಿಸಿ, ನೀಲಗಿರಿಯನ್ನು ನಿರ್ಣಾಮ ಮಾಡಬೇಕು. ಕರೆಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಎಲ್ಲರೂ ಸಹಕಾರ ನೀಡಿದರೆ, ಮಳೆ ನೀರನ್ನು ಕೆರೆಗಳಲ್ಲಿ ನೀರು ನಿಂತರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು.
ಈ ವೇಳೆ ನಲ್ಲೂರು ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಲಲಿತೇಶ್, ಕೆರೆ ಸಮಿತಿ ಅಧ್ಯಕ್ಷ ನಾಗರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಅಕ್ಷಿತಾ ರೈ, ಕೃಷಿ ಮಾಹಿತಿ ಅಧಿಕಾರಿ ಹರೀಶ್, ಗ್ರಾಪಂ ಸದಸ್ಯರಾದ ಸೋಮಶೇಖರ್, ಮಹಾಲಕ್ಷ್ಮೀ, ಗಂಗರೆಡ್ಡಿ, ಮುಖಂಡರಾದ ಶ್ರೀನಿವಾಸ್, ವೆಂಕಟರಾಜ್, ಸತೀಶ್, ರವಿ, ವೆಂಕಟೇಶ್ ಹಾಜರಿದ್ದರು.