Advertisement

ಕೆರೆ ಒಡೆದು ಹಾನಿ: ಇನ್ನೂ ಸಿಕ್ಕಿಲ್ಲ ಪರಿಹಾರ

01:15 PM Sep 01, 2017 | Team Udayavani |

ಬೀದರ: ಕಳಪೆ ಕಾಮಗಾರಿ ಪರಿಣಾಮ ಕಳೆದ ಮುಂಗಾರಿನಲ್ಲಿ ಜಿಲ್ಲೆಯ ಐದು ಕೆರೆಗಳ
ಒಡ್ಡು ಒಡೆದು ಸುತ್ತಲಿನ ನೂರಾರು ಎಕರೆ ಭೂಮಿಯಲ್ಲಿನ ಬೆಳೆ ಮಾತ್ರವಲ್ಲ ಫಲವತ್ತಾದ
ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಪ್ರದೇಶ ಮರುಭೂಮಿಯಂತಾಗಿದೆ. ಬೀಜ ಬಿತ್ತಲು
ಆಗದೇ, ಇತ್ತ ಸರ್ಕಾರದ ನಯಾ ಪೈಸೆ ಪರಿಹಾರ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಕಳೆದ ಮುಂಗಾರಿನಲ್ಲಿ ಅತಿವೃಷ್ಟಿಯಾದ ಪರಿಣಾಮ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಔರಾದ ತಾಲೂಕಿನ ಶೆಂಬೆಳ್ಳಿ, ಚಂದನಕೆರೆ ಹಾಗೂ ಭಾಲ್ಕಿ ತಾಲೂಕಿನ ಕಳಸದಾಳ, ಹುಪಳಾ ಮತ್ತು ಅಂಬೆಸಾಂಗವಿ ಕೆರೆಗಳು ಒಡೆದು ಅಪಾರ ಹಾನಿ ಸಂಭವಿಸಿತ್ತು. ಕೋಟ್ಯಂತರ ರೂ. ವೆಚ್ಚದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇದರಿಂದ ಹೊಲಗಳಲ್ಲಿ ಹಸಿರು ಕಂಗೊಳಿಸಬಹುದು
ಎಂದು ರೈತರು ಖುಷಿಯಲ್ಲಿದ್ದರು. ಆದರೆ, ಜಮೀನುಗಳಿಗೆ ನೀರುಣಿಸುವ ಮುನ್ನವೇ ಕೆರೆಗಳು ಒಡೆದು ಅನ್ನದಾತರ ಕನಸಿಗೆ ತಣ್ಣೀರೆರೆಚಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಎರಡೂಮೂರು ದಿನಗಳಲ್ಲೇ ಕೆರೆಗಳು ಒಡೆದು ಒಡಲು ಖಾಲಿ ಆಗಿತ್ತು. ನೀರಿನ ರಭಸಕ್ಕೆ ಮುಂಗಾರು ಮಳೆ ಮಾತ್ರವಲ್ಲ ಫಲವತ್ತಾದ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ 600 ಎಕರೆ ಭೂಮಿ ಸಂಪೂರ್ಣ ಹಾಳಾಗಿದೆ. ಮಾತ್ರವಲ್ಲದೇ ಬಿತ್ತನೆಗೆ ಬಾರದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಒಡೆದ ಕೆರೆಗಳ ದುರಸ್ತಿಗೆ ಕೋಟ್ಯಂತರ ರೂ. ಅನುದಾನ ಕಲ್ಪಿಸಿರುವ ಸರ್ಕಾರ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಪ್ರದರ್ಶಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗಿದ್ದರಿಂದ ಬಿತ್ತನೆಗೆ ಭೂಮಿ ಸರಿಮಾಡಲು ರೈತರಿಗೆ ಸಾವಿರಾರು ರೂ. ಬೇಕು. ಕೆರೆ ಮಣ್ಣು ತಂದು ಫಲವತ್ತೆತೆ ಮಾಡಿಕೊಳ್ಳಬೇಕು. ಆದರೆ, ಸರ್ಕಾರ ಕೇವಲ 5,000 ರೂ. ಹಾನಿ ಪರಿಹಾರಕ್ಕೆ
ನಿಗದಿಗೊಳಿಸಿದೆ. ನಾಲ್ಕು ಕೆರೆಗಳಿಂದ 600 ಎಕರೆ ಹಾನಿಗೆ ಪರಿಹಾರ ಕೋರಿ ಜಿಲ್ಲಾಡಳಿತ ಕೇವಲ 30 ಲಕ್ಷ ರೂ. ಮೊತ್ತದ ಪ್ರಸ್ತಾವನೆ ಸಲ್ಲಿಸಿದೆ. ಆ ಹಣ ಸಹ ರೈತರಿಗೆ ಸಿಕ್ಕಿಲ್ಲ. ಪ್ರಸ್ತಾವನೆ ಸಲ್ಲಿಕೆಯಾಗಿ ತಿಂಗಳುಗಳೇ ಕಳೆದರೂ ಹಣ ಬಿಡುಗಡೆಯಾಗಿಲ್ಲ. ಶೆಂಬೆಳ್ಳಿ ಕೆರೆಯಿಂದ 321 ಎಕರೆ ಜಮೀನು ಹಾಳಾಗಿದ್ದು, 17.23 ಲಕ್ಷ ರೂ., ಚಂದನಕೆರೆಯಿಂದ 22 ಎಕರೆ ಭೂಮಿ ಹಾಳಾಗಿದ್ದು, 1.07 ಲಕ್ಷ ರೂ. ಪರಿಹಾರ, ಕಳಸದಾಳ ಕೆರೆಯಿಂದ 71.41 ಎಕರೆ ಭೂಮಿ ಹಾಳಾಗಿದ್ದು, 3.83 ಲಕ್ಷ ರೂ. ಹುಪಳಾ ಕೆರೆಯಿಂದ 72.66 ಎಕರೆ ಭೂಮಿ ಹಾಳಾಗಿದ್ದು, 3.85 ಲಕ್ಷ ರೂ. ಹಾಗೂ ಅಂಬೆಸಾಂಗವಿ ಕೆರೆಯಿಂದ 57.79 ಎಕರೆ ಜಮೀನು ಹಾಳಾಗಿದ್ದು, 3.62 ಲಕ್ಷ ರೂ. ಪರಿಹಾರ ಕೋರಿ
ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್‌.ಕೆ. ಪಾಟೀಲ ಮತ್ತು ಜಿಲ್ಲಾ
ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶೆಂಬೆಳ್ಳಿ ಕೆರೆ ವೀಕ್ಷಿಸಿದ್ದರು. ಶೀಘ್ರ ಪರಿಹಾರ ಒದಗಿಸುವಲ್ಲಿ
ಕ್ರಮ ವಹಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಹೆಕ್ಟೇರ್‌ಗೆ ಕನಿಷ್ಠ 1 ಲಕ್ಷ ರೂ. ಪರಿಹಾರ ನೀಡಿದರೆ ಮಾತ್ರ ರೈತರು ಮತ್ತೆ ತಮ್ಮ ಬದುಕು ಸುಧಾರಿಸಿಕೊಳ್ಳಲು ಸಾಧ್ಯ ಎಂದು ಅಳಲು ತೋಡಿಕೊಂಡಿದ್ದರು.

ಕೆರೆ ಹಾನಿಯಿಂದ ರೈತರು ಹತಾಶರಾಗಿದ್ದಾವೆ. ಶೀಘ್ರ ಹಾನಿ ಪರಿಹಾರ ದೊರಕುವಂತೆ
ವ್ಯವಸ್ಥೆ ಮಾಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಮುಖ್ಯ
ಮುಖ್ಯಮಂತ್ರಿಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

Advertisement

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next