Advertisement

ಲಾೖಲ: ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ

04:03 PM Jan 03, 2018 | Team Udayavani |

ಬೆಳ್ತಂಗಡಿ: ಕೇವಲ ಎರಡು ಮಂದಿ ಮಾತ್ರ ಸಂಸದರಾಗಿದ್ದ ಬಿಜೆಪಿ ಪಕ್ಷ ಅಟಲ್‌ ಬಿಹಾರಿ ವಾಜಪೇಯಿ ಅವರ ಆತ್ಮವಿಶ್ವಾಸ ಮತ್ತು ಛಲದ ನಡೆಯಿಂದ 2014ರ ವೇಳೆಗೆ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದಿಂದ ಅಧಿಕಾರ ಹಿಡಿಯುವಂತಾಯಿತು. ಆದ್ದರಿಂದ ಅವರ ಪ್ರೇರಣೆ ಪಡೆದು ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಪಕ್ಷ ಅಧಿಕಾರಕ್ಕೆ ಬರಬೇಕು. ಬೆಳ್ತಂಗಡಿಯಿಂದಲೂ ಪಕ್ಷದ ಶಾಸಕರು ಗೆದ್ದು ಬರಬೇಕಾಗಿದ್ದು, ಅದಕ್ಕಾಗಿ ಕಾರ್ಯಕರ್ತರು ಪ್ರತೀ ಬೂತ್‌ನಲ್ಲೂ ಬಿಜೆಪಿಗೆ ಗೆಲುವಾಗುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು.

Advertisement

ಬಿಜೆಪಿ ಮತ್ತು ಯುವ ಮೋರ್ಚಾ ವತಿಯಿಂದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 93ನೇ ಜನ್ಮ ದಿನಾಚರಣೆಯ ಅಂಗವಾಗಿ ಲಾೖಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜ ಮಾತನಾಡಿ, ಪ್ರಧಾನಮಂತ್ರಿ ಸಡಕ್‌ ರಸ್ತೆ ಯೋಜನೆ ಮೂಲಕ ಹಳ್ಳಿಗಳನ್ನು ಪಟ್ಟಣಕ್ಕೆ ಸಂಪರ್ಕಿಸಿದ ಮಹಾನ್‌ ಸಾಧನೆ ಮಾಡಿದವರು ವಾಜಪೇಯಿ. ಸರ್ವ ಶಿಕ್ಷಣ ಅಭಿಯಾನ ಮೊದಲಾದ ಕ್ರಿಯಾತ್ಮಕ ಯೋಜನೆ ಅವರಿಂದ ಆರಂಭವಾಗಿದ್ದರೆ ಕೇವಲ 12 ರೂ.ಗಳ ಬ್ಯಾಂಕ್‌ ಖಾತೆ ಪಾವತಿ ಮೂಲಕದ ವಿಮಾ ಸೌಲಭ್ಯ ನೀಡಿ ದೇಶದ ಪ್ರತಿಯೊಬ್ಬರ ವೈಯಕ್ತಿಕ ಭದ್ರತೆ ಒದಗಿಸಿಕೊಟ್ಟವರು ಈಗಿನ ಪ್ರಧಾನಿ ನರೇಂದ್ರ ಮೋದಿ ಎಂದರು.

ಸಮಾವೇಶಕ್ಕೆ ದಿನ ನಿಗದಿ
ಬಿಜೆಪಿ ಮಂಡಲ ಅಧ್ಯಕ್ಷ ರಂಜನ್‌ ಜಿ. ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ. 27ಕ್ಕೆ ಬೂತ್‌ ಮಟ್ಟದ ನವರತ್ನಗಳು ಎಂದು ಗುರುತಿಸಲ್ಪಟ್ಟವರ ಸಮಾವೇಶಕ್ಕೆ ದಿನ ನಿಗದಿಯಾಗಿದೆ. 29ಕ್ಕೆ ಪರಿವಾರ ಸಂಘಟನೆಗಳ ಸಭೆ ಕರೆಯಲಾಗಿದೆ. ಸದ್ಯದಲ್ಲೇ ಎದುರಾಗುವ ಚುನಾವಣೆಯ ಅಂಗವಾಗಿ ಇನ್ನು ಕಾರ್ಯಕರ್ತರಿಗೆ ಬಿಡುವಿಲ್ಲದ ಚಟುವಟಿಕೆಗಳಿವೆ. ಎಲ್ಲದರಲ್ಲೂ ಭಾಗಿಗಳಾಗಿ ಪಕ್ಷದ ಗೆಲುವಿನತ್ತ ಶ್ರಮವಹಿಸಬೇಕು ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂಪತ್‌ ಬಿ. ಸುವರ್ಣ ಮಾತನಾಡಿ, 1977ರಲ್ಲಿ ಬಿಜೆಪಿಯಿಂದ ಕೇವಲ ಇಬ್ಬರು ಮಾತ್ರ ಸಂಸದರಿದ್ದ ಸಂಸತ್‌ನಲ್ಲಿ ವಾಜಪೇಯಿ ಅವರ ಮಾತು ಅಂದು ಪ್ರಬಲ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ ನವರಿಗೆ ಅಪಹಾಸ್ಯವಾಗಿ ಕಂಡರೂ ಅವರ ಮಾತಿನ ಪ್ರೇರಣೆಯಿಂದ ಮುನ್ನಡೆದ ಪಕ್ಷ ಅದೇ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣ ಹಿಂದಿಕ್ಕಿದ್ದು ಇತಿಹಾಸ. ಪ್ರಾರಂಭದಲ್ಲಿ ಪಕ್ಷ ವಾಜಪೇಯಿ ಹೆಸರಿನಲ್ಲೇ ಗ್ರಾಮ ಗ್ರಾಮಕ್ಕೆ ಮತಯಾಚನೆ ಮಾಡಲು ತೆರಳಿ ಪಕ್ಷಕ್ಕೆ ಅತೀ ಹೆಚ್ಚು ಪ್ರಚಾರ ಬರುವಂತಾಗಿತ್ತು. ಅಂತಹ ಧೀಮಂತ ವ್ಯಕ್ತಿಯ ಹುಟ್ಟುಹಬ್ಬ ಈ ರೀತಿ ವಿಶಿಷ್ಟವಾಗಿ ಆಚರಿಸುವ ಕನಸು ಕಾಣಲಾಯಿತು ಎಂದರು. ಜಿ.ಪಂ. ಸದಸ್ಯರಾದ ಕೆ. ಕೊರಗಪ್ಪ ನಾಯ್ಕ ಮತ್ತು ಸೌಮ್ಯಲತಾ ಜಯಂತ ಗೌಡ, ಬೆಳ್ತಂಗಡಿ ತಾ.ಪಂ. ಉಪಾ ಧ್ಯಕ್ಷೆ ವೇದಾವತಿ, ಲಾೖಲ ಶಕ್ತಿ ಕೇಂದ್ರದ ಅಧ್ಯಕ್ಷ ಭರತ್‌ ಕುಮಾರ್‌ ಬಂಗಾಡಿ, ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ರಕ್ಷಿತ್‌ ಶೆಟ್ಟಿ ಪಣೆಕ್ಕರ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ
ಉಪ್ಪಡ್ಕ ಮತ್ತು ಸೀತಾರಾಮ ಬಿ. ಎಸ್‌. ಉಪಸ್ಥಿತರಿದ್ದರು.

Advertisement

ಲಾೖಲ ಗ್ರಾಮದಲ್ಲಿ ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ಜಗನ್ನಾಥ ಎಂ. (ಪೈಂಟರ್‌), ರಾಮ ಕುಂಬಾರ (ಕುಂಬಾರಿಕೆ) ಮತ್ತು ಸುಬ್ರಹ್ಮಣ್ಯ (ಟೈಲರ್‌) ಅವರನ್ನು ಯುವ ಮೋರ್ಚಾ ವತಿಯಿಂದ ಅಟಲ್‌ಜೀ ಜನಸ್ನೇಹಿ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಸುಧಾಕರ ಬಿ.ಎಲ್‌., ರುಕ್ಮಯ್ಯ ಆಚಾರ್ಯ ಕನ್ನಾಜೆ, ಗಿರೀಶ್‌ ಡೋಂಗ್ರೆ ಅವರಿಗೆ ಮನ್ನಣೆ ನೀಡಲಾಯಿತು. ಮಾಹಿತಿ ಕಾರ್ಯಕ್ರಮ ನಡೆಸಿ ಕೊಟ್ಟ ಉಷಾ ಕಾಮತ್‌, ಉದಯ ಕುಮಾರ್‌ ಬಿ.ಕೆ., ರಶ್ಮಿ ಮತ್ತು ಶಿವಪ್ಪ ರಾಥೋಡ್‌ ಅವರನ್ನು ಗೌರವಿಸಲಾಯಿತು. ಲಾೖಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್‌ ಡೋಂಗ್ರೆ ವಂದಿಸಿ, ರುಕ್ಮಯ್ಯ ಆಚಾರ್ಯ ಕನ್ನಾಜೆ ನಿರೂಪಿಸಿ, ಲಾೖಲ ಗ್ರಾ.ಪಂ. ಸದಸ್ಯೆ ಜಯಶ್ರೀ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next