ಮುಂಬಯಿ: ಮಿಸ್ಟರ್ ಫರ್ಫೆಕ್ಟ್ ಆಮಿರ್ ಖಾನ್ ʼಲಾಲ್ ಚಡ್ಡಾʼ ಸಿನಿಮಾದ ಬಳಿಕ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿಲ್ಲ. ಒಂದಷ್ಟು ಗ್ಯಾಪ್ ಪಡೆದುಕೊಂಡ ಬಳಿಕ ಇದೀಗ ಅವರು ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ.
ʼಗದರ್ -2ʼ ಬಳಿಕ ಬಿಟೌನ್ ನಲ್ಲಿ ಬಿಗ್ ಹಿಟ್ ಕೊಟ್ಟ ಸನ್ನಿ ಡಿಯೋಲ್ ಆಮಿರ್ ಖಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸೂಪರ್ ಹಿಟ್ ನಿರ್ದೇಶಕ ರಾಜಕುಮಾರ್ ಸಂತೋಷಿ ಅವರು ನಿರ್ದೇಶನ ಮಾಡಲಿದ್ದು, ಆಮಿರ್ ಖಾನ್ ಪ್ರೊಡಕ್ಷನ್ಸ್ ಸಿನಿಮಾಕ್ಕೆ ಬಂಡವಾಳ ಹಾಕಲಿದೆ.
‘ಲಾಹೋರ್, 1947’ ಎಂದು ಸಿನಿಮಾಕ್ಕೆ ಟೈಟಲ್ ಇಡಲಾಗಿದೆ. ಆಮಿರ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ 17ನೇ ಸಿನಿಮಾ ಇದಾಗಿದೆ.
ಆಮಿರ್ ಖಾನ್ ಪ್ರೊಡಕ್ಷನ್ಸ್ ʼಲಾಹೋರ್ 1947ʼ ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಇದರಲ್ಲಿ ಮುಖ್ಯ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರಾಜಕುಮಾರ್ ಸಂತೋಷಿ – ಸನ್ನಿ ಡಿಯೋಲ್ ಅವರು ಮೂರು ಹಿಟ್ ಕೊಟ್ಟಿದ್ದರು. ʼಘಾಯಲ್ʼ, ʼದಾಮಿನಿʼ ಮತ್ತು ʼಘಥಕ್ʼ ಸಿನಿಮಾವನ್ನು ಜೊತೆಯಾಗಿ ಮಾಡಿದ್ದರು. ಇದೀಗ ಈ ಸೂಪರ್ ಹಿಟ್ ಕಾಂಬಿನೇಷನ್ ನನ್ನು ಆಮಿರ್ ಖಾನ್ ಮತ್ತೆ ಜೊತೆಯಾಗಿಸಿದ್ದಾರೆ.
ಇತ್ತ ಆಮಿರ್ ಖಾನ್ ಹಾಗೂ ಸನ್ನಿ ಡಿಯೋಲ್ ಅವರ ನಡುವೆ ಹಿಂದಿನಿಂದಲೂ ಬಾಕ್ಸ್ ಆಫೀಸ್ ಕದನ ನಡೆಯುತ್ತ ಬಂದಿದೆ. 1990 ರಲ್ಲಿ ಆಮಿರ್ ಖಾನ್ ಅವರ ʼದಿಲ್ʼ ಮತ್ತು ಸನ್ನಿ ಡಿಯೋಲ್ ಅವರ ʼಘಾಯಲ್ʼ ಒಂದೇ ದಿನ ಬಿಡುಗಡೆ ಆಗಿತ್ತು. ಇದಾದ ಬಳಿಕ 1996 ರಲ್ಲಿ ʼರಾಜಾ ಹಿಂದೂಸ್ತಾನಿʼ ರಿಲೀಸ್ ಆದಾಗ ಸನ್ನಿ ಡಿಯೋಲ್ ಅವರ ʼಘಥಕ್ʼ ಸಿನಿಮಾ ಕೂಡ ರಿಲೀಸ್ ಆಗಿತ್ತು. ನಂತರ 2007 ರಲ್ಲಿ ʼಗದರ್ʼ ರಿಲೀಸ್ ವೇಳೆ ಅದೇ ದಿನ ಆಮಿರ್ ಖಾನ್ ಅವರ ʼ ಲಗಾನ್ʼ ರಿಲೀಸ್ ಆಗಿತ್ತು.
ರಾಜಕುಮಾರ್ ಸಂತೋಷಿ ಆಮಿರ್ ಖಾನ್ ಅವರೊಂದಿಗೆ ʼಅಂದಾಜ್ ಅಪ್ನಾ ಅಪ್ನಾʼ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.