Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲಹಿರು ತಿರಿಮನ್ನೆ ವಿದಾಯ

12:10 AM Jul 24, 2023 | Team Udayavani |

ಕೊಲಂಬೊ: ಶ್ರೀಲಂಕಾ ಪರ 44 ಟೆಸ್ಟ್‌, 127 ಏಕದಿನ ಹಾಗೂ 26 ಟಿ20 ಪಂದ್ಯಗಳನ್ನು ಆಡಿದ ಅಗ್ರ ಕ್ರಮಾಂಕದ ಬ್ಯಾಟರ್‌ ಲಹಿರು ತಿರಿಮನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

Advertisement

“ಕ್ರಿಕೆಟನ್ನು ನಾನು ಅತ್ಯಂತ ಪ್ರೀತಿಯಿಂದ ಆಡಿದ್ದೇನೆ. ಈ ಕ್ರೀಡೆಯನ್ನು ಗೌರವಿಸಿದ್ದೇನೆ. ತಾಯಿನೆಲಕ್ಕೆ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿದ್ದೇನೆ. ಆಟಗಾರನಾಗಿ ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನೇ ಮಾಡಿದ್ದೇನೆ’ ಎಂದು ಲಹಿರು ತಿರಿಮನ್ನೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡು ವಿದಾಯ ಸಾರಿದ್ದಾರೆ.

“ಇದೊಂದು ಕಠಿನ ನಿರ್ಧಾರ. ಇದಕ್ಕೆ ಕೆಲವು ಅನಿರೀಕ್ಷಿತ ಹಾಗೂ ಅನಿವಾರ್ಯ ಕಾರಣಗಳೂ ಇದ್ದವು. ಅದನ್ನೆಲ್ಲ ಇಲ್ಲಿ ಉಲ್ಲೇಖೀಸಲಾರೆ. ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ತರಬೇತುದಾರರು, ಸಹ ಆಟಗಾರರು, ಫಿಸಿಯೋ, ಆಡಳಿತ ಮಂಡಳಿ ನೀಡಿದ ಸಹಕಾರವನ್ನು ನಾನು ಮರೆಯುವುದಿಲ್ಲ. ಇವರೆಲ್ಲರಿಗೂ ಧನ್ಯವಾದಗಳು’ ಎಂಬುದಾಗಿ ತಿರಿಮನ್ನೆ ಹೇಳಿದ್ದಾರೆ.

ಭಾರತದೆದುರಿನ 2022ರ ಬೆಂಗ ಳೂರು ಟೆಸ್ಟ್‌ ಪಂದ್ಯವೇ ಇವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಇವರ ಅಂತಾರಾಷ್ಟ್ರೀಯ ಪದಾರ್ಪಣೆ ಕೂಡ ಭಾರತದ ವಿರುದ್ಧವೇ ಆಗಿತ್ತು. ಅದು ಮಿರ್ಪುರ್‌ನಲ್ಲಿ ನಡೆದ 2010ರ ಏಕದಿನ ಪಂದ್ಯವಾಗಿತ್ತು.

ತಿರಿಮನ್ನೆ ಸಾಧನೆ
44 ಟೆಸ್ಟ್‌ಗಳಿಂದ 2,088 ರನ್‌ (3 ಶತಕ), 127 ಏಕದಿನ ಪಂದ್ಯಗಳಿಂದ 3,194 ರನ್‌ (4 ಶತಕ) ಹಾಗೂ 26 ಟಿ20 ಪಂದ್ಯಗಳಿಂದ 291 ರನ್‌ ಬಾರಿಸಿದ್ದು ತಿರಿಮನ್ನೆ ಸಾಧನೆಯಾಗಿದೆ. ಕೆಲವು ಏಕದಿನ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸುವ ಅವಕಾಶವೂ ಇವರಿಗೆ ಒದಗಿ ಬಂದಿತ್ತು. ಏಷ್ಯಾ ಕಪ್‌, ಟಿ20 ವಿಶ್ವಕಪ್‌ ವಿಜೇತ ಲಂಕಾ ತಂಡದ ಸದಸ್ಯನಾಗಿದ್ದುದು ಇವರ ಹೆಗ್ಗಳಿಕೆ. ಏಕದಿನದಲ್ಲಿ ಇವರ ಅತ್ಯುತ್ತಮ ಬ್ಯಾಟಿಂಗ್‌ 2015ರಲ್ಲಿ ಕಂಡುಬಂದಿತ್ತು. ಅಂದು ವಿಶ್ವಕಪ್‌ ಶತಕವೂ ಸೇರಿದಂತೆ 861 ರನ್‌ ಬಾರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next