ಬೆಂಗಳೂರು: ಕೋವಿಡ್ ಎರಡನೇ ಅಲೆ ದೂರವಾಗುತ್ತಿದ್ದಂತೆ ಸ್ಯಾಂಡಲ್ವುಡ್ ನಲ್ಲಿ ಸಿನಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಮಹಾಮಾರಿ ಸೋಂಕಿನಿಂದ ಮೊಟಕುಗೊಂಡಿದ್ದ ಸಿನಿಮಾ ಹಾಗೂ ಧಾರವಾಹಿಯ ಶೂಟಿಂಗ್ ಪುನಾರಂಭಗೊಳ್ಳುತ್ತಿವೆ.
ಲಾಕ್ ಡೌನ್ ಗೂ ಮುನ್ನ ಮುಹೂರ್ತ ಮಾಡಿಕೊಂಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಲಗಾಮು’ ಸಿನಿಮಾ ಶೂಟಿಂಗ್ ಗೆ ರೆಡಿಯಾಗುತ್ತಿದೆ. ಮೊದಲಿಗೆ ಪ್ರಿಪ್ರೊಡಕ್ಷನ್ ಕೆಲಸಕ್ಕೆ ಕೈಹಾಕಿರುವ ಚಿತ್ರತಂಡ ಭರ್ಜರಿ ಫೋಟೊ ಶೂಟ್ ನಡೆಸಿದೆ.
ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿ ಹರಿಪ್ರಿಯಾ ಹಾಟ್ ಆಂಡ್ ಸ್ಪೈಸಿ ಲುಕ್ ನಲ್ಲಿ ಫೋಟೋ ಶೂಟ್ ಗೆ ಪೋಸ್ ಕೊಟ್ಟಿದ್ದಾರೆ. ಪರದೆ ಹಿಂದಿನ ಸೀನ್ ಗಳು ಎಂದು ಬರೆದುಕೊಂಡು ಫೋಟೊ ಶೂಟ್ ನ ಒಂದು ವಿಡಿಯೋ ತುಣುಕನ್ನು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ ಹರಿಪ್ರಿಯಾ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಉಗ್ರಂ ಬೆಡಗಿ ಹರಿಪ್ರಿಯಾ ‘ಲಗಾಮು’ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಮುನ್ನವೆ ಈ ಸಿನಿಮಾ ಕನ್ನಡ ಸಿನಿ ರಸಿಕರ ಗಮನ ಸೆಳೆದಿದೆ.
ಇನ್ನು ಲಾಕ್ ಡೌನ್ ನಿಂದಾಗಿ ಕನ್ನಡ ಚಿತ್ರರಂಗಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಇದೀಗ ಮತ್ತೆ ಕನ್ನಡ ಚಿತ್ರೋಧ್ಯಮ ಮೊದಲಿನಂತಾಗುವ ಉತ್ಸುಕತೆಯಲ್ಲಿದೆ. ಈ ವರ್ಷ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ 2 ಹಾಗೂ ಸುದೀಪ್ ಅಭಿನಯದ ವಿಕ್ರಾಂತ ರೋಣ ಸಿನಿಮಾ ತೆರೆಗೆ ಬರಲಿವೆ. ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಅರ್ಧ ಶೂಟಿಂಗ್ ಮುಗಿಸಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷ ಕಬ್ಜ ತೆರೆಗೆ ಬರುವ ಸಾಧ್ಯತೆ ಇದೆ.