Advertisement

ಲೇಡಿಗೋಷನ್‌ ಆಸತ್ರೆ  ಹೊಸ ಕಟಡಕ್ಕೆ ಆವರಣ ಗೋಡೆ ಗ್ರಹಣ!

12:24 PM Nov 13, 2017 | |

ಮಂಗಳೂರು: ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿರುವ ಲೇಡಿಗೋಷನ್‌ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ತಿಂಗಳಲ್ಲಿ ಉದ್ಘಾಟನೆಯಾಗಬೇಕಿದೆ. ಆದರೆ ಈಗ ಆಸ್ಪತ್ರೆ
ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಆವರಣ ಗೋಡೆ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಸ್ಥಳೀಯ ವರ್ತಕರಿಂದ ವಿರೋಧ ವ್ಯಕ್ತವಾಗಿದೆ.

Advertisement

ಆಸ್ಪತ್ರೆ ಹಿಂಭಾಗದಲ್ಲಿ ಸೆಂಟ್ರಲ್‌ ಮಾರ್ಕೆಟ್‌ಗೆ ಹೋಗುವ ಹಳೆಯ ರಸ್ತೆಯಿದೆ. ಅದು ಸುಮಾರು 6 ಮೀ. ಅಗಲವಿದ್ದು, ಜನ ಹಾಗೂ ವಾಹನಗಳ ದಟ್ಟಣೆ ಹೆಚ್ಚಿರುವ ಕಾರಣ 12 ಮೀ.ಗೆ ವಿಸ್ತರಿಸಬೇಕಾದ ಅನಿವಾರ್ಯಯಿದೆ. ಆದರೆ, ಆಸ್ಪತ್ರೆ ಕಾಂಪೌಂಡ್‌ ಇರುವ ಕಾರಣ, ರಸ್ತೆ ವಿಸ್ತರಣೆಗೆ ಸ್ಥಳಾಭಾವವಿದೆ. ಈ ಹಿಂದೆ ಇದ್ದ ಕಾಂಪೌಂಡ್‌ ಕುಸಿದು ಹೋಗಿರುವ ಪರಿಣಾಮ, ಅದೇ ಜಾಗದಲ್ಲಿ ಹೊಸ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಆಸ್ಪತ್ರೆ ಜಾಗದಲ್ಲೇ ಕಾಂಪೌಂಡ್‌ ಕಟ್ಟುತ್ತಿದ್ದರೂ ಸ್ಥಳೀಯ ವರ್ತಕರ ವಿರೋಧ ವ್ಯಕ್ತವಾಗಿದೆ.

ಸ್ಥಳಾವಕಾಶದ ಕೊರತೆ
ರಸ್ತೆಯನ್ನು ವಿಸ್ತರಿಸಬೇಕಾದ ಸಂದರ್ಭದಲ್ಲಿ ಆವರಣ ಗೋಡೆಯನ್ನೇ ತೆರವು ಮಾಡಬೇಕಾಗುತ್ತದೆ ಎನ್ನುವುದು ಪಾಲಿಕೆ ವಾದ. ಆದರೆ, ಆಸ್ಪತ್ರೆಗೆ ಬೃಹತ್‌ ಕಟ್ಟಡ ನಿರ್ಮಾಣ ಆಗುತ್ತಿರಬೇಕಾದರೆ, ನಿಯಮದ ಪ್ರಕಾರ ಆವರಣದೊಳಗೆ ಹೆಚ್ಚಿನ ಸ್ಥಳಾವಕಾಶ ಇರಬೇಕು. ರಸ್ತೆಗೆ ಜಾಗ ಬಿಟ್ಟುಕೊಟ್ಟರೆ, ಆಸ್ಪತ್ರೆ ಆವರಣದಲ್ಲಿ ಸ್ಥಳಾಭಾವ ಕೊರತೆ ಎದುರಾದೀತು ಎನ್ನು ತ್ತಾರೆ ಆಸ್ಪತ್ರೆಯ ಅಧಿಕಾರಿಗಳು.

ಪಾಲಿಕೆಗೆ ದೂರು
ಕಾಂಪೌಂಡ್‌ ನಿರ್ಮಾಣ ವಿಚಾರವಾಗಿ ಸ್ಥಳೀಯ ವರ್ತಕರು ಪಾಲಿಕೆಗೆ ದೂರು ನೀಡಿದ್ದಾರೆ. ವರ್ತಕರ ದೂರಿನ ಕುರಿತು
ಗಮನ ಹರಿಸುವಂತೆ ಪಾಲಿಕೆ ನಗರ ಯೋಜನಾ ವಿಭಾಗದ ಎಂಜಿನಿಯರ್‌ಗೆ ಸ್ಥಳೀಯ ಕಾರ್ಪೊರೇಟರ್‌ ಸೂಚನೆ ನೀಡಿದ್ದಾರೆ. ಈ ದೂರಿನ ಅನ್ವಯ ಪಾಲಿಕೆ ಎಂಜಿನಿಯರ್‌, ಆರೋಗ್ಯ ಇಲಾಖೆಯ ಎಂಜಿನಿಯರ್‌ಗೆ ದೂರವಾಣಿ ಮೂಲಕ ಆಸ್ಪತ್ರೆ ಆವರಣ ಗೋಡೆ ಹಿಂದಕ್ಕೆ ಸರಿಸಲು ಮೌಖೀಕವಾಗಿ ಸೂಚನೆ ನೀಡಿದ್ದಾರೆ. ಈ ಹಿಂದೆ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿರುವ ಸ್ಥಳೀಯಾಡಳಿತ ಈಗ ಆವರಣ ಗೋಡೆ ನಿರ್ಮಾಣಕ್ಕೆ ಅಡ್ಡಗಾಲಿಟ್ಟಿರುವುದು ಯಾವ ನ್ಯಾಯ ಎನ್ನುವುದು ಆಸ್ಪತ್ರೆಯವರ ಪ್ರಶ್ನೆ.

ಒಟ್ಟಿನಲ್ಲಿ ಅಧಿಕಾರಿಗಳೇ ಮಾಡಿದ ಎಡವಟ್ಟಿನಿಂದಾಗಿ ಈಗ ಲೇಡಿಗೋಷನ್‌ ಆಸ್ಪತ್ರೆಯ ಹೊಸ ಕಟ್ಟಡ ಸಾರ್ವಜನಿಕರಿಗೆ
ಮುಕ್ತಗೊಳ್ಳುವಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಯಿದ್ದು, ಬಡ ರೋಗಿಗಳಿಗೆ ತೀವ್ರ ತೊಂದರೆಯಾಗುವುದರಲ್ಲಿ ಅನುಮಾನವಿಲ್ಲ.

Advertisement

ಈ ಹಿಂದೆ ಇದ್ದ ಆಸ್ಪತ್ರೆಯ ಆವರಣ ಗೋಡೆಯನ್ನೇ ಮರು ನಿರ್ಮಿಸಲಾಗಿದೆ. ಆಸ್ಪತ್ರೆಗೆ ಬೃಹತ್‌ ಕಟ್ಟಡ ನಿರ್ಮಾಣವಾಗಿದ್ದು, ಅದಕ್ಕೆ ಆಗ್ನಿಶಾಮಕ ದಳದ ನಿಯಮ ಪ್ರಕಾರ ಅಷ್ಟು ಜಾಗ ಅಗತ್ಯವಾಗಿದೆ. ಅಗತ್ಯ ಸಂದರ್ಭದಲ್ಲಿ ಪೈರ್‌ ಎಂಜಿನ್‌ ತಿರುಗಬೇಕಾದರೆ 7 ಮೀ. ಸ್ಥಳ ಅನಿವಾರ್ಯವಾಗಿದೆ. ಇಷ್ಟು ಜಾಗ ಇರುವುದರಿಂದಲೇ ಅಗ್ನಿಶಾಮಕ ದಳದವರು ಪರವಾನಿಗೆ ಕೊಟ್ಟಿದ್ದಾರೆ. ಆವರಣ ಗೋಡೆಯನ್ನು ಈಗಿನದಕ್ಕಿಂತ ಒಳ ಭಾಗದಲ್ಲಿ ಕಟ್ಟಿದರೆ ಕಟ್ಟಡ ಕಾಮಗಾರಿಗೆ ಪರವಾನಿಗೆ ಸಿಗುವುದಿಲ್ಲ. ಇಂತಹ ಸ್ಥಿತಿ ನಿರ್ಮಾಣವಾದರೆ ತೊಂದರೆಯಾಗುವುದು ಬಡ ರೋಗಿಗಳಿಗೆ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಹಿಂಬದಿಯ ಆವರಣ ಗೋಡೆ
ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿರುವ ಲೇಡಿಗೋಷನ್‌ ಆಸ್ಪತ್ರೆಯ ಹೊಸ ಕಟ್ಟಡ ಕಾಮಗಾರಿ ಪ್ರಸ್ತುತ ಒಂದು ಹಂತಕ್ಕೆ ಬಂದಿದ್ದು, ಅಂತಿಮ ಹಂತದ ಕಾಮಗಾರಿಗಳು ಭರದಿಂದ ಸಾಗಿವೆ. ಆಸ್ಪತ್ರೆ ಹಿಂಬದಿಯ ಆವರಣ ಗೋಡೆಯ ಕಾಮಗಾರಿಯೂ ನಡೆಯುತ್ತಿದೆ. ಮೂಡಾ ನಿಯಮದ ಪ್ರಕಾರ 12 ಮೀ. ಬಿಟ್ಟು ಆವರಣ ಗೋಡೆಯನ್ನು ನಿರ್ಮಿಸಬೇಕಾಗಿದ್ದರೂ, ಅದನ್ನು ಪಾಲಿಸಿಲ್ಲ. ಆವರಣ ಗೋಡೆಯ ಪಕ್ಕದಲ್ಲಿ ರಸ್ತೆಯೊಂದು ಸಾಗುತ್ತಿದೆ. ರಸ್ತೆಯನ್ನು ಬಿಟ್ಟು ಆವರಣ ಗೋಡೆ ನಿರ್ಮಿಸಬೇಕಿದ್ದರೂ, ಈ ಹಿಂದೆ ಇದ್ದಲ್ಲೇ ಕಟ್ಟುತ್ತಿದ್ದಾರೆ ಎಂಬುದು ವರ್ತಕರ ಆರೋಪ.

ವಾಹನ ನಿಬಿಡ ಪ್ರದೇಶ!
ಸೆಂಟ್ರಲ್‌ ಮಾರುಕಟ್ಟೆ ವಾಹನ ನಿಬಿಡ ಪ್ರದೇಶವಾಗಿದ್ದು, ಅದರೊಳಗೆ ವಾಹನ ಒಯ್ದರೆ ವಾಪಸ್‌ ಬರಲು ಹರಸಾಹಸ ಮಾಡಬೇಕು. ಕಿರಿದಾದ ರಸ್ತೆಗಳು, ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್‌, ಮಧ್ಯೆ ಸಾಗುವುದೇ ಸವಾಲು. ಮಾರುಕಟ್ಟೆಗೆ ಸರಕುಗಳನ್ನು ಹೊತ್ತು ತರುವ ಬೃಹತ್‌ ಲಾರಿಗಳಿಂದಲೂ ಸಮಸ್ಯೆಯ ತೀವ್ರತೆ ಹೆಚ್ಚಿದೆ. ಈ ಭಾಗಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಮೂಡಾ ಪರವಾನಿಗೆ ನೀಡುತ್ತಿದೆ.

ದೂರುಗಳು ಬಂದಿವೆ
ರಸ್ತೆ ಅಗಲ ಆಗಬೇಕಿರುವುದರಿಂದ ಆವರಣ ಗೋಡೆಯ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅದರ ಕುರಿತು ಗಮನಹರಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ಆವರಣ ಗೋಡೆ ಹಿಂದೆ ಹೋಗುವುದು  ನಿವಾರ್ಯವಾಗುತ್ತದೆ.
– ಪೂರ್ಣಿಮಾ,ಕಾರ್ಪೊರೇಟರ್‌

ಹಿಂದಿದ್ದ ಸ್ಥಳದಲ್ಲೇ ಕಾಂಪೌಂಡ್‌
ಆಸ್ಪತ್ರೆಗೆ 160 ವರ್ಷಗಳ ಇತಿಹಾಸ ಇರುವುದರಿಂದ ಹಿಂದೆ ಇದ್ದ ಸ್ಥಳದಲ್ಲೇ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ. ಪ್ರಸ್ತುತ ಅದು ಬಿದ್ದಿರುವುದರಿಂದ ಮರುನಿರ್ಮಿಸಲಾಗಿದೆ. ಹೀಗಾಗಿ ರಸ್ತೆ ಮಾರ್ಜಿನ್‌ನ ವಿಚಾರ ಬರುವುದಿಲ್ಲ. ಅಗ್ನಿಶಾಮಕ ದಳದವರು ಪರವಾನಿಗೆ ನೀಡಬೇಕಾದರೆ ಒಳಗಡೆ ಅಷ್ಟು ಸ್ಥಳಾವಕಾಶ ಅಗತ್ಯವಾಗಿದೆ. ಆವರಣ ಗೋಡೆ ಹಿಂದಕ್ಕೆ ಹೋದರೆ ಹೊಸ ಕಟ್ಟಡ ಕಾರ್ಯಾಚರಣೆಗೆ ಕಷ್ಟವಾಗುತ್ತದೆ. ಇದರಿಂದ ತೊಂದರೆಯಾಗುವುದು ಮಾತ್ರ ಬಡ ರೋಗಿಗಳಿಗೆ.
ರಘುಚಂದ್ರ ಹೆಬ್ಟಾರ್‌, ಸಹಾಯಕ
ಕಾರ್ಯನಿರ್ವಾಹಕ ಎಂಜಿನಿಯರ್‌, ಆರೋಗ್ಯ ಇಲಾಖೆ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next