ಮಂಗಳೂರು: ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಮಾರು 800 ಶಿಶುಗಳು ಅಕ್ಟೋಬರ್ ತಿಂಗಳಿನಲ್ಲಿ ಜನಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಸರಾಸರಿ 400-450 ಮಕ್ಕಳ ಜನನವಾಗುತ್ತವೆ. ಕಳೆದ ಸೆಪ್ಟಂಬರ್‌ನಲ್ಲಿಯೂ ಸುಮಾರು 600 ಶಿಶುಗಳು ಜನಿಸಿದ್ದವು. ಆದರೆ, ಅಕ್ಟೋಬರ್ ತಿಂಗಳಿನಲ್ಲಿ 800 ಆಸುಪಾಸು ಸಂಖ್ಯೆಯಲ್ಲಿ ಶಿಶುಗಳು ಜನಿಸಿದ್ದು ಮಾತ್ರ ವಿಶೇಷ.
ಒಂದೇ ತಿಂಗಳಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಿಶುಗಳ ಜನನವಾಗಿರುವುದು ಆಸ್ಪತ್ರೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನುತ್ತಾರೆ ಆಸ್ಪತ್ರೆ ಮುಖ್ಯಸ್ಥರು. ಈ ಪೈಕಿ 379 ಸಿಸೇರಿಯನ್ ಹೆರಿಗೆಗಳಾದರೆ ಉಳಿದೆಲ್ಲವೂ ಸಹಜ ಹೆರಿಗೆಗಳಾಗಿವೆ.
ಲೇಡಿಗೋಶನ್ ಆಸ್ಪತ್ರೆಗೆ ದ.ಕ. ಮಾತ್ರವಲ್ಲದೆ ಉಡುಪಿ, ದಾವಣಗೆರೆ, ಉ.ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೇರಳದಿಂದಲೂ ಹೆರಿಗೆಗೆಂದು ಗರ್ಭಿಣಿಯರನ್ನು ಕರೆ ತರಲಾಗುತ್ತದೆ. ಹೆರಿಗೆ ಆಸ್ಪತ್ರೆಯೆಂದೇ ಹೆಸರುವಾಸಿಯಾಗಿರುವ ಈ ಆಸ್ಪತ್ರೆಯಲ್ಲಿ 272 ಹಾಸಿಗೆ ಸಾಮರ್ಥ್ಯವಿದ್ದು, 28 ಹೆಚ್ಚುವರಿ ಬೆಡ್‌ಗಳಿವೆ. ನವಜಾತ ಶಿಶು ವಿಭಾಗದಲ್ಲಿ 12 ವೆಂಟಿಲೇಟರ್‌ಗಳು, ಉಳಿದಂತೆ ತಲಾ 6 ಐಸಿಯು ಬೆಡ್ ಮತ್ತು ವೆಂಟಿಲೇಟರ್‌ಗಳಿವೆ. ಸರಕಾರಿ ಮತ್ತು ಖಾಸಗಿ ಸೇರಿ 32 ಮಂದಿ ವೈದ್ಯರು ಮತ್ತು 57 ಮಂದಿ ಸ್ಟಾಫ್ ನರ್ಸ್‌ಗಳು ಹೆರಿಗೆ ವಿಭಾಗದಲ್ಲಿ ದಿನದ 24 ಗಂಟೆಯೂ ಪಾಳಿಯ ಆಧಾರದಲ್ಲಿ ಕರ್ತವ್ಯದಲ್ಲಿರುತ್ತಾರೆ.
ಇದನ್ನೂ ಓದಿ:ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ
ಆಸ್ಪತ್ರೆಯಲ್ಲಿ ಸಿಗುವ ಗುಣಮಟ್ಟದ ಸೇವೆ, ಸಿಬಂದಿಯ ಕರ್ತವ್ಯ ಪ್ರಜ್ಞೆ, ಸಮಸ್ಯೆ ನಿವಾರಣೆ ಸೇರಿದಂತೆ ರೋಗಿಗಳಿಗೆ ಸೂಕ್ತ ಸ್ಪಂದನೆ ನಿರಂತರ ಸಿಗುತ್ತಿರುವುದೇ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ದಾಖಲಾಗಲು ಕಾರಣ ಎಂದು
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದುರ್ಗಾಪ್ರಸಾದ್ ಎಂ. ಆರ್. ತಿಳಿಸಿದ್ದಾರೆ.