ನವದೆಹಲಿ: ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳಾ ಪೇದೆ ಮೇಲೆ ಕಾಮುಕನೋರ್ವ ಲೈಂಗಿಕ ದೌರ್ಜನ್ಯವೆಸಗಿ ಹೆಲ್ಮೆಟ್ ನಿಂದ ಹಲ್ಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುರುವಾರ ನಡೆದಿದೆ.
ಕರ್ತವ್ಯಕ್ಕೆ ಹಾಜರಾಗಲು ಸಿಟಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷದ ಮಹಿಳಾ ಪೊಲೀಸ್ ಪೇದೆಗೆ ಪುಂಡನೋರ್ವ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಇದನ್ನು ಪ್ರತಿಭಟಿಸಿದಾಗ ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಪ್ರಯಾಣಿಕರಿಂದ ಬಸ್ ತುಂಬಿದ್ದರಿಂದ ಸಂತ್ರಸ್ತೆ ಪೇದೆ ನಿಂತುಕೊಂಡಿದ್ದರು. ಈ ವೇಳೆ ಈಕೆಯ ಬೆನ್ನಿನ ಕೆಳ ಭಾಗ ಹಾಗೂ ತೋಳುಗಳನ್ನು ಕಾಮುಕ ಸ್ಪರ್ಶಿಸಿದ್ದಾನೆ. ಪ್ರಾರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸದ ಆಕೆ, ಸ್ವಲ್ಪ ಮುಂದೆ ಸರಿದಿದ್ದಾರೆ. ಆದರೆ, ಅವರತ್ತ ಧಾವಿಸಿದ ಆತ, ತನ್ನ ಕಾಯಕ ಪುನಃ ಶುರುವಿಟ್ಟುಕೊಂಡಿದ್ದ. ಇದನ್ನು ಪ್ರತಿಭಟಿಸಿದ ಪೇದೆ, ನಿನ್ನ ವಿರುದ್ಧ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಜಗಳ ಪ್ರಾರಂಭಿಸಿದ ಆತ ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಆಕೆಯ ತಲೆಗೆ ಹೊಡೆದು ಅಲ್ಲಿಂದು ಪರಾರಿಯಾಗಿದ್ದಾನೆ. ದೌರ್ಜನ್ಯ ಕ್ಕೊಳಗಾಗಿರುವ ಪೇದೆ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುಮ್ಮನಿದ್ದ ಪ್ರಯಾಣಿಕರು :
ಈ ಘಟನೆಯಿಂದ ರಾಜಧಾನಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎನ್ನವುದು ಮತ್ತೊಮ್ಮೆ ಸಾಬೀತಾಗಿದೆ. ಬಸ್ ನಲ್ಲಿ ಖಾಕಿ ಮೇಲೆಯೇ ದೌರ್ಜನ್ಯ ನಡೆಯುತ್ತಿದ್ದರೂ, ಸಹ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ಯಾರೂ ಕೂಡ ಮಹಿಳಾ ಪೇದೆಯ ಸಹಾಯಕ್ಕೆ ಮುಂದಾಗಲಿಲ್ಲವಂತೆ.