“ಲೇಡೀಸ್ ಟೈಲರ್’ ಚಿತ್ರದಿಂದ ಒಂದು ನ್ಪೋಟಕ ಸುದ್ದಿ ಬಂದಿದೆ. ಅದೇನೆಂದರೆ, ಆ ಚಿತ್ರದಲ್ಲಿ ನಟಿಸುವುದು ವಿಷಯ ಕೇವಲ ಗಾಳಿಸುದ್ದಿ ಎಂದು ಖುದ್ದು ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಈ ಚಿತ್ರದಿಂದ ಮೂರನೆಯ ನಾಯಕ ಸಹ ಹೊರಬಿದ್ದಂತಾಗುತ್ತದೆ. ಇದಕ್ಕೂ ಮುನ್ನ, ಈ ಚಿತ್ರದಲ್ಲಿ ರವಿಶಂಕರ್ ಗೌಡ ನಾಯಕ ಎಂದು ಹೇಳಲಾಗಿತ್ತು.
ಆದರೆ, ನಿರ್ಮಾಪಕರಲ್ಲೇ ಸಾಕಷ್ಟು ಗೊಂದಲಗಳಿದ್ದ ಕಾರಣ, ರವಿಶಂಕರ್ ಬದಲು ಸತೀಶ್ ನೀನಾಸಂ ಅವರನ್ನು ಆಯ್ಕೆ ಮಾಡಲಾಗಿತ್ತು. ಎಲ್ಲಾ ಸರಿ ಹೋಯಿತು ಎನ್ನುವಷ್ಟರಲ್ಲಿ ಸತೀಶ್ ಸಹ ಚಿತ್ರದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿ ಹೊರಬಂದರು. ಎರಡ್ಮೂರು ದಿನಗಳಿಂದ ಚಿತ್ರದಲ್ಲಿ ಜಗ್ಗೇಶ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ಜಗ್ಗೇಶ್ ಸಹ ತಾವು ನಟಿಸುತ್ತಿಲ್ಲ ಮತ್ತು ಅದು ಕೇವಲ ಗಾಳಿಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಜಾಲತಾಣದಲ್ಲಿ “ನೀರ್ ದೋಸೆ’ ನಿರ್ದೇಶಕನ ಜೊತೆ ನನ್ನ ಮುಂದಿನ ಸಿನಿಮಾ ಎಂದು ನೋಡಿದೆ. ಅದು ಗಾಳಿ ಸುದ್ದಿ. ನನ್ನ ಮುಂದಿನ ತಯಾರಿ ನಡೆಯುತ್ತಿದೆ, ತಿಳಿಸುವೆ. ಇತ್ತೀಚೆಗೆ ಸಿನಿಮಾ ಪ್ರಚಾರಕ್ಕೆ ತುಂಬಾ ಗಿಮಿಕ್ ಬಳಕೆಯಾಗುತ್ತಿದೆ. ಜಗ್ಗೇಶ್ ಮಾಡಿದರೆ ಚನ್ನ ಅಂತ ಗಾಂಧಿನಗರದ ಅನಿಸಿಕೆ ಪ್ರಚಾರವಾಗಿದೆ. ಆಯ್ಕೆಗೆ ನಾನು ತುಂಬಾ ಒತ್ತು ನೀಡಿವೆ’ ಎಂದು ಹೇಳಿದ್ದಾರೆ.
ಮನಸ್ಸಿಗೆ ತೃಪ್ತಿ ನೀಡುವ ಚಿತ್ರಗಳು ಬಹಳ ಮುಖ್ಯ ಎಂದಿರುವ ಅವರು, “143 ಸಿನಿಮಾಗಳನ್ನು ಪೂರೈಸಿರುವೆ. ಅಂಕೆಯಾಗುವ ಚಿತ್ರಗಳಿಗಿಂತ, ಮನಸ್ಸಿಗೆ ತೃಪ್ತಿ ನೀಡುವ ಹಾಗೂ ಜನ ಮೆಚ್ಚುವ ಕಾರ್ಯ ಮಾತ್ರ ಮಾಡುವೆ. ಜೀವನ ತೃಪ್ತಿಕರವಾಗಿದೆ. ಕಾರ್ಯದಲ್ಲೂ ತೃಪ್ತಿ ಇರಬೇಕು’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಪ್ರಾಜೆಕ್ಟ್ ಡ್ರಾಪ್ ಆದರೂ ಆಶ್ಚರ್ಯವಿಲ್ಲ: ಅಲ್ಲಿಗೆ “ಲೇಡೀಸ್ ಟೈಲರ್’ ಚಿತ್ರದಲ್ಲಿ ಜಗ್ಗೇಶ್ ನಟಿಸುತ್ತಿಲ್ಲ ಎಂಬ ಸುದ್ದಿ ಸ್ಪಷ್ಟವಾಗಿದೆ.
ಹೀಗಿರುವಾಗಲೇ, ಚಿತ್ರದ ಮುಹೂರ್ತ 26ಕ್ಕೆ ಫಿಕ್ಸ್ ಆಗಿದೆ ಎಂಬ ಸುದ್ದಿಯೊಂದು ಬಂದಿದೆ. ಅಷ್ಟೇ ಅಲ್ಲ, ಜಗ್ಗೇಶ್ ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಚಿತ್ರತಂಡದಿಂದ, ಪ್ರಚಾರಕರ್ತರ ಮೂಲಕ ಬಂದಿದೆ. ಜಗ್ಗೇಶ್ ತಾವು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವಾಗ, ಮುಹೂರ್ತದ ಡೇಟು ಸಹ ಫಿಕ್ಸ್ ಆಗಿರುವುದು ಹೇಗೆ ಎಂದರೆ, ಚಿತ್ರ ಮುಂದುವರೆಯುವುದೇ ಸಂಶಯ ಎನ್ನುತ್ತಾರೆ ನಿರ್ದೇಶಕ ವಿಜಯಪ್ರಸಾದ್. ಅಷ್ಟೇ ಅಲ್ಲ, ಮೂರ್‍ನಾಲ್ಕು ದಿನಗಳಲ್ಲಿ ಸ್ಪಷ್ಟ ಚಿತ್ರಣ ಕೊಡುವುದಾಗಿ ಹೇಳುತ್ತಾರೆ.
“ನಾವು ಜಗ್ಗೇಶ್ ಅವರ ಹತ್ತಿರ ಮಾತಾಡಿದ್ದು ಹೌದು. ಆದರೆ, ನಮ್ಮ ಕಡೆಯಿಂದಲೇ ಕೆಲವು ಸಮಸ್ಯೆಗಳು ಎದುರಾಗಿವೆ. ಯಾಕೋ ಈ ಚಿತ್ರ ಶುರುವಾದಾಗಿನಿಂದ, ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಮೊದಲು ರವಿಶಂಕರ್ ಗೌಡ ಚಿತ್ರದಲ್ಲಿ ನಟಿಸುತ್ತಾರೆ ಎಂದಾಯಿತು. ಆ ನಂತರ ಅವರ ಬದಲು ಸತೀಶ್ ಅಂತ ಸುದ್ದಿಯಾಯಿತು. ಕೊನೆಗೆ ಜಗ್ಗೇಶ್ ಅವರ ಹೆಸರು ಬಂತು. ನೂರೆಂಟು ತೊಡಕುಗಳಿಂದ ಚಿತ್ರ ಶುರುವಾಗುತ್ತಿಲ್ಲ.
ಇನ್ನು ಚಿತ್ರ 26ಕ್ಕೆ ಶುರುವಾಗಬಹುದು ಎಂಬ ವಿಚಾರವೇ ನನಗೆ ಗೊತ್ತಿಲ್ಲ. ಇಷ್ಟೆಲ್ಲಾ ಗೊಂದಲಗಳಿರುವಾಗ ಬಹುಶಃ ಈ ಪ್ರಾಜೆಕ್ಟ್ ಡ್ರಾಪ್ ಆದರೂ ಆಶ್ಚರ್ಯವಿಲ್ಲ. ಯಾವುದಕ್ಕೂ ಮುಂದಿನ ಕೆಲವು ದಿನಗಳಲ್ಲಿ, ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತೇನೆ’ ಎನ್ನುತ್ತಾರೆ ವಿಜಯಪ್ರಸಾದ್. ಅಲ್ಲಿಗೆ “ಲೇಡೀಸ್ ಟೈಲರ್’ ಶುರುವಾಗುವುದಕ್ಕಿಂತ ಮುಂಚೆಯೇ ನಿಲ್ಲುವ ಮುನ್ಸೂಚನೆ ಇದೆ. ಈ ಚಿತ್ರದ ವಿಷಯವಾಗಿ ಮುಂದೇನಾಗುತ್ತದೋ ಎಂಬುದನ್ನು ಕಾದು ನೋಡಬೇಕು.