Advertisement
“ಲೇಡೀಸ್ ಟೈಲರ್’ ಚಿತ್ರವು ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇದೆ. ಈ ಚಿತ್ರ ಶುರುವಾದಾಗ ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಬೇರೆಯದೇ ತಲೆನೋವು ಇತ್ತು. ಅದೇನೆಂದರೆ, ಚಿತ್ರದ ನಾಯಕಿ 125 ಕೆಜಿ ತೂಕವಿರಬೇಕಂತೆ. ಅಂತಹ ನಟಿಯ ಹುಡುಕಾಟಕ್ಕಾಗಿ ವಿಜಯಪ್ರಸಾದ್ ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಕೆಲವು ನಟಿಯರು ಸಿಗದಿದ್ದಾಗ ಬೇಸರಗೊಂಡಿದ್ದರು. “ಕಥೆ ಮತ್ತು ಪಾತ್ರ ದಪ್ಪಗಿರುವ ಮತ್ತು ತುಂಬಾ ತೂಕವಾಗಿರುವ ನಾಯಕಿಯನ್ನೇ ಡಿಮ್ಯಾಂಡ್ ಮಾಡಿದ್ದಕ್ಕೆ ಆ ರೀತಿಯ ನಾಯಕಿಗೆ ಹುಡುಕಾಟ ನಡೆಯುತ್ತಿದೆ. ಅದೊಂದು ಮುಸ್ಲಿಂ ಹೆಣ್ಣುಮಗಳ ಪಾತ್ರ. ಅದಕ್ಕಾಗಿ ಕನ್ನಡದ ಕೆಲ ನಟಿಯರನ್ನು ಕೇಳಿದ್ದಾಗಿದೆ. ಆದರೆ, ಯಾರೊಬ್ಬರೂ ಆ ಪಾತ್ರ ಮಾಡೋಕೆ ಒಪ್ಪುತ್ತಿಲ್ಲ. ಪಾತ್ರ ಓಕೆ ಆದರೆ, ತೂಕ ಅಷ್ಟೊಂದು ಯಾಕೆ ಎನ್ನುವವರೇ ಜಾಸ್ತಿ. ಆ ಕಾರಣಕ್ಕೆ ಫೇಸ್‌ಬುಕ್‌ನಲ್ಲಿ 125 ಕೆಜಿ ತೂಕವಿರುವ, ದಪ್ಪವಿರುವ ನಾಯಕಿ ಬೇಕಾಗಿದ್ದಾರೆ ಎಂದು ಸ್ಟೇಟಸ್ ಹಾಕಿದ್ದೇನೆ. ಆಸಕ್ತಿ ಇದ್ದವರು ಫೋಟೋ ಕಳುಹಿಸಬಹುದು ಎಂಬ ನಿರೀಕ್ಷೆ ಇದೆ. ಮೊದಲ ಆದ್ಯತೆ ಕನ್ನಡದವರಿಗೆ. ಒಂದು ವೇಳೆ, ಇಲ್ಲಿ ಸಿಗದೇ ಹೋದಲ್ಲಿ, ಪರಭಾಷೆಯತ್ತ ಮುಖ ಮಾಡ್ತೀನಿ’ ಎಂದು ವಿಜಯಪ್ರಸಾದ್ ಹೇಳಿಕೊಂಡಿದ್ದರು.
Related Articles
Advertisement
ಹೀಗೆ ನಿಲ್ಲುತ್ತಿರುವುದು ಹೊಸದೇನಲ್ಲ!ಒಂದು ಚಿತ್ರ ನಿಲ್ಲುವುದು ಹೊಸದೇನಲ್ಲ. ಈ ಹಿಂದೆ ಈ ತರಹದ ಹಲವು ಉದಾಹರಣೆಗಳು ಸಿಗುತ್ತವೆ. ತೀರಾ ಇತ್ತೀಚೆಗೆ ನೋಡಿದರೆ, ಸ್ಕ್ರಿಪ್ಟ್ ಪೂಜೆ ನಡೆದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಮಾಣದ ಮತ್ತು ನಿಖೀಲ್ ಅಭಿನಯದ ಹೊಸ ಚಿತ್ರ ನಿಂತು ಹೋಯಿತು. ಅದಕ್ಕೂ ಮುನ್ನ ಖಾಸನೀಸ್ ಸಹೋದರರು ಶುರು ಮಾಡಿದ್ದ ಮತ್ತು ಶುರು ಮಾಡಬೇಕೆಂದಿದ್ದ “ಐರಾ’, “ಶಾದಿಭಾಗ್ಯ’, “ಎಂಟಿವಿ ಸುಬ್ಬುಲಕ್ಷ್ಮೀ’, “ಪ್ರೇಮದಲಿ’, “ಪ್ರೀತಿ ಪ್ರಾಪ್ತಿರಸ್ತು’, “ದಂಡಯಾತ್ರೆ’, “ಉತ್ಸವ್’, “ಸೆಕೆಂಡ್ ಬಕೆಟ್ ಬಾಲ್ಕನಿ’ ಮುಂತಾದ ಚಿತ್ರಗಳು ಕಾರಣಾಂತರಗಳಿಂದ ಒಂದೇ ಏಟಿಗೆ ನಿಂತು ಹೋಗಿವೆ. ಪ್ರೇಮ್ ನಿರ್ದೇಶನದ ಶಿವರಾಜಕುಮಾರ್ ಮತ್ತು ಸುದೀಪ್ ಅಭಿನಯದ “ಕಲಿ’ ಚಿತ್ರದ ಟೈಟಲ್ ಲಾಂಚ್‌ಗೆ ಖುದ್ದು ಮುಖ್ಯಮಂತ್ರಿಗಳು ಬಂದು ಟೈಟಲ್ ಲಾಂಚ್ ಮಾಡಿ ಹೋಗಿದ್ದರು. ಇನ್ನೇನು ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಆ ಚಿತ್ರ ಸದ್ಯಕ್ಕಿಲ್ಲ ಎಂಬ ಸುದ್ದಿ ಇಬ್ಬರೂ ಕಲಾವಿದರ, ಲಕ್ಷಾಂತರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ, ಪ್ರೇಮ್ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಅದೇ ಡೇಟ್ ಇಟ್ಟುಕೊಂಡು, “ಕಲಿ’ ಬದಲು, “ದಿ ವಿಲನ್’ ಎಂಬ ಚಿತ್ರವನ್ನು ಶುರು ಮಾಡಿದ್ದಾರೆ. ಇನ್ನು ಇದೇ ಪ್ರೇಮ್, ವಿನಯ್ ರಾಜಕುಮಾರ್ ಅಭಿನಯದಲ್ಲಿ “ಆರ್ – ದಿ ಕಿಂಗ್’ ಎಂಬ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದರು. ಚಿತ್ರ ಮುಹೂರ್ತದವರೆಗೂ ಬಂದು ಅದ್ಯಾಕೋ ನಿಂತುಹೋಯಿತು. ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರವಾದ “ಮಂಜಿನ ಹನಿ’ಗಾಗಿ ನಾಲ್ಕೈದು ವರ್ಷಗಳ ಕಾಲ ಅವರು ಬೆವರು ಸುರಿಸಿದ್ದರು. ಎಲ್ಲಾ ಆದರೂ, ಈ ಚಿತ್ರ ಮುಕ್ತಾಯವಾಗಲಿಲ್ಲ. ಅದೇ ರೀತಿ, ರವಿಚಂದ್ರನ್ ಅವರು ತಮ್ಮ ಮಗನಿಗಾಗಿ ಶುರು ಮಾಡಿದ “ರಣಧೀರ – ಪ್ರೇಮಲೋಕ’ದಲ್ಲಿ ಭರ್ಜರಿಯಾಗಿ ಶುರುವಾಯಿತಾದರೂ, ಚಿತ್ರ ಮುಂದುವರೆಯಲಿಲ್ಲ. ಉಪೇಂದ್ರ ಅಭಿನಯದ “ದೇವದಾಸ್’, “ಕಲ್ಕಿ’, “ದಶಾವತಾರ’, “ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಚಿತ್ರಗಳು, ಸುದೀಪ್ ಅಭಿನಯದ ಮತ್ತು ನಿರ್ದೇಶನದ “ಕನ್ವರ್‌ಲಾಲ್’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಕಾಲ ನಡೆದು ನಿಂತು ಹೋಗಿತ್ತು. ಪುನೀತ್ ರಾಜಕುಮಾರ್ ಅಭಿನಯದ “ಮಯೂರ’ ಎಂಬ ಚಿತ್ರದ ಮುಹೂರ್ತ ಇಸ್ಕಾನ್ ದೇವಸ್ಥಾನದಲ್ಲಿ ಭರ್ಜರಿಯಾಗಿ ನಡೆದಿತ್ತು. ಆದರೆ, ನಿರ್ದೇಶಕ ಶೋಭನ್ ಅವರ ನಿಧನದಿಂದಾಗಿ ಚಿತ್ರ ನಿಂತೇ ಹೋಯಿತು. ಆದಿತ್ಯ ಅಭಿನಯದ “ರಕ್ತಾಕ’Ò, “ಕಾಟನ್‌ಪೇಟೆ’, “ಮಾಸ್’ ಮತ್ತು “ರ್ಯಾಸ್ಕಲ್’ ಎಂಬ ನಾಲ್ಕು ಚಿತ್ರಗಳು ಅದ್ಧೂರಿಯಾಗಿ ಮುಹೂರ್ತವಾಗಿ ಒಂದಿಷ್ಟು ಚಿತ್ರೀಕರಣ ಸಹ ಆಗಿತ್ತು. ಆದರೆ, ನಾಲ್ಕೂ ಚಿತ್ರಗಳೂ ನಿಂತಿವೆ. ಇದು ಶುರುವಾಗಿ ನಿಂತ ಹಲವು ಚಿತ್ರಗಳ ಪೈಕಿ ಕೆಲ ಉದಾಹರಣೆಯಾದರೆ, ಬರೀ ಸುದ್ದಿ ಮಾಡಿ, ನಿಂತು ಹೋದ ಚಿತ್ರಗಳ ಸಂಖ್ಯೆಯೂ ಸಾಕಷ್ಟಿವೆ. “ಗಂಡುಗಲಿ ಕುಮಾರರಾಮ’ ನಂತರ ಪಟ್ಟಾಭಿರಾಮ್ ಅವರು ಘೋಷಿಸಿದ್ದ “ಭರತೇಶ ವೈಭವ’, ಶಿವಾರಾಜಕುಮಾರ್-ರಾಘವೇಂದ್ರ ರಾಜಕುಮಾರ್-ಪುನೀತ್ ರಾಜಕುಮಾರ್ ಒಟ್ಟಾಗಿ ಅಭಿನಯಿಸಿದ್ದ “ಓಂ’, ಡಾ. ವಿಷ್ಣುವರ್ಧನ್ ಮತ್ತು ಉಪೇಂದ್ರ ಒಟ್ಟಾಗಿ ನಟಿಸಬೇಕಿದ್ದ “ಯುಗೇ ಯುಗೇ’, ಕುಮಾರ್ ಬಂಗಾರಪ್ಪ ಅಭಿನಯದಲ್ಲಿ ನಾಗಾಭರಣ ನಿರ್ದೇಶಿಸಬೇಕಿದ್ದ “ಕೆಳದಿ ಶಿವಪ್ಪನಾಯಕ’, ತ.ರಾ.ಸು ಅವರ ಮೂರು ಕಾದಂಬರಿಗಳನ್ನಾಧರಿಸಿದ ಟಿ.ಎಸ್. ನಾಗಾಭರಣ ಅವರು ಪ್ರಕಾಶ್ ರೈ ಅಭಿನಯದಲ್ಲಿ ನಿರ್ದೇಶಿಸಬೇಕಿದ್ದ “ದಳವಾಯಿ ಮುದ್ದಣ್ಣ’ ಈ ಎಲ್ಲಾ ಚಿತ್ರಗಳು ಆಯಾ ಕಾಲಕ್ಕೆ ಸುದ್ದಿ ಮಾಡಿದ್ದವು. ಆದರೆ, ಈ ಚಿತ್ರಗಳು ಶುರುವಾಗಲೇ ಇಲ್ಲ.