Advertisement
ಮೈಮನಗಳಲ್ಲಿ ರೋಮಾಂಚನ ಉಕ್ಕಿಸುವ ಅಲ್ಲಿನ ಪ್ರಕೃತಿ ಸೌಂದರ್ಯವಷ್ಟೇ ನಮ್ಮ ಅಚ್ಚರಿಗೆ ಕಾರಣವಾಗುವುದಿಲ್ಲ. ಈ ದುರ್ಗಮ ಪ್ರದೇಶದಲ್ಲಿ, ಪ್ರತಿಕೂಲ ವಾತಾವರಣದ ನಡುವೆಯೂ ಬದುಕು ಕಂಡುಕೊಂಡಿರುವ ಕಷ್ಟಜೀವಿ ಲಡಾಖಿಗಳ ಆತ್ಮಸ್ಥೈರ್ಯ, ಕಷ್ಟಸಹಿಷ್ಣು ಮನೋಭಾವ, ಜೀವನಪ್ರೀತಿಯೂ ನಮ್ಮನ್ನು ಅಚ್ಚರಿಗೆ ನೂಕುತ್ತದೆ. ಅಲ್ಲಿನ ಬದುಕಿನಿಂದ ವಿದ್ಯಾರ್ಥಿಗಳು ಕಲಿಯಬಹುದಾದ ಸಂಗತಿಗಳು ಹಲವು…
Related Articles
Advertisement
ಅದೂ ಎಂಥಾ ಚಳಿ ಅಂತೀರಿ ಒಂದು ಸ್ವೆಟರ್ ತೊಟ್ಟು ಅಮ್ಮ ಕೊಟ್ಟ ಬಿಸಿ ಕಾಫಿ ಕುಡಿದ ಕೂಡಲೆ ನೀಗುವಂಥ ಚಳಿಯಲ್ಲ. ಮೈನಸ್ ತಾಪಮಾನ ಸರ್ವೇ ಸಾಮಾನ್ಯ (ಜನವರಿ- ಫೆಬ್ರವರಿಯಲ್ಲಿ ತಾಪಮಾನ ಮೈನಸ್ 30ರವರೆಗೂ ಇರುತ್ತೆ). ನಾಲ್ಕೈದು ಲೇಯರ್‌ಗಳ ದಿರಿಸುಗಳನ್ನು ತೊಟ್ಟುಕೊಳ್ಳಬೇಕು. ಹಾಗಿದ್ದೂ ಚಳಿ ತಾಗದು ಎಂಬ ಯಾವುದೇ ಖಾತರಿಯಿಲ್ಲ. ಹಾಗಾಗಿ ಇನ್ನು ಮುಂದೆ ಚಳಿಯ ನೆಪವೊಡ್ಡಿ ಓದನ್ನು ಮುಂದೆ ಹಾಕುವಾಗ ಇನ್ನೊಮ್ಮೆ ಯೋಚಿಸುತ್ತೀರಾ ಅಲ್ವಾ?
ಸಮಯವೇ ಇಲ್ಲಿ ಶ್ರೀಮಂತಿಕೆ: ಟಿಕ್ ಟಿಕ್ ಟಿಕ್… ಸಮಯ ಜಾರಿ ಹೋಗುತ್ತಲೇ ಇರುತ್ತೆ. ಯಾರ ಕೈಗೂ ಸಿಗದಂತೆ, ಎಂದೂ ಮರಳಿ ಬಾರದಂತೆ. ಅದರ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಸಾರ್ಥಕ ಭಾವ ಮೂಡೋದು. ಕೈಹಿಡಿದ ಕೆಲಸಗಳೆಲ್ಲವೂ ಫಲಪ್ರದವಾಗೋದು. ಆದರೆ, ಸಮಯ ದಿನವೂ ಸಿಗುತ್ತೆ, ಯಾವುದಾದರೂ ಕೆಲಸ ಇವತ್ತಾಗದಿದ್ದರೆ ನಾಳೆ ಮಾಡಿದರಾಯಿತು ಎಂಬ ನಿರ್ಲಕ್ಷ್ಯವನ್ನು ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ತೋರುತ್ತೇವೆ.
ಈ ಗುಡ್ಡಗಾಡು ಪ್ರದೇಶದಲ್ಲಿ ಟೈಮ್ ಇದ್ದವನೇ ಬಾಸು ಎಂದು ಹೇಳಿದರೆ ತಪ್ಪಿಲ್ಲ. ಇಲ್ಲಿ ಅಂಗಡಿಗಳು, ಕಚೇರಿಗಳು ತೆರೆಯೋದು 10ರ ಆಸುಪಾಸಿಗೆ. ಸಂಜೆ 5 ಗಂಟೆಗೆಲ್ಲಾ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ಹೀಗಾಗಿ ಏನೇ ಪ್ರಮುಖ ಕೆಲಸಗಳಿದ್ದರೂ ದಿನದಲ್ಲಿ ಲಭ್ಯವಿರುವ 8 ಗಂಟೆಗಳ ಕಾಲಾವಧಿಯಲ್ಲಿಯೇ ಮುಗಿಸಿಕೊಳ್ಳಬೇಕು. ಮೊದಲೇ ದಿನದಲ್ಲಿ ವರ್ಕಿಂಗ್ ಅವರ್ನ ಅಭಾವವಿರುವುದರಿಂದ ಯಾವುದೇ ಮುಖ್ಯ ಕೆಲಸಗಳನ್ನು ಉಳಿಸಿಕೊಳ್ಳುವುದು ಮೂರ್ಖತನವಾಗುತ್ತೆ.
ಏಕೆಂದರೆ, ಇಲ್ಲಿನ ವಾತಾವರಣ ಇದ್ದ ಹಾಗೇ ಇರುವುದಿಲ್ಲ. ಬಿಸಿಲಿದ್ದಾಗಲೂ ಮೇಘಸ್ಫೋಟವಾಗಬಹುದು, ಹಿಮಪಾತವಾಗಬಹುದು, ಒಂದು ಕ್ಷಣದ ಹಿಂದಿದ್ದ ವಿಪರೀತ ಚಳಿ ಇದ್ದಕ್ಕಿದ್ದಂತೆ ಮಾಯವಾಗಿ ಆಹ್ಲಾದಕರ ವಾತಾವರಣ ಮೂಡಬಹುದು. ಹೀಗಾಗಿ ವಾತಾವರಣವನ್ನು ನಂಬಿ ಯಾವ ಕೆಲಸವನ್ನೂ ಇಲ್ಲಿನವರು ಮಾಡುವುದಿಲ್ಲ. ಎಲ್ಲಾ ಕೆಲಸಗಳನ್ನು ಆಗಿಂದಾಗ್ಗೆ ಮುಗಿಸಿಕೊಂಡುಬಿಡುತ್ತಾರೆ. ಸರಕಾರಿ ಕಚೇರಿಯ ಫೈಲುಗಳಂತೆ ಪೆಂಡಿಂಗ್ ಇಡುತ್ತಾ ಹೋಗುವುದು ಅಪರೂಪ.
ಫ್ಯಾಮಿಲಿ ಪವರ್: ವಿದ್ಯಾರ್ಥಿಜೀವನದಲ್ಲಿ ಮನೆ ಹತ್ತಿರವೇ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸುವ ಸೌಕರ್ಯ ಎಲ್ಲರಿಗೂ ಇರೋದಿಲ್ಲ. ಅದೆಷ್ಟೋ ವಿದ್ಯಾರ್ಥಿಗಳು ಮನೆಯಿಂದ ದೂರ ಹಾಸ್ಟೆಲ್‌ಗಳಲ್ಲಿ, ರೂಮ್‌ಗಳಲ್ಲಿ, ಪಿ.ಜಿ.ಗಳಲ್ಲಿ ಕಷ್ಟ ಬಿದ್ದು ಓದುವ ಅನಿವಾರ್ಯತೆಯೊಂದಿಗೆ ಹೊಂದಿಕೊಂಡಿರುತ್ತಾರೆ. ಈ ನಡುವೆ ಕುಟುಂಬದಿಂದ ವಿಮುಖರಾಗಿರಬೇಕಾದ ಪರಿಸ್ಥಿತಿಗೆ ಅವರೆಲ್ಲರೂ ಒಗ್ಗಿಕೊಂಡಿರುತ್ತಾರೆ.
ಆದರೆ ಲಡಾಖಿಗಳು ಅದೆಂಥಾ ಪರಿಸ್ಥಿತಿಯಲ್ಲೂ ಕುಟುಂಬದ ನಂಟನ್ನು ಬಿಟ್ಟಿರುವುದಿಲ್ಲ. ಭೌತಿಕವಾಗಿ ದೂರವಿದ್ದಾಗಲೂ ಮಾನಸಿಕವಾಗಿ ಅವರು ಒಟ್ಟಿಗೇ ಇರುತ್ತಾರೆ. ಇದಕ್ಕೆ ಅವರು ಮೈಗೂಡಿಸಿಕೊಂಡಿರುವ ಕುಟುಂಬ ವ್ಯವಸ್ಥೆ ಮತ್ತು ಕೌಟುಂಬಿಕ ಮೌಲ್ಯಗಳು ಕಾರಣ. ತಮ್ಮವರಿಗಾಗಿ ಎಂಥ ತ್ಯಾಗಕ್ಕೂ ಅವರು ಸಿದ್ಧರಾಗಿರುತ್ತಾರೆ. ಜೀವನದಲ್ಲಿ ಹತಾಶರಾದಾಗ, ಸೋಲಿನಿಂದ ಕುಗ್ಗಿದ್ದಾಗ ನೆರವಿಗೆ ಬರುವುದು ನಮ್ಮ ಕುಟುಂಬ.
ನಮ್ಮ ಸುಖ ದುಃಖಗಳಲ್ಲಿ ಅವರು ಪಾಲುದಾರರು. ಈ ಸತ್ಯವನ್ನು ಲಡಾಖಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇಂದಿಗೂ ರಾತ್ರಿ ಊಟ ಮಾಡುವಾಗ ಮನೆಯವರೆಲ್ಲರೂ ಒಟ್ಟಾಗಿ ಕೂತು ಸವಿಯುತ್ತಾರೆ. ನಮ್ಮಲ್ಲನೇಕರು ಒಬ್ಬರು ಇನ್ನೊಬ್ಬರಿಗಾಗಿ ಕಾಯದೆ ತಮಗೆ ಅನುಕೂಲವಾದ ಸಮಯದಲ್ಲಿ ಊಟವನ್ನು ಮುಗಿಸಿಬಿಡುತ್ತಾರೆ.
ನಮಗೆ ಒಟ್ಟಾಗಿ ಭೋಜನ ಸ್ವೀಕರಿಸುವುದರ ಹಿಂದೆ ಅಂಥಾ ಮಹತ್ತರ ಉದ್ದೇಶ ಕಾಣದೇ ಇರಬಹುದು. ಆದರೆ, ದಿನವಿಡೀ ಇತರೆ ಕೆಲಸಗಳಲ್ಲಿ ತೊಡಗಿಕೊಂಡು, ರಾತ್ರಿ ಆ ದಿನದ ಘಟನೆಗಳನ್ನು ಕುಟುಂಬದವರೊಂದಿಗೆ ಮೆಲುಕು ಹಾಕುತ್ತಾ ದಿನವನ್ನು ಕೊನೆಗೊಳಿಸುವುದು ಬಾಂಧವ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದೆಂದು ಮನಃಶಾಸ್ತ್ರಜ್ಞರೇ ಹೇಳುತ್ತಾರೆ. ಲಡಾಖಿಗಳು ಫ್ಯಾಮಿಲಿ ಪವರ್‌ನ ಮಹತ್ವವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ.
ಅಡ್ಜಸ್ಟ್ ಮಾಡ್ಕೊಳ್ಳಿ: ನಾವು ಪ್ರತಿಕ್ಷಣ ಒಂದಲ್ಲ ಒಂದು ವಿಷಯಕ್ಕೆ ಕೊರಗುತ್ತಿರುತ್ತೇವೆ. ನಮ್ಮ ಬದುಕಿನಲ್ಲಿ ಯಾವತ್ತೂ ಎಲ್ಲವೂ ಸರಿ ಇರುವುದಿಲ್ಲ. ಇಷ್ಟು ಹೊತ್ತು ಇದ್ದ ಕರೆಂಟು ಹಾಳಾದ್ದು ಈಗ ಹೋಯಿತು, ಬಸ್ಸು ಲೇಟಾಯ್ತು, ಮಳೆ ಬರುತ್ತಿದೆ ಕೊಡೆ ತಂದಿಲ್ಲ, ನನ್ನಿಷ್ಟದ ಐಸ್‌ಕ್ರೀಮ್ ಫ್ಲೇವರ್ ಖಾಲಿಯಾಗಿಬಿಟ್ಟಿದೆ, ಆ ಎಲೆಕ್ಟ್ರಾನಿಕ್ ಉಪಕರಣ ತುಂಬಾ ದುಬಾರಿಯಾಯ್ತು,
ರಸ್ತೆ ಹಾಳಾಗಿದೆ ಹೀಗೆ ನಾನಾ ಚಿಂತೆಗಳಿಂದ ನಮ್ಮ ತಲೆಯನ್ನು ನಾವು ತುಂಬಿಸಿಕೊಳ್ಳುತ್ತೇವೆ. ಆದರೆ, ನಗರದ ಬಹುತೇಕ ಸವಲತ್ತುಗಳಿಂದ ವಂಚಿತರಾಗಿರುವ ಲಡಾಖಿಗಳು ತಮ್ಮಲ್ಲಿಲ್ಲದಿರುವುದಕ್ಕೆ ಚಿಂತಿಸುವುದಿಲ್ಲ, ಹೊಂದಿಕೊಂಡುಬಿಡುತ್ತಾರೆ. ಸಿಂಪಲ್ಲಾಗಿ ಹೇಳುವುದಾದರೆ ಅಡ್ಜಸ್ಟ್ ಮಾಡ್ಕೊಂಡು ಬಿಡುತ್ತಾರೆ. ಇದರಿಂದಾಗಿ ಅವರ ಮನಸ್ಸು ಉದ್ವಿಗ್ನಗೊಳ್ಳುವುದು ವಿರಳ.
ವಿದ್ಯುತ್, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನೇ ನಂಬಲಾಗದ ಆ ಪರಿಸರದಲ್ಲಿ ಪ್ರಕೃತಿಯೇ ಹಿರಿದು. ಅದರ ಮುಂದೆ ನಮ್ಮೆಲ್ಲಾ ಬೇಕು ಬೇಡಗಳು ನಶ್ವರ ಎಂದವರು ಅರಿತಿದ್ದಾರೆ. ಹೀಗಾಗಿಯೇ ಅಂಥ ಪ್ರತಿಕೂಲ ವಾತಾವರಣದಲ್ಲಿಯೂ ಬದುಕು ಸಾಗಿಸುವುದು ಅವರಿಂದ ಸಾಧ್ಯವಾಗಿದೆ. ಅಡ್ಜಸ್ಟ್ ಮಾಡಿಕೊಳ್ಳುವ ಗುಣವೊಂದು ಇದ್ದುಬಿಟ್ಟರೆ ನಮ್ಮಲ್ಲರ ಜಟಿಲ ಬದುಕು ಸುಲಭವಾಗುವುದರಲ್ಲಿ ಸಂಶಯವಿಲ್ಲ.ಏನೇ ಬರಲಿ ತಾಳ್ಮೆ ಇರಲಿ…: ಇಂದಿನ ಬ್ಯುಸಿ ಲೈಫಿನಲ್ಲಿ ನಮಗೆಲ್ಲರಿಗೂ ತುರ್ತಾಗಿ ಬೇಕಿರುವ ವಸ್ತು ಶಾಂತಿ, ತಾಳ್ಮೆ. ನಮ್ಮ ಕೆಲಸ ಎಷ್ಟು ಬೇಗವೋ ಅಷ್ಟು ಬೇಗ ಆಗಿಯೇ ತೀರಬೇಕು, ಟ್ರಾಫಿಕ್ ಸಿಗ್ನಲ್‌ನಲ್ಲಿ ಒಂದೂವರೆ ನಿಮಿಷ ಕಾಯುವುದೂ ನಮ್ಮಿಂದ ಕಷ್ಟ. ಸಾಯುತ್ತಿರುವವರನ್ನು ಬದುಕಿಸಲು ಹೆಣಗುವ ಆ್ಯಂಬುಲೆನ್ಸ್‌ನಿಂತಲೂ, ತಡವಾದರೆ ಸಿನಿಮಾ ಹಾಲ್ ರಶ್ಯಾಗುವುದೆಂಬ ಆತಂಕವೇ ನಮಗೆ ದೊಡ್ಡದು. ಆದರೆ ಲಡಾಖಿಗಳು ಇದಕ್ಕೆ ತದ್ವಿರುದ್ಧ. ಹಿಮಾಲಯ ಶ್ರೇಣಿಗಳಿಂದ ಸುತ್ತುವರಿದಿರುವ ಆ ಪ್ರದೇಶವೇ ರೋಮಾಂಚನ ಉಕ್ಕಿಸುವಂಥದ್ದು. ಒಮ್ಮೆ ಕಣ್ತುಂಬಿಕೊಂಡರೆ, ಪುರಾಣ ಕಾಲಗಳಿಂದಲೂ ಮಹಾತ್ಮರು ತಪಸ್ಸನ್ನಾಚರಿಸಲು, ಜ್ಞಾನೋದಯ ಪಡೆಯಲು, ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಇಂಥಾ ಹಿಮಚ್ಛಾದಿತ ಜಾಗವನ್ನು ಆರಿಸಿಕೊಂಡಿರುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ ಎನ್ನಿಸುವುದು. ಬೌದ್ಧ ಧರ್ಮದ ಪ್ರಭಾವ ಅಲ್ಲಿನವರನ್ನು ಗಾಢವಾಗಿ ಆವರಿಸಿಕೊಂಡುಬಿಟ್ಟಿದೆ. ಹೀಗಾಗಿ ಅಲ್ಲಿ ಉಸಿರಾಡುವ ಗಾಳಿಯ ಕಣ ಕಣದಲ್ಲೂ ಶಾಂತಿ ಮಂತ್ರವನ್ನು ಕಾಣಬಹುದು. ಅವರಿಗರಿವಿಲ್ಲದಂತೆಯೇ ಶಾಂತಿ, ತಾಳ್ಮೆ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. * ಹರ್ಷವರ್ಧನ್ ಸುಳ್ಯ