Advertisement

ಹವಿಗನ್ನಡದಲ್ಲಿ ರಂಜಿಸಿದ ಕುಶಾಲಿನ ಲಡಾಯಿ 

06:00 AM Nov 30, 2018 | |

ಮಹತೋಬಾರ ಶ್ರೀ ಮಹಾಗಣಪತಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್‌ ಅಭಿಮಾನಿ ಬಳಗದ ಸಹಕಾರದಲ್ಲಿ ಪುತ್ತೂರಿನ ಯಕ್ಷರಂಗ ಆಯೋಜಿಸಿದ ಕುಶಾಲಿನ ಲಡಾಯಿ ತಾಳಮದ್ದಳೆ ಒಂದು ವಿನೂತನ ಪ್ರಯೋಗವಾಗಿ ಪ್ರದರ್ಶನಗೊಂಡಿತು. ಹಾಡುಗಾರಿಕೆ ಮತ್ತು ಅರ್ಥ ವಿವರಣೆಗಳು ಹವ್ಯಕರ ಆಡುನುಡಿ (ಹವಿಗನ್ನಡ)ದಲ್ಲಿ ಮೂಡಿಬಂದಿರುವುದು ಕುತೂಹಲಕರ ಅಂಶವಾಗಿದೆ. 

Advertisement

ಕೃಷ್ಣಾರ್ಜುನ ಕಾಳಗ ಕನ್ನಡ ಕಥಾನಕವನ್ನು ಆಧರಿಸಿ ಹವ್ಯಕರ ಮಾತೃಭಾಷೆಯಲ್ಲಿ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಪದ್ಯಗಳನ್ನು ಹಾಡಿ ಕಳೆಯೇರಿಸಿದವರು ಭಾಗವತ ಪುತ್ತೂರು ರಮೇಶ ಭಟ್ಟರು. ಅಡೂರು ಲಕ್ಷ್ಮೀನಾರಾಯಣ ಮತ್ತು ರಾಮಮೂರ್ತಿ ಚೆಂಡೆಮದ್ದಳೆವಾದಕರಾಗಿ ಮೆರುಗಿತ್ತರು. ವಿ| ಹಿರಣ್ಯ ವೈಂಕಟೇಶ್ವರ ಭಟ್‌ (ಬಲರಾಮ), ಶಂಭುಶರ್ಮ ವಿಟ್ಲ (ಅರ್ಜುನ), ರಾಧಾಕೃಷ್ಣ ಕಲ್ಚಾರ್‌ (ಕೃಷ್ಣ), ಪ್ರಸಂಗಕರ್ತ ಸೇರಾಜೆಯವರು (ಸುಭದ್ರೆ), ಪಶುಪತಿ ಶಾಸ್ತ್ರಿ (ಭೀಮ), ಡಾ| ಹರೀಶ್‌ ಜೋಶಿ ವಿಟ್ಲ(ದಾರುಕ) ಅರ್ಥಧಾರಿಗಳಾಗಿ ನಿರ್ವಹಿಸಿದ್ದರು.

ಈ ಎಲ್ಲಾ ಕಲಾವಿದರ ಮನೆಮಾತು ಹವ್ಯಕ ಭಾಷೆ ಆಗಿರುವುದರಿಂದ ಅರ್ಥಗಾರಿಕೆಯಲ್ಲಿ ಸಂವಾದವನ್ನು ಸುಲಲಿತವಾಗಿ ನಡೆಸಿದರು. ಭಾಷಾ ಲಾಲಿತ್ಯ ಸಕಾಲದಲ್ಲಿ ಕಾರ್ಯಕ್ರಮ ಮುಗಿಸಲು ಅಡಚಣೆಯಾಗಿ ತೋರಿ ಬಂದಿತು.ಕೆಲವು ಕಡೆಗಳಲ್ಲಿ ಕುಶಾಲು ತುಸು ಲಂಭಿಸಿತೆನ್ನಬೇಕು. ಎಲ್ಲಾ ಅರ್ಥ ದಾರಿಗಳು ಅರ್ಥಗಾರಿಕೆಯಲ್ಲಿ ಮಿಂಚಿದರು. ಭೀಮನ ಆಟೋಪ, ದಾರುಕನ ನುಡಿಗಳಲ್ಲಿ ಉಕ್ಕಿದ ಹಾಸ್ಯ ಗಮನಾರ್ಹ. ಹಿಂದೊಮ್ಮೆ ಇದೇ ವೇದಿಕೆಯಲ್ಲಿ ಬಹುತೇಕ ಇದೇ ಕಲಾವಿದರ ಕೂಡುವಿಕೆಯಲ್ಲಿ “ಸನ್ಯಾಸಿ ಮದಿಮ್ಮಾಯ’ (ಸುಭದ್ರಾ ಕಲ್ಯಾಣ)ಪ್ರಸಂಗ ಪ್ರದರ್ಶನಗೊಂಡು ಜನರ ಮನಗೆದ್ದಿತ್ತು. 

ಹರಿನಾರಾಯಣ ಮಾಡಾವು 

Advertisement

Udayavani is now on Telegram. Click here to join our channel and stay updated with the latest news.

Next