Advertisement

ವೃತ್ತಿ ರಂಗಭೂಮಿಗೆ ಯುವ ಕಲಾವಿದರ ಕೊರತೆ

04:19 PM Dec 18, 2018 | |

ದಾವಣಗೆರೆ: ಯುವ ಕಲಾವಿದರ ಕೊರತೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಂಘಗಳಿಂದ ಗುಣಮಟ್ಟದ ನಾಟಕ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೇವರ್ಗಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ, ಶ್ರೀ ಶಿವಯೋಗಿ ಮಂದಿರದಲ್ಲಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಘದ 23ನೇ ವಾರ್ಷಿಕೋತ್ಸವ ಹಾಗೂ ನಾಟಕೋತ್ಸವದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ವೃತ್ತಿ ರಂಗಭೂಮಿ ಕಲಾವಿದರ ಸಂಘಗಳ ನಾಟಕ ಪ್ರದರ್ಶನದಲ್ಲಿ ದ್ವಂದ್ವಾರ್ಥದ ಸಂಭಾಷಣೆ ಹೆಚ್ಚಾಗಿರುವುದರಿಂದ ಜನರು ನಾಟಕಗಳನ್ನು ನೋಡುತ್ತಿಲ್ಲ ಎಂಬುದು ಒಪ್ಪದ ಮಾತು. ಏಕೆಂದರೆ, ಈ ನಾಟಕ ಕಂಪನಿಗಳು ಮೊಬೈಲ್‌ನಲ್ಲಿನ ಇಂಟರ್‌ ನೆಟ್‌ನಲ್ಲಿ ತೋರಿಸುವ ಕೆಟ್ಟ ಸಂಭಾಷಣೆಯಷ್ಟು ಕೆಟ್ಟದಾಗಿರಲ್ಲ ಎಂದರು.

ಡಬಲ್‌ ಮೀನಿಂಗ್‌ ಮಾತುಗಳ ನಾಟಕಗಳನ್ನು ಜನರು ಹೆಚ್ಚು ವೀಕ್ಷಿಸುವುದಾದಲ್ಲಿ ಇಂದು ಏಕೆ ಕಲೆಕ್ಷನ್‌ ಹೆಚ್ಚಾಗುತ್ತಿಲ್ಲ. ವೃತ್ತಿ ರಂಗಭೂಮಿಯಲ್ಲಿ ಇಂದು ಯುವ ಕಲಾವಿದರ ಸಂಖ್ಯೆ ಅತ್ಯಂತ ಕೊರತೆ ಆಗಿದೆ. ಹಾಗಾಗಿ ಗುಣಮಟ್ಟದ ನಾಟಕಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ರಂಗಾಯಣ, ಸಾಣೇಹಳ್ಳಿ , ಕುಂದಾಪುರ, ಎನ್‌ಎಸ್‌ಡಿ ಮುಂತಾದ ಹೆಸರಾಂತ ಹವ್ಯಾಸಿ ರಂಗಭೂಮಿ ಕಲಾವಿದರ ನಾಟಕ ಕಂಪನಿಗಳಲ್ಲಿ ತರಬೇತಿ ಪಡೆದ ನೂರಾರು ಕಲಾವಿದರು ಧಾರಾವಾಹಿ, ಸಿನಿಮಾ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಯಾರು ಕೂಡ ವೃತ್ತಿ ರಂಗಭೂಮಿ ಕಲಾವಿದರ ನಾಟಕ ಕಂಪನಿಗಳತ್ತ ಸುಳಿಯುತ್ತಿಲ್ಲ. ಹಾಗಾಗಿ ಹೊಸ ನಾಟಕಗಳ ಪ್ರದರ್ಶನ ಈ ಸಂಘಗಳಿಗೆ ಮರೀಚಿಕೆ ಆಗುತ್ತಿದೆ ಎಂದು ವಿಷಾದಿಸಿದರು.

ಇಂದು ಆಧುನಿಕ ರಂಗಭೂಮಿ ಕಲಾವಿದರಿಗೆ ಬೇಕಾದ ತರಬೇತಿ ನೀಡಲು ಸೌಲಭ್ಯವಿದೆ. ಹಾಗಾಗಿ ವೃತ್ತಿ ರಂಗಭೂಮಿ ಕಡೆ ಕಲಾವಿದರು ಸುಳಿಯುತ್ತಿಲ್ಲ. ಆದರೆ, ವೃತ್ತಿರಂಗಭೂಮಿ ನಾಟಕ ಕಂಪನಿಯ ನಾಟಕ ಪ್ರದರ್ಶನ ಮಾತ್ರ ಜನಸಾಮಾನ್ಯರಿಗೆ ಮುಟ್ಟಲು ಸಾಧ್ಯ ಎಂದರು. ಕರ್ನಾಟಕ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಶಾಸ್ತ್ರೀಯ ನೆಲೆಗಟ್ಟಿನಲ್ಲಿ ಸರ್ಕಾರದಿಂದ ಕೊಂಡಜ್ಜಿಯಲ್ಲಿ ರೆಪರ್ಟರಿ ಆರಂಭಿಸುತ್ತಿರವುದು ಸ್ವಾಗತಾರ್ಹ. ಈ ತರಬೇತಿ ನಮ್ಮೆಲ್ಲಾ ರಂಗಭೂಮಿ ಕಲಾವಿದರ ಕನಸುಗಳನ್ನು ಅಕಾಡೆಮಿಕ್‌ ಆಗಿ ಈಡೇರಿಸುವಂತಾಗಲಿ ಎಂದು ಹೇಳಿದರು.

Advertisement

ಹಿರಿಯ ನಾಟಕಕಾರ ಎಸ್‌.ಎನ್‌. ರಂಗಸ್ವಾಮಿ ಚಿರಡೋಣಿ, ಹಿರಿಯ ಕಲಾವಿದ ಕೊಗಳ್ಳಿ ಪಂಪಣ್ಣ, ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೇವರ್ಗಿ, ಪತ್ರಕರ್ತ ಪ್ರಕಾಶ್‌ ಕುಗ್ವೆ ಅವರನ್ನ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಎಸ್‌. ಬೆಕ್ಕೇರಿ, ಎ. ಭದ್ರಪ್ಪ, ಎಸ್‌. ನೀಲಕಂಠಪ್ಪ, ಎಸ್‌. ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ನಂತರ ಚಿತ್ರದುರ್ಗದ ಜ.ಮು.ರಾ. ಕಲಾವಿದರಿಂದ ಬೆಳಕಿನಡೆಗೆ ನಾಟಕ ಪ್ರದರ್ಶನ ನಡೆಯಿತು. 

ಕಲಾವಿದರಿಗೆ ಹೆಚ್ಚು ಸಂಭಾವನೆ ಸಿಗಲಿ ಸರ್ಕಾರ ಇಂದು ಕೋಟಿ ರೂಪಾಯಿಗಳನ್ನು ರಂಗ ತರಬೇತಿಗೆ ಖರ್ಚು ಮಾಡುತ್ತಿದೆ. ಅದೇ ರೀತಿ ಮೊದಲು ವೃತ್ತಿ ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ 15 ಸಾವಿರ ಹಾಗೂ ನಾಟಕ ಕಂಪನಿಗಳ ಮಾಲೀಕರಿಂದ 15 ಸಾವಿರ ಸೇರಿದಂತೆ ಒಟ್ಟು 30 ಸಾವಿರ ತಿಂಗಳ ವೇತನ ಸಿಗುವಂತೆ ಮಾಡಬೇಕು. ಆಗ ಕಲಾವಿದರು ಹೆಚ್ಚು ಬರುತ್ತಾರೆ. ವೃತ್ತಿ ರಂಗಭೂಮಿ ಬೆಳೆಯತ್ತದೆ. 

ಜೊತೆಗೆ ಗುಣಮಟ್ಟದ ಹೊಸ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೊದಲು ಕಲಾವಿದರಿಗೆ ಸಂಭಾವನೆ ಹೆಚ್ಚು ಸಿಗುವಂತೆ ಮಾಡಿ ನಂತರ ಅಧ್ಯಯನ ಕೇಂದ್ರ ಸೇರಿದಂತೆ ಯಾವ ತರಬೇತಿ ಕೇಂದ್ರವನ್ನಾದರೂ ಸರ್ಕಾರ ಸ್ಥಾಪಿಸಲಿ.
 ರಾಜಣ್ಣ ಜೇವರ್ಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next