ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಕಾರ್ಮಿಕರ ಕೊರತೆ ಎದುರಾಗಿದ್ದು, ಸೋಮವಾರ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಅಲ್ಲದೆ ಗುರುವಾರ ದವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಶುಕ್ರವಾರದಿಂದ ಮಳೆ ಪ್ರಮಾಣ ಕಡಿಮೆ ಯಾಗಿದ್ದು, ಶನಿವಾರದಿಂದ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ. ಶನಿ ವಾರದಿಂದ ಭಾನುವಾರ ಸಂಜೆವರೆಗೆ ಬಿಡುವು ನೀಡದೆ ರಸ್ತೆ ಗುಂಡಿ ಮುಚ್ಚಲಾಗಿದೆ. ಆದರೆ, ದೀಪಾ ವಳಿ ಹಬ್ಬದ ಕಾರಣದಿಂದ ಸೋಮವಾರದಿಂದ ಕಾರ್ಮಿಕರು ರಜೆ ಪಡೆದಿದ್ದಾರೆ. ಹೀಗಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ 27 ಲೋಡ್ ಹಾಟ್ ಬಿಟುಮಿನ್ ಬಿಬಿಎಂಪಿಯ ಡಾಂಬರ್ ಮಿಶ್ರಣ ಘಟಕ ಹಾಗೂ ಖಾಸಗಿ ಘಟಕದಿಂದ ಪಡೆದು 550 ಗುಂಡಿ, ಶನಿವಾರ ರಾತ್ರಿ 13 ಲೋಡ್ ಡಾಂಬರ್ ಮಿಶ್ರಣ ಪಡೆದು 309 ಗುಂಡಿ ಮುಚ್ಚಲಾಗಿದೆ. ಭಾನು ವಾರ ಸಂಜೆ ವರೆಗೆ ಒಟ್ಟು 27 ಲೋಡ್ ಬಳಸಿ 570 ಗುಂಡಿ ಮುಚ್ಚಲಾಗಿದೆ. ಒಟ್ಟಾರೆ ಎರಡು ದಿನಗಳ ಕಾಲ 1,429 ಗುಂಡಿ ಮುಚ್ಚಲಾಗಿತ್ತು. ಭಾನುವಾರ ರಾತ್ರಿ ಐದು ಲೋಡ್ ಮಾತ್ರ ಡಾಂಬರ್ ಮಿಶ್ರಣ ಪೂರೈಕೆ ಆಗಿದ್ದು, 150 ಗುಂಡಿ ಮುಚ್ಚಲಾಗಿದೆ. ಇನ್ನು ಸೋಮ ವಾರ ಬೆಳಗ್ಗೆಯಿಂದ ಸಂಜೆವರೆಗೆ ನಗರದ ಎಂಟು ರಸ್ತೆಗಳಲ್ಲಿ 181 ಗುಂಡಿ ಮುಚ್ಚಲಾಗಿದೆ. ಈವರೆಗೆ 1760 ಗುಂಡಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ದಕ್ಷಿಣ ವಲಯದ ಮೈಸೂರು ರಸ್ತೆ ಹಾಗೂ ವಿಲ್ಸನ್‌ಗಾರ್ಡ್‌ನ್ ರಸ್ತೆಯಲ್ಲಿ ತಲಾ 20 ಗುಂಡಿ, ಆರ್‌ಆರ್ ನಗರ ವಲಯದ ಮಾಗಡಿ ರಸ್ತೆಯಲ್ಲಿ 20 ಗುಂಡಿ ಎಚ್‌ಎಂಟಿ ಮುಖ್ಯ ರಸ್ತೆಯಲ್ಲಿ 28, ಮಹದೇವಪುರದ ಹೊರ ವರ್ತುಲ ರಸ್ತೆಯ ಸರ್ವೇಸ್ ರಸ್ತೆಯಲ್ಲಿ 48, ಪಶ್ಚಿಮ ವಲಯದ ಚಾಮರಾಜಪೇಟೆಯ 1ನೇ ಮುಖ್ಯ ರಸ್ತೆಯಲ್ಲಿ 30, ಟ್ಯಾಂಕ್ ಬಂಡ್ ರಸ್ತೆಯಲ್ಲಿ 5 ಹಾಗೂ ಗಾಂಧಿನಗರದಲ್ಲಿ 10 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ .
ಮೂರು ದಿನಗಳಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಡಾಂಬರು ಮಿಶ್ರಣ ಘಟಕ ಮತ್ತು ಯಂತ್ರಗಳನ್ನು ಪೂಜೆ ಮಾಡುವುದಕ್ಕಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದ್ದು, ಗುರುವಾರದವರೆಗೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಲಿದೆ.
– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ