ಬಂಟ್ವಾಳ: ದೈವಾರಾಧಾನೆ ವಿಶೇಷ ಪರಂಪರೆಯನ್ನು ಹೊಂದಿರುವ ಸಜೀಪಮಾಗಣೆಗೆ ಸಂಬಂಧಿಸಿದ ಪ್ರದೇಶಗಳು ಪ್ರಸ್ತುತ ನಾಲ್ಕು ಕಂದಾಯ ಗ್ರಾಮಗಳಾಗಿ ಬೇರ್ಪಟ್ಟಿವೆ. ಅದರಲ್ಲಿ ಸಜೀಪ ಮುನ್ನೂರು ಕೂಡ ಒಂದು. ವಿಶೇಷವೆಂದರೆ ಎಲ್ಲ ಗ್ರಾಮಗಳ ಹೆಸರು ಸಜೀಪದಿಂದಲೇ ಆರಂಭಗೊಂಡು ನಡು, ಮೂಡ, ಪಡು ಹಾಗೂ ಮುನ್ನೂರುಗಳಾಗಿ ಬೇರ್ಪಡುತ್ತವೆ.
ಜೀವನದಿ ನೇತ್ರಾವತಿ ನದಿ ತಟವನ್ನೇ ಆವರಿಸಿರುವ ಸಜೀಪಮುನ್ನೂರು ಗ್ರಾಮ ವ್ಯಾಪ್ತಿಯ ನಂದಾವರ ಪ್ರದೇಶವು ಐತಿಹಾಸಿಕವಾಗಿ ಮಹತ್ವ ಪಡೆದಿದೆ. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ ಪ್ರಸಿದ್ಧವಾಗಿದೆ. ನಂದಾವರವು ಹಲವು ಶತಮಾನಗಳ ಕಾಲ ಬಂಗರಸ ರಾಜಧಾನಿಯಾಗಿ ಮೆರೆದಿತ್ತು. ಹಳೆಯದಾದ ಎರಡು ಸುತ್ತಿನ ಮಣ್ಣಿನ ಕೋಟೆ, ವೀರಭದ್ರನ ಗುಡಿ, ಹನುಮಂತ ದೇವಸ್ಥಾನಗಳೂ ಇದ್ದವು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ನಂದರೆಂಬ ಅರಸುಮನೆತನದ ಈ ಪ್ರದೇಶವು ನಂದಪುರವಾಗಿದ್ದು, ಬಳಿಕ ನಂದಾವರವಾಯಿತಂತೆ.
ಸಜೀಪಮುನ್ನೂರಿನ ಈ ಪ್ರದೇಶಗಳು ಅರಸು ಮನೆತನಗಳಿಗೆ ರಾಜಧಾನಿಯಾಗಿದ್ದವು. ಈಗಿನ ಕಾಲಘಟ್ಟದಲ್ಲಿ ತೀರಾ ಗ್ರಾಮೀಣ ಪ್ರದೇಶವಾಗಿದೆ. ನೇತ್ರಾವತಿ ನದಿ ಕಿನಾರೆಯಲ್ಲೇ ಇರುವ ಸಜೀಪ ಮುನ್ನೂರಿನಲ್ಲೇ ಜನರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರ ಜತೆಗೆ ರಸ್ತೆ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳಿಂದ ಗ್ರಾಮವೂ ಕೊರಗುತ್ತಿದೆ ಎಂದರೆ ತಪ್ಪಲ್ಲ.
ಸಮಸ್ಯೆಗಳು ಒಂದೆರಡಲ್ಲ
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದ್ದು, ಶಾರದಾನಗರ, ಮಿತ್ತಕಟ್ಟ ಪ್ರದೇಶದ ನಾಗರಿಕರು ಕುಡಿಯುವ ನೀರಿಗಾಗಿ ಹಲವು ಬಾರಿ ಗ್ರಾ.ಪಂ.ಕಚೇರಿಯ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಜತೆಗೆ ನದಿಯ ನೀರನ್ನು ನೇರವಾಗಿ ಜನರಿಗೆ ಕುಡಿಯಲು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಇದೇ ಗ್ರಾಮದಲ್ಲಿ ಜಾಕ್ ವೆಲ್ ನಿರ್ಮಿಸಿ ನೀರು ಪೂರೈಕೆ ಮಾಡುತ್ತಿದ್ದರೂ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. 2 ವರ್ಷಗಳ ಹಿಂದೆ ಉಳ್ಳಾಲ ನಗರ ಹಾಗೂ ಗ್ರಾಮೀಣ ಭಾಗಕ್ಕೆ ನೀರು ಪೂರೈಸಲು ಆಲಾಡಿಯಲ್ಲಿ ಜಾಕ್‌ವೆಲ್ ನಿರ್ಮಾಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪ್ರಸ್ತುತ ಜಾಕ್ ವೆಲ್ ಕಾಮಗಾರಿ ಪೂರ್ಣಗೊಂಡರೂ, ಗ್ರಾಮಸ್ಥರ ವಿರೋಧದಿಂದ ಸಜೀಪಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಕೆ ಆಗಿಲ್ಲ.
ಜಾಕ್‌ವೆಲ್ ನಿರ್ಮಾಣದ ಸಂದರ್ಭದಲ್ಲಿ ಘನ ವಾಹನಗಳು ಹೋಗಿ ಗ್ರಾಮದ ಆಲಾಡಿ, ಉಧ್ದೋಟು, ಮಾಲೈಬೆಟ್ಟು ಸಂಪರ್ಕಿಸುವ ರಸ್ತೆಗಳು ತೀರಾ ಹದಗೆಟ್ಟಿದ್ದು, ಇನ್ನೂ ಕೂಡ ಡಾಮರು ಹಾಕಿಲ್ಲ. ಪೈಪ್‌ಲೈನ್ ಆಗದೆ ರಸ್ತೆ ದುರಸ್ತಿಯಾಗದು ಎಂಬ ಮಾತುಗಳಿದ್ದು, ಸ್ಥಳೀಯರು ಸಂಕಷ್ಟ ಪಡುವ ಸ್ಥಿತಿ ಇದೆ.
ತುಂಬೆ ಡ್ಯಾಂ ಸಂತ್ರಸ್ತರ ಪಾಡು
ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಮ್‌ನ್ನು 7 ಮೀ. ಸಾಮರ್ಥ್ಯಕ್ಕೆ ಏರಿಸುವ ಸಂದರ್ಭದಲ್ಲಿ ಮುಳೆಯಾದ ಬಂಟ್ವಾಳ ತಾಲೂಕಿನ ಕೃಷಿ ಭೂಮಿಗಳಲ್ಲಿ ಸಜೀಪಮುನ್ನೂರಿನ ರೈತರ ಕೂಡ ಸಂತ್ರಸ್ತರಾಗಿದ್ದು, ಪರಿಹಾರ ವಿತರಣೆ ಸಮರ್ಪಕವಾಗಿಲ್ಲ ಎಂಬ ಆರೋಪವಿದೆ.
ಮುಖ್ಯವಾಗಿ ಕೇಂದ್ರ ಜಲ ಆಯೋಗದ ಪ್ರಕಾರ ವರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು ಎಂಬ ಬೇಡಿಕೆ ಈಡೇರಿಲ್ಲ. ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಗ್ರಾಮಕ್ಕೆ ಭೇಟಿ ನೀಡಿ ರೈತರ ಜತೆ ಸಮಾಲೋಚಿಸಿ ವರತೆ ಪ್ರದೇಶಕ್ಕೆ ಪರಿಹಾರ ನೀಡುವುದಕ್ಕೆ ಸರ್ವೇ ನಡೆಸಲು ಸೂಚಿಸಿದ್ದರೂ ಸರ್ವೇ ಇನ್ನೂ ನಡೆದಿಲ್ಲ ಎಂಬುದು ಕೃಷಿಕರ ಆರೋಪ. ಜತೆಗೆ ಮುಳುಗಡೆ ಭೂಮಿಯಲ್ಲೂ ಹಲವು ಮಂದಿಗೆ ಪರಿಹಾರ ನೀಡಿಲ್ಲ ಎಂಬುದು ಹೋರಾಟಗಾರರ ಆರೋಪ.
ಸ್ಮಶಾನಕ್ಕೆ 32 ವರ್ಷಗಳ ಹೋರಾಟ
ಶಾರದಾನಗರದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಗಾಗಿ 50 ಸೆಂಟ್ಸ್ ನಿವೇಶನ 1990ರಲ್ಲಿ ಮಂಜೂರಾಗಿದ್ದು, ಇನ್ನೂ ಶ್ಮಶಾನ ನಿರ್ಮಾಣವಾಗಿಲ್ಲ. ಪ್ರತೀ ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲೂ ಗ್ರಾಮಸ್ಥರು ಈ ಕುರಿತು ಒತ್ತಾಯ ಮಾಡಿದರೂ ಪ್ರಯೋಜನವಾಗಿಲ್ಲ.
ಹಿಂದೊಮ್ಮೆ ಲೋಕಾಯುಕ್ತರಿಗೂ ಈ ಕುರಿತು ದೂರು ನೀಡಲಾಗಿದ್ದು, ಜತೆಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೂ ದೂರು ನೀಡಿದರೂ ರುದ್ರಭೂಮಿ ನಿರ್ಮಾಣವಾಗಿಲ್ಲ ಎನ್ನ ಲಾಗಿದೆ. ಇತ್ತೀಚೆಗೆ ಡಿಸಿ ಡಾ| ರಾಜೇಂದ್ರ ಕೆ.ವಿ. ಬಂಟ್ವಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಈ ಬಗ್ಗೆ ಅಹವಾಲು ನೀಡಲಾಗಿದ್ದು, ಕ್ರಮಕ್ಕೆ ಬಂಟ್ವಾಳ ತಾ. ಪಂ. ಇಒಗೆ ಸೂಚಿಸುವುದಾಗಿ ಡಿಸಿ ಹೇಳಿದ್ದರು. ಈಗಲಾದರೂ ಈಡೇರುವುದೇ ಎಂದು ಕಾದು ನೋಡಬೇಕಿದೆ.
ಅನುದಾನ ಸಾಲುತ್ತಿಲ್ಲ: ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ತ್ಯಾಜ್ಯದ ಸಮಸ್ಯೆ ಇದ್ದು, ಶುದ್ಧ ಕುಡಿಯುವ ನೀರು, ಸ್ವಚ್ಛತೆಯ ಕುರಿತು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಗ್ರಾಮದ ಆದಾಯ, ಅನುದಾನ ಕಡಿಮೆ ಇರುವುದರಿಂದ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಹೀಗಾಗಿ ಶಾಸಕರೂ ನಮ್ಮ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. –
ಶಬೀನಾ, ಉಪಾಧ್ಯಕ್ಷರು, ಸಜೀಪಮುನ್ನೂರು ಗ್ರಾ.ಪಂ
ನ್ಯಾಯ ಸಿಕ್ಕಿಲ್ಲ: ಗ್ರಾಮದಲ್ಲಿರುವ ತುಂಬೆ ಡ್ಯಾಮ್ ಸಂತ್ರಸ್ತರ ಸಮರ್ಪಕ ಪರಿಹಾರ ವಿತರಣೆಯ ಜತೆಗೆ ವರತೆ ಪ್ರದೇಶಕ್ಕೂ ಪರಿಹಾರ ನೀಡಬೇಕು ಎಂಬ ನಮ್ಮ ಹೋರಾಟಕ್ಕೆ ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ. ಈ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪಗೊಂಡಿದೆ. ಜತೆಗೆ ಗ್ರಾಮದಲ್ಲಿನ ರುದ್ರಭೂಮಿ ನಿರ್ಮಾಣಕ್ಕೆ 32 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದು, ಪ್ರಯೋಜನವಾಗಿಲ್ಲ. –
ಎಂ.ಸುಬ್ರಹ್ಮಣ್ಯ ಭಟ್, ಸ್ಥಳೀಯ ಹೋರಾಟಗಾರರು
-ಕಿರಣ್ ಸರಪಾಡಿ