ರೋಣ: ಬೇಸಿಗೆ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಕುಡಿಯುವ ನೀರಿಗೆ ಅಲೆದಾಟ ಶುರುವಾಗುತ್ತಿದೆ. ನೆತ್ತಿ ಸುಡುವ ಬಿಸಿಲಿಗೆ ಹೈರಾಣಾದ ಜನರೇ ಕುಡಿಯುವ ನೀರಿಗೆ ಗುಟುರುತ್ತಿರುವಾಗ ಮೂಕ ಪ್ರಾಣಿಗಳ ರೋದನೆ ಮಾತ್ರ ಹೇಳತೀರದ್ದು.
ತಾಲೂಕಿನಲ್ಲಿ ಬೇಸಿಗೆ ಬಿಸಿಲಿನ ಝಳಕ್ಕೆ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಲ್ಲಿದ್ದ ನೀರು ತಳ ಕಂಡಿದೆ. ಹೀಗಾಗಿ ಹೊಲ-ಜಮೀನುಗಳಿಗೆ ತೆರಳಿದ ಜಾನುವಾರುಗಳ ದಾಹ ಇಂಗಿಸಬೇಕಾದರೆ ಮತ್ತೆ ಗ್ರಾಮಕ್ಕೆ ಮರಳುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದು, ನೀರಿನ ತೊಟ್ಟಿ ನಿರ್ಮಾಣ ಮಾಡಬೇಕೆನ್ನುವ ಕೂಗು ಸಹ ಕೇಳಿಬರುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನುರಿತ ಅಭಿಯಂತರರ 42 ಸಾವಿರ ರೂ. ಅನುದಾನದಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಲು ಅಂದಾಜು ಪಟ್ಟಿಯೊಂದಿಗೆ ರೂಪುರೇಷೆ ನೀಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಬೇಕಾದ ಗ್ರಾಮ ಪಂಚಾಯತಿಗಳು ಮಾತ್ರ ಇಲ್ಲಿಯವರೆಗೆ ಯಾವ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಿಸದಿರುವುದು ದುರ್ದೈವ. ಇದರಿಂದ ಗ್ರಾಮ ಪಂಚಾಯತಿ ಅಧಿಕಾರಿಗಳಿಗೂ, ತಾಪಂ-ಜಿಪಂ ಅಧಿ ಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿ ಧಿಗಳಿಗೆ ಮೂಕ ಪ್ರಾಣಿಗಳ ರೋದನ ಕೇಳಿಸದಂತಾಗಿದೆ.
1.80 ಲಕ್ಷ ಸಾಕು ಪ್ರಾಣಿಗಳು: ತಾಲೂಕಿನಲ್ಲಿ ಬರುವ ಒಟ್ಟು ಗ್ರಾಮಗಳಲ್ಲಿ 33,000 ಎಮ್ಮೆ, 27,000 ಆಕಳು, 70,000 ಕುರಿ, 50,000 ಮೇಕೆ ಸೇರಿದಂತೆ ಒಟ್ಟು 1.80 ಲಕ್ಷ ಸಾಕು ಪ್ರಾಣಿಗಳಿವೆ. ಇವುಗಳು ಮನೆಯಲ್ಲಿದ್ದಾಗ ಮಾಲೀಕರು ತಮಗೆ ಸಂಗ್ರಹಿಸಿಟ್ಟ ನೀರು ಕುಡಿಸುತ್ತಾರೆ. ಆದರೆ ಇವು ಮೇಯಲು ಹೊಲಗಳಿಗೆ ತೆರಳಿದಾಗ ಅಲ್ಲಿ ಯಾವುದೇ ದೊಡ್ಡ ಪ್ರಮಾಣದ ಕೆರೆಗಳಿಲ್ಲದ ಕಾರಣ ನೀರಿನ ದಾಹದಲ್ಲಿಯೇ ಮನೆಗೆ ಹಿಂದಿರುಗುವ ಸ್ಥಿತಿ ಬಂದೊದಗಿದೆ. ಮನುಷ್ಯರು ಬಾಯಾರಿಕೆಯಾದರೆ ನೀರು ಇದ್ದಲ್ಲಿಗೆ ಹೋಗುತ್ತಾರೆ. ಇಲ್ಲವೇ ಅವರಿವರನ್ನು ಬೇಡಿಯಾದರು ನೀರು ಕುಡಿಯುತ್ತಾರೆ. ಆದರೆ ಮೂಕ ಪ್ರಾಣಿ, ಪಕ್ಷಿ, ದನಕರುಗಳು ದಾಹ ಇಂಗಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಇದೀಗ ಎಲ್ಲರನ್ನೂ ಕಾಡುತ್ತಿದೆ.
ಸದ್ಯ ಜಿಲ್ಲೆಯಲ್ಲಿ ಬರುವ ಎಲ್ಲ ಹಳ್ಳಿಗಳಿಗೂ ಡಿಬಿಒಟಿ ಯೋಜನೆಯಲ್ಲಿ ನೀರು ಪೂರೈಸಲಾಗುತ್ತಿದೆ. ಇದರ ಜೊತೆಗೆ ಆಯಾ ಗ್ರಾಮಗಳಲ್ಲಿ ನೀರಿನ ಮೂಲ ಯಾವ ಸ್ಥಳದಲ್ಲಿದೆಯೋ ಅಲ್ಲಿಯೇ ಗ್ರಾಪಂ ವತಿಯಿಂದ ಶೀಘ್ರ ನೀರಿನ ತೊಟ್ಟಿ ನಿರ್ಮಿಸಲು ಜಿಲ್ಲೆಯ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡುತ್ತೇನೆ.
–ಆನಂದ.ಕೆ, ಜಿಪಂ ಸಿಇಒ
ಕುರಿ ಮರಿ ಮೇಯಿಸಲು ಹೋದಾಗ ಅಡವಿಯಲ್ಲಿ ನೀರು ಸಿಗುವುದಿಲ್ಲ. ಇಷ್ಟು ದಿನಗಳ ಕಾಲ ರೈತರ ಹೊಲದಲ್ಲಿರುವ ಕೃಷಿ ಹೊಂಡಗಳಲ್ಲಿನ ಕುರಿಗಳಿಗೆ ನೀರು ಕುಡಿಸುತ್ತಿದ್ದೆವು. ಆದರೆ ಈಗ ಹೊಂಡದಲ್ಲಿನ ನೀರು ಬತ್ತಿದೆ. ಹೀಗಾಗಿ ನೀರಿನದ್ದೇ ಚಿಂತೆಯಾಗಿದೆ. ಪಂಚಾಯತಿಯಿಂದ ಬೋರ್‌ವೆಲ್ ಇದ್ದಲ್ಲಿ ನೀರಿನ ತೊಟ್ಟಿ ನಿರ್ಮಿಸುತ್ತೇವೆ ಎಂದು ಎರಡು ವರ್ಷದಿಂದ ಹೇಳುತ್ತಿದ್ದರೂ ಅದುಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. –
ಯಲ್ಲಪ್ಪ ಕುಲಮಿಂಚು, ಕುರಿಗಾಯಿ
-ಯಚ್ಚರಗೌಡ ಗೋವಿಂದಗೌಡ್ರ