ಅಂಕೋಲಾ: ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು, ಅಂತಹ ಪ್ರದೇಶಗಳಿಗೆ ತಾಲೂಕಾಡಳಿತ ಟ್ಯಾಂಕರ್ ನೀರು ಪೂರೈಸಲು ವ್ಯವಸ್ಥೆ ಮಾಡಿಕೊಂಡಿದೆ. ಕಳೆದ ವರ್ಷ ತಾಲೂಕಿನ 21 ಗ್ರಾಪಂ ಮತ್ತು ಪುರಸಭೆಯ ಎಲ್ಲಾ ವಾರ್ಡ್‌ಗಳಲ್ಲಿಯೂ ನೀರಿನ ಅಭಾವ ಉಂಟಾಗಿತ್ತು. ಈ ವರ್ಷ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ. ಗ್ರಾಮೀಣದಲ್ಲಿ ಮಾತ್ರ ಉಂಟಾಗಿದೆ.
ಬೆಳಂಬಾರದ ಅಂಬೇರಹಿತ್ಲ, ತಾಳೆಬೈಲ್ ಗ್ರಾಮದಲ್ಲಿ ಅಂತರ್ಜಲ ಕುಸಿದಿದ್ದು ಬಾವಿಗಳು ಬರಡಾಗಿವೆ. ಇನ್ನೂ ಕೆಲವೆಡೆ ಉಪ್ಪುಮಿಶ್ರಿತ ನೀರು ಬರುತ್ತಿದೆ. ಸೂರ್ವೇ ಮತ್ತು ಪೂಜಗೇರಿಯಲ್ಲಿ ನೀರಿಗಾಗಿ ಜನರ ಪರದಾಟ ಶುರುವಾಗಿದೆ. ಶೆಟಗೇರಿ, ಬೆಳಂಬಾರ, ಬೆಳಸೆ, ಹಟ್ಟಿಕೇರಿ, ಮೊಗಟಾ, ಸಗಡಗೇರಿ, ಹೊನ್ನೆಬೈಲ್, ಹಾರವಾಡ, ಬೇಲೆಕೇರಿ, ಬೊಬ್ರುವಾಡ ಪಂಚಾಯತ ವ್ಯಾಪ್ತಿಯ ಬಹುತೇಕ ಮಜರೆಗಳಲ್ಲಿ ನೀರಿನ ಅಭಾವ ತಲೆದೋರುವ ಸ್ಥಿತಿ ಉಂಟಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತಂಡ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿ ತಯಾರಿಸಿದ್ದು, ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಆಡಳಿತ ಪೂರ್ವ ತಯಾರಿಯಲ್ಲಿದೆ.
ಮುಂಜಾಗ್ರತಾ ಕ್ರಮದ ಫಲ : ಕಳೆದ ವರ್ಷ ಗಂಗಾವಳಿ ಬರಿದಾಗಿ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿತ್ತು. ಜಲಕ್ಷಾಮ ನಿವಾರಣೆ ನಿಟ್ಟಿನಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಅವರು ಗಂಗಾವಳಿ ನದಿಯ ಸಿಹಿನೀರಿನ ಸಂಗ್ರಹಣೆ ಮಾಡುವ ಹೊನ್ನಳ್ಳಿಯ ಬಳಿ ಮರಳಿನ ದಿಬ್ಬ ಹಾಕಿಸಿ ನೀರನ್ನು ತಡೆ ಹಿಡಿದಿದ್ದು, ಗಂಗಾವಳಿ ಇದೀಗ ಮೈದುಂಬಿಕೊಂಡಿದೆ. ಮೇ 15ರ ವರೆಗೂ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಇಲ್ಲದಂತಾಗಿದೆ.
ನೀರಿನ ಸಮಸ್ಯೆ ಎದುರಾಗುವ ಮುನ್ನವೇ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಟ್ಯಾಂಕರ್‌ನಿಂದ ನೀರು ಪೂರೈಸಲು ಟೆಂಡರ್ ಆಗಿದೆ. ಸಮಸ್ಯೆ ಅರಿತು ಜನರಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು.
-ಉದಯ ಕುಂಬಾರ, ತಹಶೀಲ್ದಾರ್
-ಅರುಣ ಶೆಟ್ಟಿ