Advertisement

ನೀರಿಗೆ ತತ್ವಾರ: ಜನರ ಹಾಹಾಕಾರ

02:14 PM Mar 21, 2020 | Suhan S |

ಚಿಕ್ಕೋಡಿ: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ತೋಟಪಟ್ಟಿ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಗ್ರಾಮದ ಬಸವ ನಗರ ಮತ್ತು ಲಕ್ಷ್ಮೀ ನಗರದ ತೋಟಪಟ್ಟಿ ಪ್ರದೇಶದ ಜನರು ಒಂದು ಕಿಮೀ ಕ್ರಮಿಸಿ ಗುಡ್ಡದ ಕ್ವಾರಿ ಹೊಂಡದಲ್ಲಿರುವ ನೀರನ್ನು ತಂದು ಕುಡಿಯುವ ಪ್ರಸಂಗ ಬಂದೊದಗಿದೆ.

Advertisement

ಕಳೆದ ಆಗಸ್ಟ್‌ ತಿಂಗಳಲ್ಲಿ ಭೀಕರ ಮಳೆ ಸುರಿದು ಅವಾಂತರ ಸೃಷ್ಟಿಯಾಗಿತ್ತು. ಅತಿಯಾದ ಮಳೆಯಿಂದ ಬೇಸಿಗೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಜನ ಅಂದುಕೊಂಡಿದ್ದರು. ಆದರೆ ಮಾರ್ಚ್‌ ಆರಂಭವಾಗುತ್ತಿದ್ದಂತೆಯೇ ನೆತ್ತಿ ಸುಡುವ ಬಿಸಿಲಿನ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಗ್ರಾಮದ ತೋಟಪಟ್ಟಿ ಪ್ರದೇಶದ ಬಾವಿ, ಕೊಳವೆ ಬಾವಿ ಬತ್ತಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

ಹತ್ತರವಾಟ ಗ್ರಾಮದ ಬಸವನಗರ ಮತ್ತು ಲಕ್ಷ್ಮೀ ನಗರದ 35 ರಿಂದ 40 ಕುಟುಂಬಗಳು ಅಂದಾಜು 150 ಜನ ವಾಸಿಸುವ ಪ್ರದೇಶದಲ್ಲಿ ಜನ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವಂತಾಗಿದೆ. ಬೆಳಗ್ಗೆ ತೋಟಪಟ್ಟಿ ಪ್ರದೇಶದಿಂದ ಒಂದು ಕಿಮೀ ದೂರದಲ್ಲಿ ಇರುವ ಗುಡ್ಡ ಹತ್ತಿ ಕೆಳಗೆ ಇರುವ ಕ್ವಾರಿಯ ಹೊಂಡದ ಅಲ್ಪಸ್ವಲ್ಪ ನೀರು ತರುವುದು ಶ್ರಮದಾಯಕವಾಗಿದೆ. ಆದರೂ ಮಹಿಳೆಯರು ಬಗಲಲ್ಲಿ ಬಿಂದಿಗೆ ಹಿಡಿದುಕೊಂಡು ಕಲ್ಲು ಮುಳ್ಳು ಎನ್ನದೇ ಗುಡ್ಡದ ಕ್ವಾರಿಯ ಹೊಂಡದಲ್ಲಿ ಇರುವ ನೀರನ್ನು ಎತ್ತಿ ತರುತ್ತಿದ್ದಾರೆ.

ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ: ಹತ್ತರವಾಟ ಗ್ರಾಮಕ್ಕೆ ಜೈನಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದೆ. ಆದರೆ ಈ ಯೋಜನೆ ಮೂಲಕ ಸಮರ್ಪಕ ನೀರು ಪೂರೈಕೆ ಆಗದೇ ಇರುವುದರಿಂದ ಗ್ರಾಮದ ತೋಟಪಟ್ಟಿ ಪ್ರದೇಶದ ಜನ ಜಲಮೂಲ ಅರಸಿ ನೀರು ತರುತ್ತಿದ್ದಾರೆ. ಈಗಾಗಲೇ ಬಸವ ನಗರ ಹಾಗೂ ಲಕ್ಷ್ಮೀ ನಗರದ ತೋಟಪಟ್ಟಿ ಪ್ರದೇಶದಲ್ಲಿ ಒಂದು ಜಲಕುಂಭ ಇದೆ. ಆದರೆ ಜಲಕುಂಭಕ್ಕೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ, ನಾಲ್ಕೈದು ದಿನಕ್ಕೊಮ್ಮೆ ಜಲಕುಂಭಕ್ಕೆ ನೀರು ಬರುತ್ತದೆ. ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಆದರೆ ನಾಲ್ಕೈದು ದಿನಕ್ಕೊಮ್ಮೆ ಒಂದು ಜಲಕುಂಭ ತುಂಬಿದರೇ ಅಲ್ಲಿಯ ತೋಟಪಟ್ಟಿ ಜನರಿಗೆ ನೀರು ಸಾಕಾಗುತ್ತಿಲ್ಲ, ಹೀಗಾಗಿ ಗ್ರಾಮದ ಪಕ್ಕದಲ್ಲಿ ಇರುವ ಗುಡ್ಡದ ತಗ್ಗು ಪ್ರದೇಶದಲ್ಲಿ ಹೊಂಡದಲ್ಲಿ ಇರುವ ನೀರನ್ನು ತಂದು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪುರುಷರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸಹ ನೀರಿಗಾಗಿ ಅಲೆದಾಡುವುದು ಕಂಡು ಬಂದಿದೆ. ಬಸವ ನಗರ ಹಾಗೂ ಲಕ್ಷ್ಮೀ ನಗರ ನಿವಾಸಿಗಳಿಗೆ ಜೈನಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸಮರ್ಪಕ ನೀರು ಪುರೈಕೆ ಮಾಡಬೇಕೆಂದು ಹಲವು ಬಾರಿ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಅ ಕಾರಿಗಳು ಸ್ಪಂದನೆ ನೀಡುತ್ತಿಲ್ಲ, ಬೇಸಿಗೆಯಲ್ಲಿ ಸಮರ್ಪಕ ನೀರು ಕೊಟ್ಟರೆ ಅನುಕೂಲವಾಗುತ್ತದೆ. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

Advertisement

ಹತ್ತರವಾಟ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಚಾಲ್ತಿಯಲ್ಲಿದೆ. ಅಲ್ಲಿಂದ ತೋಟಪಟ್ಟಿ ಪ್ರದೇಶಕ್ಕೆ ಪೈಪ್‌ಲೈನ್‌ ಮೂಲಕ ನೀರು ಕೊಡಿ ಎಂದರೆ ಅದು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ, ಈಗ ಇರುವ ಕೊಳವೆ ಬಾವಿ ಬತ್ತುವ ಸ್ಥಿತಿ ತಲುಪಿದೆ. ಹೀಗಾಗಿ ಇಲ್ಲಿಯ ಪ್ರದೇಶದ ಜನರು ಗುಡ್ಡದ ಕ್ವಾರಿಯ ಹೊಂಡದಿಂದ ನೀರು ತರುತ್ತಿದ್ದಾರೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕು. -ದಿನಕರ ಮಗದುಮ್‌, ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next