ಕೆ.ಆರ್.ಪುರ: ಕೆ.ಆರ್.ಪುರ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ, ಹೊಸದಾಗಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ, ಜತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಜನರು ಪರದಾಟ ಹೇಳತೀರದಾಗಿದೆ.
ಕೊಳವೆ ಬಾವಿ ನೀರು ಆಶ್ರಯಿಸಿರುವ ಇಲ್ಲಿನ ನಿವಾಸಿಗಳು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಟ್ಯಾಂಕರ್ ಮಾಲೀಕರು ಹೆಚ್ಚಿನ ಹಣ ವಸೂಲಿಗೆ ಮುಂದಾಗಿದ್ದಾರೆ. ವಿಧಿಯಿಲ್ಲದೇ ಹೆಚ್ಚು ಹಣ ನೀಡಿದರೂ ಬೇಗ ಟ್ಯಾಂಕರ್ ನೀರು ಕೂಡ ಸಿಗುತ್ತಿಲ್ಲ. ಎರಡೂ¾ರು ದಿನ ಕಾಯಬೇಕಾದ ಪರಿಸ್ಥಿತಿ ಇದೆ.
ಕೆ.ಆರ್.ಪುರ ಕ್ಷೇತ್ರದ ಪ್ರತಿ ವಾರ್ಡ್‌ನಲ್ಲಿ 200-300 ಕೊಳವೆ ಬಾವಿಗಳು ಇದ್ದರೂ ನೀರು ಬತ್ತಿದ್ದರಿಂದ ಉಪಯೋಗವಿಲ್ಲದಂತಾಗಿವೆ. ಕೊಳವೆ ಬಾವಿ ಕೊರೆಸುವ ಮುಂದಾಗಿದ್ದರೂ ಸಾವಿರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ, ನೀರು ಹೊಂದಿರುವ ಪಾಯಿಂಟ್ ದೊರೆಯುತ್ತಿಲ್ಲ. ಹೀಗಾಗಿ ಸುಮಾರು 25 ಕಿ.ಮೀ. ದೂರದ ಹಳ್ಳಿಗಳಿಂದ ಕುಡಿಯುವ ನೀರು ತರಿಸಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಹಲವು ದಿನಗಳಿಂದ ನೀರಿನ ಸಮಸ್ಯೆ ಹೇಳತೀರದಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಅಧಿಕಾರಿಗಳು ತುರ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಹಲವು ಕಡೆ ಪೂರೈಸುತ್ತಿಲ್ಲ. ಅಧಿಕಾರಿಗಳು ನಮ್ಮ ದೂರವಾಣಿ ಕರೆ ಸ್ವೀಕರಿಸುವುದಿಲ್ಲ, ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕೆಂದು ತಿಳಿಯುತ್ತಿಲ್ಲ
-ಪುನೀತ್, ಕಲ್ಕೆರೆ ನಿವಾಸಿ
ಕುಡಿಯುವ ನೀರಿನ ಸಂಕಷ್ಟ ಹೇಳತೀರದಾಗಿದೆ. ಸ್ನಾನ, ಅಡುಗೆ, ದಿನನಿತ್ಯದ ಕೆಲಸಗಳಿಗೆ ನೀರಿನ ಅಭಾವ ಉಂಟಾಗಿದೆ. ಈಗ ಟ್ಯಾಂಕರ್ ನೀರು ಕೂಡ ಸಿಗುತ್ತಿಲ್ಲ, ಬಿಬಿಎಂಪಿಯಿಂದ ನೀರು ಪೂರೈಕೆ ಅಗುತ್ತಿಲ್ಲ.
-ಪಾರ್ವತಮ್ಮ, ಕನಕನಗರ