Advertisement

ಡಿಕೆಶಿ ಕ್ಷೇತ್ರದಲ್ಲಿ ಪಶು ವೈದ್ಯರ ಕೊರತೆ

01:18 PM Nov 23, 2022 | Team Udayavani |

ಕನಕಪುರ: ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕ್ಷೇತ್ರವಾದಕನಕಪುರ ತಾಲೂಕಿನಲ್ಲಿ ಪಶು ವೈದ್ಯರ ಕೊರತೆಯಿಂದ ಪಶು ಆಸ್ಪತ್ರೆಗಳಿದ್ದರೂ, ಇಲ್ಲದಂತಾಗಿ ರಾಸುಗಳಿಗೆ ಸಮರ್ಪಕ ಆರೋಗ್ಯ ಸೇವೆ ಸಿಗದೆ, ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಡುತ್ತಿದೆ. ತಾಲೂಕಿನಲ್ಲಿರುವ 37 ಪಶು ಆಸ್ಪತ್ರೆಗಳಲ್ಲಿ ಕೆವಲ 15 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ. ಇದರಿಂದ ಪಶು ಇಲಾಖೆ ಸೌಲಭ್ಯಮತ್ತು ಅನಾರೋಗ್ಯಕ್ಕೆ ತುತ್ತಾದ ರಾಸುಗಳಿಗೆ ಸರಿ ಸಮಯಕ್ಕೆ ಚಿಕಿತ್ಸೆ ಸಿಗದೆ, ಹಾಲಿನ ಇಳುವರಿ ಕುಂಠಿತಗೊಂಡು ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ರೈತರ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ: ರೇಷ್ಮೆ ನಗರಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಗರ ಜಿಲ್ಲೆ ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧಿಯಾಗಿದೆ. ಜಿಲ್ಲೆಯಲ್ಲೇಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕನಕಪುರ ತಾಲೂಕಿನಲ್ಲಿ ಸಾವಿರಾರು ರೈತರು, ಹೈನುಗಾರಿಕೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸ್ವ ಉದ್ಯೋಗಕ್ಕೆ ಪೋ›ತ್ಸಾಹ ನೀಡಬೇಕಾದ ಸರ್ಕಾರ ಮಾತ್ರ ಹೈನೋದ್ಯಮದ ರೈತರ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ ವಹಿಸಿರುವುದು, ತಾಲೂಕಿನಲ್ಲಿ ವೈದ್ಯರಿಲ್ಲದ ಪಶು ಆಸ್ಪತ್ರೆಗಳೇ ಸಾಕ್ಷಿಯಾಗಿದೆ. 37 ಪಶು ಆಸ್ಪತ್ರೆಗಳ ಪೈಕಿ 15 ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕಿನ ನೂರಾರು ಹಳ್ಳಿಗಳ ರೈತರ ರಾಸುಗಳಿಗೆ ಅನಾರೋಗ್ಯವಾದ ಸಂದರ್ಭಗಳಲ್ಲಿ ವೈದ್ಯರು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಸಕರ ಸ್ವ ಗ್ರಾಮದಲ್ಲಿಲ್ಲ ಪಶು ವೈದ್ಯರು: ಪ್ರಭಾವಿ ರಾಜಕಾರಣಿ, ಶಾಸಕ ಡಿ.ಕೆ. ಶಿವಕುಮಾರ್‌ ಸ್ವಗ್ರಾಮ ದೊಡ್ಡ ಆಲಹಳ್ಳಿ ಗ್ರಾಮದಲ್ಲೇ ಪಶು ವೈದ್ಯರಿಲ್ಲದೆ, ಪಶು ಆಸ್ಪತ್ರೆ ಅನಾಥವಾಗಿದೆ. ತಾಲೂಕಿನ ಹೋಬಳಿ ಕೇಂದ್ರದ ಪಶು ಆಸ್ಪತ್ರೆಗಳಲ್ಲೇ ವೈದ್ಯರಿಲ್ಲದೆ, ಬಾಗಿಲು ಮುಚ್ಚಿವೆ. ಕೋಡಿಹಳ್ಳಿ ಹೋಬಳಿ ಕೇಂದ್ರ, ಮರಳವಾಡಿ, ಉಯ್ಯಂಬಳ್ಳಿ ಹೋಬಳಿಯ ಕೇಂದ್ರ, ಕೋಡಿಹಳ್ಳಿ ಹೋಬಳಿಯ ಹೊಸದುರ್ಗ, ಹೇರಿದ್ಯಾಪನಹಳ್ಳಿ, ಹುಣಸನಹಳ್ಳಿ, ಉಯ್ಯಂಬಳ್ಳಿ ಹೋಬಳಿಯ ಹೆಗ್ಗನೂರು, ಬಿಜ್ಜಳ್ಳಿ, ಸಾತನೂರುಹೋಬಳಿಯ ಕಬ್ಟಾಳು, ಕಂಚನಹಳ್ಳಿ, ಕಚುವನಹಳ್ಳಿ, ಹಾರೋಹಳ್ಳಿ ಹೋಬಳಿಯ ಕೊಟ್ಟಗಾಳು ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಬಾಗಿಲು ಮುಚ್ಚಿವೆ. ಇನ್ನು ಕೆಳಹಂತದ ಡಿ ಗ್ರೂಪ್‌ ನೌಕರರು ಇದ್ದರೂ, ಪ್ರಯೋಜನವಿಲ್ಲದಂತಾಗಿದೆ. ಸಿಬ್ಬಂದಿಗಳು ಆಸ್ಪತ್ರೆ ಬಾಗಿಲನ್ನು ತೆರೆಯದೆ ಕಾಲ ದೂಡುತ್ತಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಸೌಲಭ್ಯಕ್ಕಾಗಿ ರೈತರು ಪರದಾಟ: ವೈದ್ಯರ ಕೊರತೆಯಿಂದ ಆಸ್ಪತ್ರೆ ಮುಚ್ಚಿರುವುದರಿಂದ ಪಶು ಸಂಗೋಪನಾ ಇಲಾಖೆ ಸೌಲಭ್ಯದಿಂದ ರೈತರು ವಂಚಿತರಾಗುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯಲ್ಲಿ ಹಾಲಿನ ಇಳುವರಿ ಹೆಚ್ಚಳಕ್ಕೆ ಉತ್ತಮ ಆಹಾರ ಉತ್ಪಾದನೆಯ ಬಿತ್ತನೆ ಬೀಜ, ಜೋಳ, ರಾಸುಗಳನ್ನು ಕಾಡುತ್ತಿರುವ ಗಂಟು ರೋಗಕ್ಕೆ ಲಸಿಕೆ ಚಿಕಿತ್ಸೆ ಸೌಲಭ್ಯಕ್ಕೂ ರೈತರು ಪರದಾಡುತ್ತಿದ್ದಾರೆ. ಇತ್ತೀಚಿಗೆ ರಾಸುಗಳನ್ನು ಕಾಡುತ್ತಿರುವ ಗಂಟು ರೋಗ ನಿವಾರಣೆಗೆಸರ್ಕಾರ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಆದರೆ,ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಗಂಟುರೋಗ ಲಸಿಕಾ ಅಭಿಯಾನಕ್ಕೂ ತೋಡಕಾಗಿದೆ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ.

Advertisement

ಇರುವ ವೈದ್ಯರಿಗೂ ಒತ್ತಡ ಹೆಚ್ಚಳ: ತಾಲೂಕಿನ 37 ಪಶು ಆಸ್ಪತ್ರೆಗಳಲ್ಲಿ ಪೈಕಿ ಇರುವ 15 ವೈದ್ಯರಲ್ಲಿ ಕೆಲವು ವೈದ್ಯರನ್ನು ವೈದ್ಯರು ಇಲ್ಲದ ಆಸ್ಪತ್ರೆಗಳಿಗೆ ಪ್ರಭಾರ ವೈದ್ಯರಾಗಿ ನೇಮಕ ಮಾಡಿರುವುದು, ಇರುವವೈದ್ಯರಿಗೂ ಒತ್ತಡ ಹೆಚ್ಚಾಗಿದೆ. ಬಿಡುವಿಲ್ಲದೆ ಒತ್ತಡದಲ್ಲಿರುವ ಪಶು ವೈದ್ಯರಿಗೆ ಮತ್ತೋಂದು ಆಸ್ಪತ್ರೆ ಜವಾಬ್ದಾರಿ ನೀಡಿ ವೈದ್ಯರು ಮತ್ತಷ್ಟು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯವಿದೆ. ಅಲ್ಲದೆ, ಗ್ರಾಪಂನಿಂದ ಆಯೋಜಿಸುವ ಗ್ರಾಮ ಸಭೆಗಳಲ್ಲಿ ವೈದ್ಯರು ಭಾಗವಹಿಸಿ, ಇಲಾಖೆ ಸೌಲಭ್ಯದ ಬಗ್ಗೆ ತಿಳಿಸಿಕೊಡುವುದು ತಲೆನೋವಾಗಿ ಪರಿಣಮಿಸಿದೆ.

ಸಂತಾನೋತ್ಪತ್ತಿಗೂ ತೊಂದರೆ: ವೈದ್ಯರಿಲ್ಲದ ಗ್ರಾಮಗಳಲ್ಲಿ ರಾಸುಗಳ ಸಂತಾನೋತ್ಪತ್ತಿಗೂ ಹಿನ್ನಡೆಯಾಗುತ್ತಿದೆ. ಕಾಲಕಾಲಕ್ಕೆ ರಾಸುಗಳಿಗೆ ಕೃತಕ ಗರ್ಭಧಾರಣೆ ಚಿಕಿತ್ಸೆಗೆ ವೈದ್ಯರು ಬೇಕು. ಆದರೆ, ವೈದ್ಯರಿಲ್ಲದಿರುವುದು ರೈತರಲ್ಲಿ ಹೈನುಗಾರಿಕೆ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳುವ ಸರ್ಕಾರ ಮಾತ್ರ, ಸ್ವಾವಲಂಬನೆಸಾಧಿಸಿರುವ ರೈತರ ಸಮಸ್ಯೆಗೆ ಸ್ಪಂದಿಸದಿರುವುದುರೈತರಲ್ಲಿ ಅಸಮಾಧಾನ ತಂದಿದೆ. ಸರ್ಕಾರ ಇತ್ತ ಗಮನಹರಿಸಿ, ಪಶು ಆಸ್ಪತ್ರೆಯಲ್ಲಿ ಖಾಲಿ ಹು¨ªೆಗಳನ್ನುಭರ್ತಿ ಮಾಡಿ, ರೈತರ ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಸರಿ ಚಿಕಿತ್ಸೆ ಸಿಗದೆ ಸಾಕು ಪ್ರಾಣಿಗಳ ಸಾವು :

ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿ ಚಿಕಿತ್ಸೆ ಸಿಗದೆ, ಸಾಕು ಪ್ರಾಣಿಗಳು ಸಾವನ್ನಪ್ಪಿದರೆ, ರಾಸುಗಳ ವಿಮಾ ಪರಿಹಾರ ಪಡೆಯುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಉಯ್ಯಂಬಳ್ಳಿ ಮತ್ತು ಕೋಡಿಹಳ್ಳಿ ಹೋಬಳಿಯ ಸುತ್ತಮುತ್ತಲೂ ಪಶು ವೈದ್ಯರ ಕೊರತೆ ಹೆಚ್ಚಾಗಿದೆ. ಈ ಭಾಗದ ಕೆಲವು ಗ್ರಾಮಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ರಾಸುಗಳಿಗೆ ಸಮಯಕ್ಕೆ ಸರಿ ಚಿಕಿತ್ಸೆಸಿಗದೆ, ಸಾವನ್ನಪ್ಪಿರುವ ಉದಾಹರಣೆಗಳಿವೆ. ಮೃತಪಡುವ ರಾಸುಗಳ ವಿಮಾ ಪರಿಹಾರ ಪಡೆಯಲು ವೈದ್ಯರು ಇಲ್ಲದಿರುವುದು ರೈತರಿಗೆ ತೊಡಕಾಗಿ ಪರಿಣಮಿಸಿದೆ. ರಾಸುಗಳು, ಕುರಿ, ಮೇಕೆಯಂತಹ ಸಾಕು ಪ್ರಾಣಿಗಳು ಆಕಸ್ಮಿಕವಾಗಿ ಮೃತಪಟ್ಟರೆ, ವಿಮಾ ಸೌಲಭ್ಯ, ಸರ್ಕಾರದಿಂದ ಪರಿಹಾರ ಸಿಗಲಿದೆ.

ಆದರೆ, ಯಾವುದೇ ಸಾಕುಪ್ರಾಣಿಗಳು ಮೃತಪಟ್ಟಾಗ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ನೀಡುವ ವರದಿ ಆಧಾರ ಮೇಲೆ ಪರಿಹಾರ ಬಿಡುಗಡೆಯಾಗಬೇಕು. ಆದರೆ, ವೈದ್ಯರ ಕೊರತೆಯಿಂದ ಅನಾರೋಗ್ಯ ಮತ್ತು ವಿಷ ಜಂತುಗಳ ಕಡಿತಕ್ಕೆ ಬಲಿಯಾಗುವ ರಾಸು, ಕುರಿ, ಮೇಕೆಗಳು ಸಾವನ್ನಪ್ಪಿದಾಗ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರಿಲ್ಲದೆ, ಅನೇಕ ರೈತರು ಪರಿಹಾರ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಮೃತ ಪ್ರಾಣಿಗಳನ್ನು ತಾಲೂಕು ಕೇಂದ್ರದ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯ ರೈತರಿಗಿದೆ.

ಕನಕಪುರ ತಾಲೂಕಿನಲ್ಲಿ ಪಶು ವೈದ್ಯರ ಕೊರತೆಯಿದೆ. ಸಭೆ,ಸಮಾರಂಭಗಳಲ್ಲೂ ಖಾಲಿ ಹುದ್ದೆ ಭರ್ತಿಮಾಡುವಂತೆ ರೈತರಿಂದಲೂಒತ್ತಾಯವಿದೆ. ಸರ್ಕಾರದ ಗಮನಕ್ಕೆ ತಂದಿದ್ದೇವೆ. – ಕುಮಾರ್‌, ಸಹಾಯಕ ನಿರ್ದೇಶಕ, ಪಶು ಇಲಾಖೆ

ಹೈನೋದ್ಯಮ ಉತ್ತೇಜನಕ್ಕೆ ಪ್ರೋತ್ಸಹ ಧನ ಕೊಡುತ್ತಿದ್ದೇವೆ ಎಂದು ಸರ್ಕಾರಹೇಳುತ್ತಿದೆ. ಆದರೆ, ಅನಾರೋಗ್ಯಕ್ಕೆ ತುತ್ತಾದರಾಸುಗಳಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲು ವೈದ್ಯರಿಲ್ಲ. ಇನ್ನು ಹೈನೋದ್ಯಮಉತ್ತೇಜನ ಹೇಗೆ ಸಾಧ್ಯ. ಪಶು ಆಸ್ಪತ್ರೆಗಳನ್ನುನಿರ್ಮಾಣ ಮಾಡಿದರೆ ಸಾಲದು, ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು. – ಚೀಲೂರು ಮುನಿರಾಜು ಜಿಲ್ಲಾಧ್ಯಕ್ಷ, ರೈತ ಸಂಘ

 

– ಬಿ.ಟಿ.ಉಮೇಶ್‌ ಬಾಣಗಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next