ಕೊಪ್ಪಳ: ಜಿಲ್ಲೆಯಲ್ಲಿ ನಿತ್ಯವೂ ನಾಲ್ಕೈದು ಜನ ಕೋವಿಡ್ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆದರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 33 ವೆಂಟಿಲೇಟರ್‌ಗಳು ಕಾರ್ಯ ನಿರ್ವಹಿಸುತ್ತಿರುವುದು ಸೋಜಿಗ ತಂದಿದೆ.
ಜಿಲ್ಲೆಯಲ್ಲಿ ನಿತ್ಯವೂ ನೂರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತಿದ್ದು, ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆಯೇದೊರೆಯುತ್ತಿಲ್ಲ ಎನ್ನುವುದು ಸೋಂಕಿತ ಕುಟುಂಬದವರ ಆರೋಪ. ಸಕ್ಕರೆ ಕಾಯಿಲೆ, ಕ್ಯಾನ್ಸರ್, ಬಿಪಿ ಸೇರಿದಂತೆ ಹಲವು ಕಾಯಿಲೆ ಇರುವಸೋಂಕಿತರು ನರಳುತ್ತಿದ್ದಾರೆ. ಹಿರಿಯ ಜೀವಿಗಳಿಗೆ ಸೋಂಕು ಹೆಚ್ಚು ಕಾಡುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೇಕು.ಆದರೆ ಜಿಲ್ಲಾದ್ಯಂತ ಇರುವ ಸರ್ಕಾರಿ ಕೋವಿಡ್ ಸಂಬಂಧಿತ ಆಸ್ಪತ್ರೆಗಳಲ್ಲಿ 67 ವೆಂಟಿಲೇಟರ್ ಇದ್ದರೂ 33 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ನಿತ್ಯ ನೂರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದರೂ ವೆಂಟಿಲೇಟರ್ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಅದಕ್ಕೆ ತಕ್ಕಂತೆ ತಜ್ಞರ ತಂಡವನ್ನು ನಿಯೋಜಿಸಿ ಸಾವಿನ ಸಂಖ್ಯೆ ಕಡಿಮೆ ಮಾಡದಿರುವುದೇ ಜನರ ಆಕ್ರೊಶಕ್ಕೆ ಕಾರಣವಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು?: ನಿಜಕ್ಕೂ ಜಿಲ್ಲೆಯಲ್ಲಿನ ವೆಂಟಿಲೇಟರ್ ಲೆಕ್ಕಾಚಾರ ಗಮನಿಸಿದರೆ, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ 43 ವೆಂಟಿಲೇಟರ್ ಇದ್ದರೆ, 16 ಇನ್ನೂಅಳವಡಿಸಿಲ್ಲ. 4 ರಿಪೇರಿಯಾಗಿವೆ. ಗಂಗಾವತಿ ತಾಲೂಕಿನಲ್ಲಿ 16 ವೆಂಟಿಲೇಟರ್‌ಗಳಿದ್ದು 6 ಅಳವಡಿಕೆ ಮಾಡಿಲ್ಲ. 2 ರಿಪೇರಿಯಾಗಿವೆ. ಯಲಬುರ್ಗಾ ತಾಲೂಕಿನಲ್ಲಿ 4 ವೆಂಟಿಲೇಟರ್ ಇದ್ದು, ಯಾವುದನ್ನೂ ಅಳವಡಿಸಿಲ್ಲ. ಕುಷ್ಟಗಿ ತಾಲೂಕಿನಲ್ಲಿ 4 ವೆಂಟಿಲೇರ್ ಇದ್ದು, 2ನ್ನು ಅಳವಡಿಕೆ ಮಾಡಿಲ್ಲ. ಒಟ್ಟಾರೆ 67 ವೆಂಟಿಲೇಟರ್ ಪೈಕಿ 28 ವೆಂಟಿಲೇಟರ್ ಅಳವಡಿಸಿಲ್ಲ. 6 ದುರಸ್ತಿಯಲ್ಲಿವೆ.
ಜಿಲ್ಲಾಡಳಿತ ಮಾತ್ರ ವೆಂಟಿಲೇಟರ್ ಇದ್ದರೂ ಸಹಿತ ನಮ್ಮಲ್ಲಿ ಅನಸ್ತೇಶಿಯಾ ವೈದ್ಯರ ಸಂಖ್ಯೆ ಕಡಿಮೆಯಿದೆ. ಐದು ರೋಗಿಗಳಿಗೆ ಒಬ್ಬ ವೈದ್ಯರನ್ನು, 10 ರೊಗಿಗಳಿಗೆ ಒಬ್ಬ ನರ್ಸ್ ನೇಮಿಸಿದ್ದು ಐಸಿಯು ವಾರ್ಡಿನಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ 6 ಗಂಟೆಗೊಮ್ಮೆ ಕಾರ್ಯ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಿದೆ. ಒಬ್ಬ ರೋಗಿಗೆ ವೆಂಟಿಲೇಟರ್ ಅಳವಡಿಕೆ ಮಾಡಿದರೆ ನಿರಂತರ ಅವರ ಮೇಲೆ ನಿಗಾ ಇಡಬೇಕಾಗುತ್ತದೆ. ಅದಲ್ಲದೇ ಜಿಲ್ಲೆಯಲ್ಲಿನ ಜನರು ಸೋಂಕಿನ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಲ್ಲ. ಅವರ ಆರೋಗ್ಯದಲ್ಲಿ ಶೇ. 60-70ರಷ್ಟು ಏರುಪೇರಾದಾಗ ಆಸ್ಪತ್ರೆಗೆ ಬಂದು ದಾಖಲಾಗಿ ಪರೀಕ್ಷೆಗೆ ಒಳಗಾಗುತ್ತಾರೆ ಎನ್ನುತ್ತಿದೆ ಜಿಲ್ಲಾಡಳಿತ.ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದ್ದರೂ ಸಹಿತ ದುಪ್ಪಟ್ಟು ಶುಲ್ಕ ಇರುವುದರಿಂದ ಬಡ, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಜಿಲ್ಲೆಯ ಶಾಸಕ, ಸಂಸದರು ಇದನ್ನೊಮ್ಮೆ ಗಮನಿಸಬೇಕಿದೆ. ಅನಸ್ತೇಶಿಯಾ ವೈದ್ಯರನ್ನು ನಿಯೋಜಿಸಬೇಕಿದೆ.
ಜಿಲ್ಲೆಯಲ್ಲಿ ಅನಸ್ತೇಸಿಯಾ ವೈದ್ಯರ ಕೊರತೆಯಿದೆ. ಐದು ರೋಗಿಗಳಿಗೆ ಒಬ್ಬ ವೈದ್ಯ, 10 ರೋಗಿಗಳಿಗೆ ಒಬ್ಬ ನರ್ಸ್ ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದೇವೆ. ಅಲ್ಲದೇ, ಜನರು ಸೋಂಕಿನ ಲಕ್ಷಣ ಬಂದ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ಕೊನೆಯ ಹಂತಕ್ಕೆ ಬರುತ್ತಿದ್ದಾರೆ. ಇದರಿಂದ ಸಾವು ಹೆಚ್ಚಾಗುತ್ತಿವೆ. ಇನ್ನಾದರು ಜನರು ಬೇಗನೆ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದರೆ ಅಗತ್ಯ ಸಂದರ್ಭದಲ್ಲಿ ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಲು ಸೂಚನೆ ನೀಡಲಿದ್ದೇವೆ.
– ವಿಕಾಸ್ ಕಿಶೋರ್, ಕೊಪ್ಪಳ ಡಿಸಿ
– ದತ್ತು ಕಮ್ಮಾರ