Advertisement

ಬೀಗಮುದ್ರೆ ಕಂಡ ಉಡುಪಿಯ ಮೊದಲ ಶಾಲೆ

06:00 AM Jun 03, 2018 | Team Udayavani |

ಕುಂದಾಪುರ: ಸಕಲ ಸೌಲಭ್ಯಗಳಿದ್ದರೂ ಮಕ್ಕಳ ಸಂಖ್ಯೆಯ ಕೊರತೆಯಿಂದಾಗಿ ಈ ವರ್ಷ ಕುಂದಾಪುರ ವಲಯದ ಸಿದ್ದಾಪುರ ಬಳಿಯ ಹರ್ಕೆಬಾಳು ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದ್ದು, ಇಲ್ಲಿರುವ ವಿದ್ಯಾರ್ಥಿಗಳನ್ನು ಸಮೀಪದ ಸಿದ್ದಾಪುರ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ಅರ್ಧ ಶತಮಾನ ಇತಿಹಾಸವಿರುವ ಈ ಶಾಲೆ ಈಗ ಉಡುಪಿ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಬೀಗಮುದ್ರೆ ಕಂಡ ಮೊದಲ ಶಾಲೆ ಎಂಬ ಅಪವಾದಕ್ಕೆ ಗುರಿಯಾಗಿದೆ.

Advertisement

ತರಗತಿಗೊಬ್ಬ ವಿದ್ಯಾರ್ಥಿ
ಒಂದರಿಂದ 5ನೇ ತರಗತಿವರೆಗೆ ಇದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ತರಗತಿಗೊಬ್ಬರಂತೆ ಐವರು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆದರೆ 2018-19ನೇ ಸಾಲಿಗೆ ಇಬ್ಬರು ವಿದ್ಯಾರ್ಥಿಗಳು ಸಿದ್ದಾಪುರದ ಶಾಲೆಗೆ ದಾಖಲಾಗಿದ್ದು, ಕೊನೆಗೆ ಉಳಿದವರು ಕೇವಲ ಮೂವರು. ಹೀಗಾಗಿ ಒಬ್ಬನಿಗಾಗಿ ಶಾಲೆಯನ್ನು  ಮುಚ್ಚಲಾಗಿದೆ. ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ 50ರಿಂದ 60 ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆದರೆ 2000-01ರ ಬಳಿಕ ಸಿದ್ದಾಪುರದಲ್ಲಿ ಆಂಗ್ಲ ಮಾಧ್ಯಮ ಮತ್ತು ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾದದ್ದು ಇಲ್ಲಿನ ದಾಖಲಾತಿ ಮೇಲೆ ಪರಿಣಾಮ ಬೀರಿತು.

ಇಂಗ್ಲಿಷ್‌ ವ್ಯಾಮೋಹ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರ ಈಗ ಎಲ್ಲ ವ್ಯವಸ್ಥೆ ಕಲ್ಪಿಸುತ್ತಿದೆ. ಆದರೆ ಈ ಶಾಲೆಯಲ್ಲಿ 3 ವರ್ಷಗಳಿಂದ ಮಕ್ಕಳ ಸಂಖ್ಯೆ 5ಕ್ಕಿಂತ ಹೆಚ್ಚಾಗಿಲ್ಲ. ನಾನು ಬಂದ ಮೊದಲ ವರ್ಷ 18 ಮಂದಿ ಇದ್ದರು. ಕ್ರಮೇಣ ಕಡಿಮೆಯಾಗುತ್ತಿದೆ. ಇಲ್ಲಿ ಮನೆಗಳು ಕಡಿಮೆ ಇದ್ದು, ಇರುವ ಕೆಲವೇ ಮಕ್ಕಳನ್ನೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲಾಗುತ್ತಿದೆ ಎಂದು ಶಾಲೆಯ ಏಕೈಕ ಶಿಕ್ಷಕ ಪ್ರದೀಪ್‌ ಕುಮಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

50 ವರ್ಷಗಳ ಇತಿಹಾಸವಿರುವ ಈ ಶಾಲೆಯನ್ನು  ಉಳಿಸಿಕೊಳ್ಳಲು ಇಲಾಖೆಯ ಕಡೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿತ್ತು. ಪ್ರಸಕ್ತ ವರ್ಷ ಯಾವುದೇ ವಿದ್ಯಾರ್ಥಿಗಳು ದಾಖಲಾಗಿಲ್ಲ. ಇರುವ  ಮೂವರು ವಿದ್ಯಾರ್ಥಿಗಳಿಗಾಗಿ ಶಾಲೆ ನಡೆಸುವುದು ಕಷ್ಟಕರವಾದ್ದರಿಂದ ತಾತ್ಕಾಲಿಕ ವಾಗಿ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ. ಇರುವ ಮೂವರನ್ನು ಸಿದ್ದಾಪುರ ಶಾಲೆಗೆ ಸ್ಥಳಾಂತರಿಸಲಾಗಿದೆ. 
ಅಶೋಕ ಕಾಮತ್‌ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next