Advertisement

ಕೊಟ್ಟಾರ ಚೌಕಿಯಲ್ಲಿ ಕಾಲುವೆ ಸಮಸ್ಯೆ ಇನ್ನೂ ಜೀವಂತ!

12:09 AM Jun 02, 2020 | Sriram |

ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್-19 ಲಾಕ್‌ಡೌನ್‌ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯದ್ದು.

Advertisement

ಮಂಗಳೂರು: ಮಂಗಳೂರಿನಲ್ಲಿ ಮಳೆಯ ಆರ್ಭಟ ಜೋರಾದರೆ ಮೊದಲಿಗೆ ಸಮಸ್ಯೆ ಎದುರಾಗುವುದು ಕೊಟ್ಟಾರ ಚೌಕಿ. ಇಲ್ಲಿನ ಫ್ಲೈಓವರ್‌ ಕೆಳಗಿನ ಇಕ್ಕೆಲಗಳ ರಾಜಕಾಲುವೆಯ ಅಸಮರ್ಪಕ ವ್ಯವಸ್ಥೆಯಿಂದಾಗಿ ಮಳೆ ನೀರು ಇಲ್ಲಿ ನೆರೆಯ ರೂಪ ಪಡೆದು ಅವಾಂತರ ಸೃಷ್ಟಿಸುವುದು ಸಾಮಾನ್ಯ ಸಂಗತಿ. ಈ ವರ್ಷವಾದರೂ ಇಂತಹ ಸಮಸ್ಯೆಗೆ ಮುಕ್ತಿ ಸಿಗಲಿ ಎಂಬುದೇ ಸ್ಥಳೀಯರ ಒತ್ತಾಸೆ.

ಮಹಾನಗರ ಪಾಲಿಕೆಯ 15ನೇ ವಾರ್ಡ್‌ನಿಂದ ಆರಂಭವಾಗಿ 30ನೇ ವಾರ್ಡ್‌ಗಳವರೆಗೆ ಕಣ್ಣಾಡಿಸಿದರೆ ಬಹುದೊಡ್ಡದಾಗಿ ಮಳೆಗಾಲದ ಸಮಸ್ಯೆ ಸೃಷ್ಟಿಸುವ ಸ್ಥಳವೇ ಕೊಟ್ಟಾರ ಚೌಕಿ.

ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿನ ರಾಜಕಾಲುವೆಯ ಹೂಳು ತೆಗೆಯಲಾಗಿದೆ ಎಂದು ಪಾಲಿಕೆ ತಿಳಿಸಿದರೆ, ಬಹುತೇಕ ಭಾಗದಲ್ಲಿ ಹೂಳು ಹಾಗೆಯೇ ಇದೆ ಎಂದು ಸ್ಥಳೀಯರು ಬೊಟ್ಟು ಮಾಡುತ್ತಿದ್ದಾರೆ. ಸ್ಥಳೀಯರ ಮಾತಿಗೆ ಪೂರಕವೋ ಎಂಬಂತೆ ಇತ್ತೀಚೆಗೆ ಸುರಿದ ಒಂದು ತಾಸಿನ ಮಳೆಯಿಂದಾಗಿ ಕೊಟ್ಟಾರದ ರಸ್ತೆಯಲ್ಲೇ ನೀರು ನಿಂತಿತ್ತು!

ಕೊಟ್ಟಾರಚೌಕಿ ವ್ಯಾಪ್ತಿಯಲ್ಲಿ ಎರಡು ರಾಜಕಾಲುವೆಗಳಿವೆ. ಅದರಲ್ಲಿ ಒಂದು ಕೊಂಚಾಡಿ, ಉರ್ವಸ್ಟೋರ್‌ನಿಂದ ಬರುವ ಮಳೆ ನೀರು ಕೊಟ್ಟಾರ ಚೌಕಿಯ ಬಲಭಾಗದ ರಾಜಕಾಲುವೆಯ ಮೂಲಕ 4ನೇ ಮೈಲ್‌ನಲ್ಲಿ ಮಂಗಳೂರು-ಉಡುಪಿ ರಾ.ಹೆ.ಯ ಕೆಳಗಡೆಯಿಂದ ಫಲ್ಗುಣಿ ನದಿ ಸೇರುತ್ತದೆ. ಇದಕ್ಕೆ ನಾಲ್ಕನೇ ಮೈಲಿನಲ್ಲಿ ಕಾವೂರು, ಆಕಾಶಭವನ, ಮಾಲಾಡಿ ವ್ಯಾಪ್ತಿಯ ಮಳೆ ನೀರು ಇದೇ ರಾಜಕಾಲುವೆ ಮೂಲಕ ಫಲ್ಗುಣಿ ಸೇರುತ್ತದೆ. ಈ ಮಧ್ಯೆ, ಕೋಡಿಕಲ್‌, ಕೊಟ್ಟಾರದಿಂದ ಬರುವ ಮಳೆ ನೀರು ಕೊಟ್ಟಾರಚೌಕಿಯ ಎಡಭಾಗದಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಹರಿದು ಫಲ್ಗುಣಿ ನದಿಯನ್ನು ಸೇರುತ್ತದೆ. ಇವೆರಡೂ ರಾಜಕಾಲುವೆಗಳು ಸುಮಾರು ಮೂರು ಕಿ.ಮೀ. ನಷ್ಟು ಉದ್ದವಿದೆ. ರಾಜಕಾಲುವೆಗಳ ಅಸಮರ್ಪಕ ವ್ಯವಸ್ಥೆ ಗಳಿಂದಾಗಿ ಇಲ್ಲಿ ಮಳೆನೀರು ನೆರೆಯಾಗಿ ಬದಲಾಗುತ್ತದೆ.

Advertisement

ಕೃತಕ ನೆರೆ ಅಪಾಯ
ಕೊಡಿಯಾಲ್‌ಬೈಲ್‌ ವಾರ್ಡ್‌ನಲ್ಲಿ ಸಮಸ್ಯೆಯಿದೆ. ಕೆಎಸ್‌ಆರ್‌ಟಿಸಿ ಪಕ್ಕದ ಭಾರತೀನಗರ ಎಂಬ ತಗ್ಗುಪ್ರದೇಶದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿ ಸಮಸ್ಯೆ ಆಗಿದ್ದಿದೆ. ಈ ವ್ಯಾಪ್ತಿಯಲ್ಲಿ ರಾಜಕಾಲುವೆಯ ಹೂಳು ಸಮರ್ಪಕ ವಾಗಿ ತೆಗೆಯದ ಕಾರಣಕ್ಕಾಗಿ ಸಮಸ್ಯೆ ಆಗಿತ್ತು. ಇನ್ನು ಕೊಡಿಯಾಲ್‌ಬೈಲು ಕಂಬ್ಳ, ಮಾಲೆಮಾರ್‌, ಕೊಂಚಾಡಿ ಪ್ರದೇಶದಲ್ಲಿಯೂ ನೆರೆ ನೀರು ಸಮಸ್ಯೆ ಸೃಷ್ಟಿಸಿದ ಹಳೆಯ ನೆನಪುಗಳಿವೆ. ಈ ಬಾರಿಯೂ ಈ ಅಪಾಯವನ್ನು ಅಲ್ಲ ಗಳೆಯುವಂತಿಲ್ಲ. ಕೋಡಿಕಲ್‌ ಕ್ರಾಸ್‌, ಜೆ.ಬಿ. ಲೋಬೋ ರಸ್ತೆ, ಸುಲ್ತಾನ್‌ಬತ್ತೇರಿ, ಮಣ್ಣಗುಡ್ಡ ವ್ಯಾಪ್ತಿ ಯಲ್ಲಿಯೂ ಮಳೆನೀರು ರಸ್ತೆಯಲ್ಲಿಯೇ ನಿಂತಿತ್ತು. ಜನತಾ ಡಿಲಕ್ಸ್‌ ಎದುರು, ಟಿಎಂಎ ಪೈ ಹಿಂಭಾಗದಲ್ಲಿಯೂ ಮಳೆನೀರು ಸಾಕಷ್ಟು ಬಾರಿ ಆತಂಕ ತರಿಸಿತ್ತು.

ರಾಜಕಾಲುವೆ ಹೂಳು: ಗೋಲ್‌ಮಾಲ್‌!
ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್‌ ಅವರು ಸುದಿನ ಜತೆಗೆ ಮಾತನಾಡಿ, “ಮಳೆಗಾಲದಲ್ಲಿ ರಾಜಕಾಲುವೆಯ ಹೂಳು ತೆಗೆಯುವುದು ಅಂದರೆ ಅದೊಂದು ದೊಡ್ಡ ಗೋಲ್‌ಮಾಲ್‌. ಇಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಜತೆಯಾಗಿ ಹೂಳು ತೆಗೆಯುವ ನೆಪದಲ್ಲಿ ಹಣ ಮಾಡುವವರೇ ಅಧಿಕವಿದ್ದಾರೆ. ತುಂಬ ಆಳದ ತನಕ ಹೂಳು ತೆಗೆಯಬೇಕು ಎಂಬ ನಿಯಮವಿದೆ. ಆದರೆ, ಬಹುತೇಕ ಕಡೆಯಲ್ಲಿ ಇದು ಪಾಲನೆಯಾಗುತ್ತಲೇ ಇಲ್ಲ. ಯಾಕೆಂದರೆ ಬರುವ ವರ್ಷಕ್ಕೆ ಕೊಂಚ ಬೇಕು ಎಂದು ಮೇಲಿಂದ ಮೇಲೆ ತ್ಯಾಜ್ಯ ತೆಗೆದು ದಡದ ಮೇಲೆ ಹಾಕುವವರೇ ಅಧಿಕ. ಹೂಳು ತೆಗೆದ ಫೋಟೋವನ್ನೇ ತೋರಿಸಿ ಪಾಲಿಕೆಯಿಂದ ಹಣ ಪಡೆದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.

ಕೆಲಸ ಆಗಿದೆ ಎನ್ನುತ್ತಾರೆ ಸದಸ್ಯರು
16ನೇ ವಾರ್ಡ್‌ನಿಂದ 30ನೇ ವಾರ್ಡ್‌ವರೆಗಿನ ಬಹುತೇಕ ಕಾರ್ಪೊರೇಟರ್‌ಗಳು ಹೊಸಬರು. ಜನಪ್ರತಿನಿಧಿ ಆದ ಬಳಿಕ ಅವರಿಗೆ ಈ ಮಳೆಗಾಲ ಅವರಿಗೆ ಮೊದಲ ಅನುಭವ. ಸದ್ಯ ಈ ಎಲ್ಲ ಕಾರ್ಪೊರೇಟರ್‌ಗಳಲ್ಲಿ ತಮ್ಮ ವಾರ್ಡ್‌ಗಳ ಬಗ್ಗೆ ವಿಚಾರಿಸಿದಾಗ ಈ ಬಾರಿ ಸಮಸ್ಯೆ ಇಲ್ಲ; ರಾಜಕಾಲುವೆ ಸ್ವಚ್ಛ ಮಾಡಲಾಗಿದೆ. ಯಾವುದೇ ಸಮಸ್ಯೆ ಇರಲಾರದು’ ಎನ್ನುತ್ತಾರೆ. ಆದರೆ, ಸ್ಥಳೀಯರು ಮಾತ್ರ ಅಲ್ಲಿ ಹೂಳು ತೆಗೆದಿಲ್ಲ; ಸಣ್ಣ ಚರಂಡಿಯನ್ನು ಹಾಗೆಯೇ ಬಿಡಲಾಗಿದೆ ಎನ್ನುತ್ತಿದ್ದಾರೆ. ಜತೆಗೆ ಸುದಿನ ತಂಡಕ್ಕೂ ಕೆಲವೆಡೆ ಕಾಮಗಾರಿ ನಡೆದಿದ್ದು ಕಂಡರೂ, ಬಹುತೇಕ ಭಾಗದಲ್ಲಿ ಆಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಕೋವಿಡ್-19 ಕಾರ್ಯದ ಒತ್ತಡದಲ್ಲಿದ್ದ ಜನಪ್ರತಿನಿಧಿಗಳು-ಅಧಿಕಾರಿಗಳಿಗೆ ಈ ಮಳೆಗಾಲಕ್ಕೆ ಸಿದ್ಧತೆ ಮಾಡಲು ಸೂಕ್ತ ಸಮಯ ಸಿಕ್ಕಿಲ್ಲ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

ಇದು 15 ವಾರ್ಡ್‌ಗಳ ಚಿತ್ರಣ
ಸುದಿನ ತಂಡವು 16. ಬಂಗ್ರಕೂಳೂರು, 17. ದೇರೆಬೈಲು (ಉತ್ತರ), 18. ಕಾವೂರು, 19.ಪಚ್ಚನಾಡಿ, 20. ತಿರುವೈಲು, 21. ಪದವು (ಪಶ್ಚಿಮ), 22. ಕದ್ರಿ ಪದವು, 23. ದೇರೆಬೈಲು (ಪೂರ್ವ), 24. ದೇರೆಬೈಲ್‌ ದಕ್ಷಿಣ, 25. ದೇರೆಬೈಲ್‌ (ಪಶ್ಚಿಮ), 26. ದೇರೆಬೈಲ್‌ (ನೈರುತ್ಯ), 27. ಬೋಳೂರು, 28. ಮಣ್ಣಗುಡ್ಡ, 29. ಕಂಬ್ಳ, 30. ಕೊಡಿಯಾಲ್‌ಬೈಲು ವಾರ್ಡ್‌ಗಳಿಗೆ ತೆರಳಿ ಪರಿಶೀಲಿಸಿದಾಗ ಈ ರೀತಿಯ ಸಮಸ್ಯೆಗಳ ಚಿತ್ರಣ ಲಭ್ಯವಾಗಿದೆ.

ರಾಜಕಾಲುವೆಗೆ ವಿಶೇಷ ಒತ್ತು
ಮಂಗಳೂರು ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಮಳೆಗಾಲದ ಎಚ್ಚರಿಕೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಪ್ರಕಾರ ಸಿದ್ಧತೆ ಮಾಡಲಾಗಿದೆ. ಕೋವಿಡ್-19 ಲಾಕ್‌ಡೌನ್‌ ಮಧ್ಯೆಯೂ ಕೆಲಸ ಕಾರ್ಯಗಳು ನಡೆದಿವೆ. ರಾಜಕಾಲುವೆಗಳನ್ನು ಸಮರ್ಪಕವಾಗಿಡುವ ನೆಲೆಯಲ್ಲಿ ವಿಶೇಷ ಒತ್ತು ನೀಡಲಾಗಿದೆ. ಚರಂಡಿ ಸ್ವಚ್ಛತೆಯೂ ನಡೆದಿದೆ. ಪ್ರತಿ ವಾರ್ಡ್‌ಗೆ ಮಳೆಗಾಲದ ಸಮಯದಲ್ಲಿ ನಿರ್ವಹಣೆಗೆ 5 ಜನರ ಸ್ಪೆಷಲ್‌ ಗ್ಯಾಂಗ್‌ ಅನ್ನು ನಿಯೋಜಿಸಲಾಗಿದೆ. ಈ ಬಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗಲಾರದು ಎಂಬ ನಂಬಿಕೆಯಿದೆ.
 - ದಿವಾಕರ ಪಾಂಡೇಶ್ವರ, ಮೇಯರ್‌ ಮಂಗಳೂರು ಪಾಲಿಕೆ

ಮಳೆಗಾಲ ಸಂದರ್ಭ ಸಹಾಯವಾಣಿ
ಮಂಗಳೂರು ಪಾಲಿಕೆ: 2220306
ಮೆಸ್ಕಾಂ 1912
ಅಗ್ನಿಶಾಮಕದಳ 101

Advertisement

Udayavani is now on Telegram. Click here to join our channel and stay updated with the latest news.

Next