Advertisement

ಕರಾವಳಿಯ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ

02:24 AM Sep 27, 2021 | Team Udayavani |

ಮಂಗಳೂರು: ಲಾಕ್‌ಡೌನ್‌ ಮುಗಿದ ಬಳಿಕ ಭೌತಿಕ ತರಗತಿಗಳು ಆರಂಭವಾಗಿವೆ. ಆದರೆ ಶಾಲಾ ಕಾಲೇಜುಗಳಲ್ಲಿ ಬಹುತೇಕ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕಾಗಿದೆ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಇರುವ ಶಿಕ್ಷಕರಿಗೆ ಹೊರೆ ಹೆಚ್ಚಿದೆ. ಭೌತಿಕ ತರಗತಿ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರು-ಉಪನ್ಯಾಸಕ ನೇಮಕದ ಸುಳಿವು ನೀಡಿದೆ. ಆದರೆ ಇನ್ನೂ ಕಾರ್ಯಗತವಾಗಿಲ್ಲ.
ಅನುದಾನಿತ ಶಾಲಾ ಕಾಲೇಜುಗಳಲ್ಲಿಯೂ ಇದೇ ಸ್ಥಿತಿ ಇದ್ದು, ಅವುಗಳ ಆಡಳಿತ ಮಂಡಳಿಗಳು ಹುದ್ದೆ ಭರ್ತಿಗೆ ಸರಕಾರದ ಅನುಮತಿಯ ನಿರೀಕ್ಷೆಯಲ್ಲಿವೆ. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಗಳೇ ಶಿಕ್ಷಕರನ್ನು ನೇಮಕ ಮಾಡುವ ಕಾರಣ ಅಲ್ಲಿ ಸಮಸ್ಯೆ ಅಷ್ಟಾಗಿ ಇಲ್ಲ.

“ಉಪನ್ಯಾಸಕರ ಹುದ್ದೆ ಭರ್ತಿಯ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ತತ್‌ಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಶೈಕ್ಷಣಿಕ ಚಟುವಟಿಕೆ ನಡೆಸಿಕೊಡಲು ಉಪನ್ಯಾಸಕರ ನಿಯೋಜನೆ ನಡೆಸಲಾಗುತ್ತಿದೆ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಪ.ಪೂ. ಶಿಕ್ಷಣ ಇಲಾಖೆಯ ಎರಡೂ ಜಿಲ್ಲೆಗಳ ಉಪನಿರ್ದೇಶಕರಾದ ಜಯಣ್ಣ ಮತ್ತು ಮಾರುತಿ ಅವರು”ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಚಿವರ ಆಗ್ರಹ

ಅಡಕತ್ತರಿಯಲ್ಲಿ
ಅತಿಥಿ ಉಪನ್ಯಾಸಕರು
ಮಂಗಳೂರು ವಿ.ವಿ. ವ್ಯಾಪ್ತಿಗೆ ಒಳಪಟ್ಟ ಸರಕಾರಿ ಕಾಲೇಜುಗಳಲ್ಲಿ ಶೇ. 60ಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನೇ ನಿಯೋಜಿಸುವ ಪರಿಪಾಠ ಇಲ್ಲಿ ಬೆಳೆದುಬಂದಿದೆ. ಆದರೆ 2021-22ರ ಶೈಕ್ಷಣಿಕ ಅವಧಿಗೆ ಹೊಸ ನೇಮಕವಾಗಿಲ್ಲ. ಈ ಮಧ್ಯೆ ಮಂಗಳೂರು ವಿ.ವಿ.ಯ 2020-21ರ ಶೈಕ್ಷಣಿಕ ಅವಧಿ ಸೆ. 25ಕ್ಕೆ ಕೊನೆಗೊಂಡ ಕಾರಣ ಇಲ್ಲಿಯ ವರೆಗೆ ಕಾರ್ಯನಿರ್ವಹಿಸಿದ್ದ 900ರಷ್ಟು ಅತಿಥಿ ಉಪನ್ಯಾಸಕರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಕಾಲೇಜುಗಳ 6ನೇ ಸೆಮಿಸ್ಟರ್‌ ಪರೀಕ್ಷೆ, ಮೌಲ್ಯಮಾಪನ ಇನ್ನಷ್ಟೇ ನಡೆಯಬೇಕಿದ್ದು, ಇದರಲ್ಲಿ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಬೇಕೇ ಎಂಬ ಪ್ರಶ್ನೆ ಎದುರಾಗಿದೆ.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿರುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಪರ್ಯಾಯವಾಗಿ ಅತಿಥಿ ಶಿಕ್ಷಕರ ನಿಯೋಜನೆಗೆ ಅವಕಾಶ ನೀಡುವಂತೆ ಕೋರಲಾಗಿದೆ. 1ರಿಂದ 5ನೇ ಭೌತಿಕ ತರಗತಿ ಆರಂಭವಾದ ಕೂಡಲೇ ಅತಿಥಿ ಶಿಕ್ಷಕರ ನಿಯೋಜನೆ ನಿರೀಕ್ಷೆಯಿದ್ದು, ಸದ್ಯ ಆಯಾಯ ಶಾಲೆಯ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರ ನಿಯೋಜನೆ ನಡೆಸಲಾಗಿದೆ.
-ಮಲ್ಲೇಸ್ವಾಮಿ, ಎನ್‌.ಎಚ್‌. ನಾಗೂರ
ದ.ಕ. ಮತ್ತು ಉಡುಪಿ ಡಿಡಿಪಿಐಗಳು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next