Advertisement

ಕೇಂದ್ರ ವಿವಿಗೆ ಅನುದಾನದ ಕೊರತೆ: ಕುಲಪತಿ

01:27 PM Oct 12, 2017 | Team Udayavani |

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ 873 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಈವರೆಗೂ ಯಾವುದೇ ರೀತಿಯ ಅನುದಾನ ಬಂದಿಲ್ಲ ಎಂದು ಕುಲಪತಿ ಪ್ರೊ.ಜಾಫೆಟ್‌ ಹೇಳಿದರು.

Advertisement

ಬುಧವಾರ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯವನ್ನು ಸ್ಥಳೀಯ ವಿಷಯಕ್ಕೆ ಆದ್ಯತೆ ನೀಡಿ, ವಿಶ್ವದರ್ಜೆಯ ವಿಶ್ವವಿದ್ಯಾಲಯವಾಗಿ ರೂಪಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿದ್ದೇವೆ. ಸೆಂಟ್ರಲ್‌ ಕಾಲೇಜು  ವರಣದ 65 ಎಕರೆ ಜಾಗದಲ್ಲಿ 43 ಎಕರೆ ಜಾಗ ವಿವಿಯ ಅಧೀನಕ್ಕೆ ಬರಲಿದ್ದು, ಸರ್ಕಾರದಿಂದ ಆದೇಶದ ನಂತರ ಬೆಂಗಳೂರು ವಿವಿಯಿಂದ ಜಮೀನು ವರ್ಗಾವಣೆಯಾಗಲಿದೆ ಎಂದರು. 

ಅನುದಾನ ಬಂದಿಲ್ಲ: ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ 873 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದಿಂದ ಈವರಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ಮೂರ್‍ನಾಲ್ಕು ವಿಧವಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ. 873 ಕೋಟಿ ನೀಡಲು ಸಾಧ್ಯ ವಾಗದೇ ಇದ್ದರೆ 500 ಕೋಟಿ ನೀಡಿ, ಅದೂ ಸಾಧ್ಯವಾಗದೇ ಇದ್ದರೆ 300 ಕೋಟಿ ರೂ. ಹಾಗೂ 300 ಮಂದಿ ಬೋಧಕ, ಬೋಧಕೇತರ ಸಿಬ್ಬಂದಿ ನೀಡಿದರೆ ಅತ್ಯುತ್ತಮವಾದ ವಿಶ್ವವಿದ್ಯಾಲಯ ರಚನೆ ಮಾಡಲಿದ್ದೇವೆ ಎಂದು ಪ್ರಸ್ತಾವನೆ ಸಲ್ಲಿಸಿರೋದಾಗಿ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆ ಸಂದರ್ಭದಲ್ಲಿ ಸೂಚಿಸಿರುವಂತೆ ಹೊಸದಾಗಿ ಆರಂಭಿಸುವ ಎರಡು ವಿಶ್ವವಿದ್ಯಾಲಯಕ್ಕೂ ಬೆಂವಿವಿಯಿಂದ ತಲಾ 15 ಕೋಟಿ ರೂ. ನೀಡಲಾಗುತ್ತದೆ. ಅದರಲ್ಲಿ 3 ಕೋಟಿ ಈಗಾಗಲೇ ನೀಡಿದ್ದಾರೆ. 2017-18ನೇ ಸಾಲಿನ ಮಾನ್ಯತೆ ನವೀಕರಣದ 3 ಕೋಟಿ ರೂ. ಬರಲಿದೆ. 

ಒಟ್ಟಾರೆಯಾಗಿ ಸುಮಾರು 18 ಕೋಟಿ ರೂ. ಸಿಗಲಿದೆ. ಈಗಾಗಲೇ ಬಂದಿರುವ 3 ಕೋಟಿಯಲ್ಲಿ ಸುಮಾರು ಒಂದೂವರೆ ಕೋಟಿ ರೂ.ಗಳನ್ನು ಸಿಬ್ಬಂದಿ ವೇತನಕ್ಕೆ ನೀಡಿದ್ದೇವೆ ಎಂದರು. ಹೊಸ ಕೋರ್ಸ್‌ಗಳು: ಬೆಂಗಳೂರು ನಗರದ ವಿಶ್ವವಿದ್ಯಾಲಯವಾಗಿ ರೂಪಿಸುವ ಉದ್ದೇಶದಿಂದ ಮುಂದಿನ ವರ್ಷ ನಗರಾಭಿವೃದ್ಧಿ ಯೋಜನೆಯ ಅಧ್ಯಯನದ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ. 

Advertisement

ಸಮಾಜ ವಿಜ್ಞಾನ ಶಾಲೆಯಲ್ಲಿ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿ ವಿಷಯಗಳ ಅಧ್ಯಯನ ಇರಲಿದೆ. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್‌, ವಿದೇಶಿ ಭಾಷೆಗಳ ಅಧ್ಯಯನ ಹಾಗೂ ಕಾನೂನು ಮತ್ತು ಸಾರ್ವಜನಿಕ ನೀತಿ ಶಾಲೆಯಲ್ಲಿ ಕಾನೂನು ಹಾಗೂ ಸಾರ್ವಜನಿಕ ಆಡಳಿತ ವಿಷಯದ ಅಧ್ಯಯನಕ್ಕೆ ಆದ್ಯತೆ ನೀಡಲಿದ್ದೇವೆ. ಇದಕ್ಕಾಗಿ ತಜ್ಞರ ಸಮಿತಿ ಗಳನ್ನು ರಚನೆ ಮಾಡಿದ್ದೇವೆ ಎಂದು ಹೇಳಿದರು. 

ಸಿಬ್ಬಂದಿ ಕೊರತೆ: ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ 8 ಸ್ನಾತಕೋತ್ತರ ಕೋರ್ಸ್‌ಗಳು ಬೆಂಗಳೂರು ಕೇಂದ್ರ ವಿವಿಯಲ್ಲಿ ನಡೆಯುತ್ತಿದೆ. ಸುಮಾರು 1500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಹಂಚಿಕೆ ಇನ್ನೂ ಪೂರ್ಣಗೊಂಡಿಲ್ಲ. ನಮಗೆ 37 ಬೋಧಕ ಹುದ್ದೆಯನ್ನು ಮಂಜೂರು ಮಾಡಿದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಅಗತ್ಯ ಇನ್ನೂ ಇದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next