Advertisement

ವಿದ್ಯಾರ್ಥಿಗಳ ಕೊರತೆ, ಮುಚ್ಚುವ ಹಂತಕ್ಕೆ ಸರ್ಕಾರಿ ಶಾಲೆಗಳು

01:23 PM Jul 23, 2019 | Suhan S |

ಅರಸೀಕೆರೆ: ಬಡವರು ಮತ್ತು ಮಧ್ಯಮ ವರ್ಗದ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಲ್ಲಿ ಸರ್ಕಾರ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದು ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದರೂ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತಕ್ಕೆ ಬರುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ.

Advertisement

ಗಡಿ ಭಾಗದ ಶಾಲೆಗಳಿಗೆ ಕುತ್ತು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಎಚ್.ಮಂಗಳಾಪುರ, ನಾಗತೀಹಳ್ಳಿ, ಕರಿಮಾರನಹಳ್ಳಿ, ಮಲ್ಲಾಪುರ, ಹಾಗೂ ಚಿಂದೇನಹಳ್ಳಿ ಗಡಿ ಭಾಗದ ಸರ್ಕಾರಿ ಪ್ರಾಥಮಿಕ ಕಿರಿಯ ಶಾಲೆಗಳನ್ನು ಮಕ್ಕಳ ಹಾಜರಾತಿ ಕೊರತೆ ಕಾರಣ ಮುಚ್ಚಲಾಗಿದೆ. ಅಂತೆಯೇ ಈಗಾಗಲೇ ಮುಚ್ಚಲಾಗಿದೆ. ವಿಟ್ಲಾಪುರ, ಎ.ಮಲ್ಲಾಪುರ, ಚಿಕ್ಕ ಹೆರಗನಾಳು, ಸೂಳೇಕೆರೆ, ಹಾಗೂ ಜಿ.ಬಿ.ತಾಂಡಾದಲ್ಲಿ ಸರ್ಕಾರಿ ಪ್ರಾಥಮಿಕ ಕಿರಿಯ ಶಾಲೆಗಳನ್ನು ಮತ್ತೆ ಪ್ರಾರಂಭಿಸಲಾಗಿದೆ.

ತಾಲೂಕಿನಲ್ಲಿನ 201 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 11,355 ವಿದ್ಯಾರ್ಥಿಗಳು , 180 ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ 9,755 ವಿದ್ಯಾರ್ಥಿಗಳು , ಹಾಗೂ 33 ಪ್ರೌಢಶಾಲೆಗಳಲ್ಲಿ 8,402 ವಿದ್ಯಾರ್ಥಿ ಗಳಿದ್ದು, ಒಟ್ಟು 29,512 ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪೋಷಕರ ಇಂಗ್ಲಿಷ್‌ ವ್ಯಾಮೋಹ: ಇತ್ತೀಚೆಗೆ ಆಧುನಿಕತೆ ಬೆಳೆದಂತೆ ಪೋಷಕ ವರ್ಗದಲ್ಲಿ ಆಂಗ್ಲ ಭಾಷೆಯ ಬಗ್ಗೆ ಹೆಚ್ಚಿನ ವ್ಯಾಮೋಹ ಬೆಳೆಯುತ್ತಿದ್ದು, ಸರ್ಕಾರಿ ಕನ್ನಡ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುವುದು ಸರಿಯಲ್ಲ ಎನ್ನುವ ಕೀಳರಿಮೆ ಎಲ್ಲ ರಲ್ಲೂ ಮನೆ ಮಾಡುತ್ತಿರುವ ಕಾರಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ಬರುತ್ತಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ: ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ, ಪರೀಕ್ಷೆಯಲ್ಲಿ ಹಾಸನ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ಅರಸೀಕೆರೆ ತಾಲೂಕಿನ 21 ಸರ್ಕಾರಿ ಪ್ರೌಢಶಾಲೆಗಳು ಶೇ. 100 ಫ‌ಲಿತಾಂಶವನ್ನು ಪಡೆದಿದೆ. ಪರೀಕ್ಷೆ ಬರೆದಿದ್ದ 3,273 ವಿದ್ಯಾರ್ಥಿಗಳ ಪೈಕಿ 2,934 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 89.64 ಫ‌ಲಿತಾಂಶವನ್ನು ತಂದು ಕೊಟ್ಟಿರುವುದು ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ಸಾಧನೆಯಾಗಿದೆ.

Advertisement

ಶೌಚಾಲಯ ಸೌಲಭ್ಯ: ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸ ಲಾಗಿದೆ. ನರೇಗಾ ಯೋಜನೆಯಡಿ 2ನೇ ಹಂತದಲ್ಲಿ 32 ಶಾಲೆಗಳ ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು,ಇನ್ನೂ 2 ಶಾಲೆಗಳಿಗೆ ಜಾಗದ ಕೊರತೆಯಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆ ಯುತ್ತಿಲ್ಲ. ಹಿಂದಿನ 2018-19 ಸಾಲಿನಲ್ಲಿ ತಲಾ 10.60 ಲಕ್ಷ ರೂ. ವೆಚ್ಚದಲ್ಲಿ 11 ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಸಕರ ವಿಶೇಷ ಅನುದಾನದ ಯೋಜನೆಯಡಿ 150 ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಹಾಗೂ ವಿಶೇಷಾಭಿವೃದ್ಧಿ ಯೋಜನೆಯಡಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಿರುವ 25 ಕೊಠಡಿಗಳನ್ನು ನಿರ್ಮಿಸಲು 14.67 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನ ಸಲ್ಲಿಸ ಲಾಗಿದ್ದು, ತಾಲೂಕಿನ ಎಲ್ಲಾ ಶಾಲೆಯಲ್ಲಿ ವಿದ್ಯುತ್‌ ವ್ಯವಸ್ಥೆಯಿದ್ದು, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದೆ.

ಆಂಗ್ಲ ಮಾಧ್ಯಮ ಶಾಲೆಗಳು: ತಾಲೂಕಿನ ಕುರುವಂಕ (32) ಬಾಣಾವರ (43)ಜಾವಗಲ್(32) ಚಿಂದೇನ ಹಳ್ಳಿ ಗಡಿಯಲ್ಲಿ (20) ಹಾಗೂ ಅರಸೀಕೆರೆ ನಗರದ ಹಳೇಯ ಹಿರಿಯಪ್ರಾಥಮಿಕ ಶಾಲೆ ಆವರಣದ ಶಾಲೆಯಲ್ಲಿ (10) ಆಂಗ್ಲಮಾಧ್ಯಮ ಶಾಲೆಗಳನ್ನು ಸರ್ಕಾರದ ಆದೇಶದಂತೆ ಪ್ರಾರಂಭಿಸಿದ್ದು, ಈ ಎಲ್ಲಾ ಶಾಲೆಗಳಿಂದ ಒಟ್ಟು 137 ಮಕ್ಕಳು ಶಾಲೆಗೆ ಬರುತ್ತಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ: ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್‌ ಕುಮಾರ್‌ ತಿಳಿಸಿದ್ದಾರೆ. ಪ್ರತಿವರ್ಷ ಶಿಕ್ಷಕರ ವೃತ್ತಿ ಕೌಶಲ್ಯಾಭಿವೃದ್ಧಿಗಾಗಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಿಂದ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುತ್ತಿದ್ದು, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಮಹತ್ವಪೂರ್ಣವಾಗಿ ಶ್ರಮಿಸುತ್ತಿದ್ದು, ಉತ್ತಮ ಫ‌ಲಿತಾಂಶ ಬರುತ್ತಿದೆ. ಪೋಷಕರು ಕೀಳರಿಮೆ ತೊರೆದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬೇಕಾಗಿದೆ.
ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರ ನಿರ್ಲಕ್ಷ್ಯ:ರೈತಸಂಘದ ಮುಖಂಡ ಪ್ರಸನ್ನಕುಮಾರ್‌ ಮಾತನಾಡಿ, ಒಂದು ಕಾಲದಲ್ಲಿ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಪ್ರಾರಂಭಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಗ್ರಾಮದ ಮುಖಂಡರು ಹೋರಾಡುತ್ತಿದ್ದರು. ಶಾಲೆಯ ಪ್ರಾರಂಭವೇ ಹಬ್ಬದ ವಾತವರಣವನ್ನು ಸೃಷ್ಟಿಸುತ್ತಿತ್ತು. ಆದರೆ ಇತ್ತೀಚಿನ ನಮ್ಮ ಬದಲಾದ ಮನಸ್ಥಿತಿಯ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದರೂ ಯಾರೂ ಕೂಡ ಈ ಬಗ್ಗೆ ಗಮನ ಹರಿಸದಿರುವುದು ದುಃಖದ ಸಂಗತಿಯಾಗಿದೆ ಎಂದರು.
● ರಾಮಚಂದ್ರ
Advertisement

Udayavani is now on Telegram. Click here to join our channel and stay updated with the latest news.

Next