Advertisement
ಪುತ್ತೂರು ತಾಲೂಕಿನ ಹೋಬಳಿ ಕೇಂದ್ರವಾಗಿರುವ ಇಲ್ಲಿ ಮೊದಲಿಗೆ ಪಶು ಚಿಕಿತ್ಸಾಲಯವಿದ್ದು, ಅನಂತರ ಅದನ್ನು ಮೇಲ್ದರ್ಜೆಗೇರಿಸಲಾಗಿ ಇದೀಗ ಪಶು ಆಸ್ಪತ್ರೆಯಾಗಿ ಬದಲಾಗಿದೆ. ಆರ್ ಡಿಎಫ್ಐ ಯೋಜನೆಯಡಿ ಉತ್ತಮ ಕಟ್ಟಡ ನಿರ್ಮಾಣವೂ ಆಗಿ 2018ರ ನವೆಂಬರ್‌ನಲ್ಲಿ ಉದ್ಘಾಟನೆಗೊಂಡಿದೆ.
Related Articles
Advertisement
ಅಧೀನ ಚಿಕಿತ್ಸಾಲಯಗಳೂ ಖಾಲಿ
ಉಪ್ಪಿನಂಗಡಿ ಪಶು ಆಸ್ಪತ್ರೆಯ ಅಧೀನದಲ್ಲಿ ನೆಲ್ಯಾಡಿ ಮತ್ತು ಶಿರಾಡಿ ಪ್ರಾಥಮಿಕ ಪಶು ಚಿಕಿತ್ಸಾಲಯಗಳಿದ್ದು, ಇಲ್ಲಿ ತಲಾ ಒಬ್ಬರಂತೆ ಇಬ್ಬರು ಪಶು ವೈದ್ಯ ಪರೀಕ್ಷಕರು, ತಲಾ ಇಬ್ಬರಂತೆ ನಾಲ್ಕು ಮಂದಿ ಡಿ ದರ್ಜೆ ನೌಕರರ ಹುದ್ದೆ ಖಾಲಿ ಇದೆ. ಆದ್ದರಿಂದ ಈ ಭಾಗದಲ್ಲಿ ಚಿಕಿತ್ಸೆ ನೀಡುವ ಹೊಣೆಯನ್ನು ಇಲ್ಲಿರುವ ಪ್ರಭಾರ ವೈದ್ಯರೇ ಹೊರಬೇಕಿದೆ. ವಾರದಲ್ಲಿ ಎರಡು ದಿನ ಮಾತ್ರ ಲಭ್ಯರಿರುವ ಅವರಿಗೆ ಎಲ್ಲವನ್ನೂ ಸಕಾಲದಲ್ಲಿ ನಿಭಾಯಿಸಲು ಅಸಾಧ್ಯವಾಗಿದೆ.
ಕೃಷಿ ಪ್ರಧಾನ ಕ್ಷೇತ್ರ
ಉಪ್ಪಿನಂಗಡಿ ಪಶು ಆಸ್ಪತ್ರೆ ವ್ಯಾಪ್ತಿಗೆ ಒಳಪಡುವ ಉಪ್ಪಿನಂಗಡಿ, ಬಜತ್ತೂರು, 34 ನೆಕ್ಕಲಾಡಿ, ಇಳಂತಿಲ ಹಾಗೂ ಹಿರೇಬಂಡಾಡಿ ಗ್ರಾಮಗಳು ಕೃಷಿ ಪ್ರಧಾನ ಗ್ರಾಮಗಳಾಗಿವೆ.
ಆರ್ಥಿಕ ಸ್ವಾವಲಂಬನೆಗಾಗಿ ರೈತರು ಜಾನುವಾರು ಸಾಕಣೆ, ಆಡು, ಹಂದಿ, ಕೋಳಿ ಸಾಕಣಿಕೆಯನ್ನು ಮಾಡುತ್ತಾರೆ. 2020ರ ಜಾನುವಾರು ಸರ್ವೇಯ ಪ್ರಕಾರ 4,560 ದನಗಳು ಹಾಗೂ 24 ಎಮ್ಮೆಗಳು ಈ ಭಾಗದಲ್ಲಿವೆ. ಸಾಕು ಪ್ರಾಣಿಗಳಿಗೆ ಕಾಯಿಲೆ ಬಂದರೆ ಸಿಬಂದಿ ಕೊರತೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಮಾತ್ರ ಲಭ್ಯವಾಗದ ಸ್ಥಿತಿ ಇಲ್ಲಿದೆ. ಆದ್ದರಿಂದ ರೈತರು ಸಾಕು ಪ್ರಾಣಿಗಳ ಚಿಕಿತ್ಸೆಗಾಗಿ ಖಾಸಗಿ ಜಾನುವಾರು ವೈದ್ಯರ ಬಳಿ ಹೋಗಬೇಕಾದ ಅನಿವಾರ್ಯವಿದೆ.
ಸರಕಾರದ ವತಿಯಿಂದ ಉಚಿತವಾಗಿ ಜಾನುವಾರುಗಳಿಗೆ ವರ್ಷದಲ್ಲಿ ಎರಡು ಬಾರಿ ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡಲಾಗುತ್ತದೆ. ರೈತರ ಮನೆಗೆ ತೆರಳಿ ಈ ಲಸಿಕೆಯನ್ನು ನೀಡಲಾಗುತ್ತದೆ. ಆದರೆ ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಸಿಬಂದಿ ಕೊರತೆ ಇರುವುದರಿಂದ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಲಸಿಕೆ ನೀಡುವುದು ಪಶು ವೈದ್ಯರಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಕೆಎಂಎಫ್ ಸೇರಿದಂತೆ ಇತರ ಸಂಸ್ಥೆಗಳ ಕೃತಕ ಗರ್ಭಧಾರಣ ಕಾರ್ಯಕರ್ತರ ಮೊರೆ ಹೋಗಬೇಕಾಗುತ್ತದೆ. ಇನ್ನು ಜಾನುವಾರುಗಳು ಬೆದೆಗೆ ಬಂದಾಗ ಕೆಲವೊಮ್ಮೆ ಸಕಾಲದಲ್ಲಿ ಅದಕ್ಕೆ ಕೃತಕ ಗರ್ಭಧಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಜಾನುವಾರು, ಆಡು ಸಾಕಣೆಗೆ ಸರಕಾರದ ಸಹಾಯಧನ ಪಡೆಯಲು ರೈತರಿಗೆ ಮುಖ್ಯ ಪಶು ವೈದ್ಯಾಧಿಕಾರಿಯವರ ಸಹಿಬೇಕು. ಜಾನು ವಾರುಗಳು ಕಾಯಿಲೆ ಬಿದ್ದಾಗ ವೈದ್ಯರ ಸೂಕ್ತ ಸಲಹೆ, ಸೂಚನೆಗಳು ಬೇಕು. ಆದರೆ ಇಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ವಾರ ಪೂರ್ತಿ ರೈತರಿಗೆ ಸಿಗದೆ ಸಮಸ್ಯೆಯನ್ನೆದುರಿಸಬೇಕಾಗಿದೆ. ಇಲ್ಲಿ ಖಾಯಂ ವೈದ್ಯಾಧಿಕಾರಿ ಸೇರಿದಂತೆ ಸಿಬಂದಿಯನ್ನು ನೇಮಕಾತಿ ಮಾಡಬೇಕು. ಈ ಮೂಲಕ ಹೈನುಗಾರರ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುವುದು ರೈತರ ಪ್ರಮುಖ ಬೇಡಿಕೆ.
ಸಿಬಂದಿ ರಜೆಯಾದರೆ ಆಸ್ಪತ್ರೆಗೆ ಬಾಗಿಲು
ಪೂರ್ಣ ಪ್ರಮಾಣದ ಸಿಬಂದಿ ಇಲ್ಲದೆ ಇರುವುದರಿಂದ ಇರುವ ಒಬ್ಬ ಹೊರಗುತ್ತಿಗೆಯ ಸಿಬಂದಿ ಅನಿವಾರ್ಯ ಕಾರಣಗಳಿಂದ ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ಉಳಿದ ದಿನ ರಜೆ ಮಾಡಿದರೆ ಆಸ್ಪತ್ರೆಗೆ ಬಾಗಿಲು ಹಾಕಬೇಕಾದ ಅನಿವಾರ್ಯ ಸ್ಥಿತಿಯಿದೆ.
ಹುದ್ದೆಗಳು ಖಾಲಿ: ಪಾಣಾಜೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿಯಾಗಿದ್ದು, ಕೊಳ್ತಿಗೆ, ನರಿಮೊಗರು ಹಾಗೂ ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದರ ನಡುವೆ ಇಲಾಖೆಯ ಸಭೆ, ಕೆಡಿಪಿ ಸಭೆಗಳಿಗೂ ತೆರಳಬೇಕಾಗುತ್ತದೆ. ಆದ್ದರಿಂದ ಉಪ್ಪಿನಂಗಡಿಯಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಲಭ್ಯವಿರುವುದು. ಇಲ್ಲಿ ಗುತ್ತಿಗೆ ಆಧಾರದಲ್ಲಿ ಓರ್ವ ಡಿ ದರ್ಜೆ ನೌಕರ ಬಿಟ್ಟರೆ ಉಳಿದೆಲ್ಲ ಹುದ್ದೆಗಳು ಖಾಲಿಯಿವೆ. ಸಿಬಂದಿ ಕೊರತೆಯಿದ್ದರೂ ನಮ್ಮಿಂದಾಗುವಷ್ಟರ ಮಟ್ಟಿಗೆ ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. –ಡಾ| ಪ್ರಕಾಶ್, ಮುಖ್ಯ ಪಶುವೈದ್ಯಾಧಿಕಾರಿ (ಪ್ರಭಾರ)
ಎಂ.ಎಸ್. ಭಟ್ ಉಪ್ಪಿನಂಗಡಿ