Advertisement

ಹಲವು ವರ್ಷಗಳ ಸಮಸ್ಯೆಗೆ ಸಿಗುತ್ತಿಲ್ಲ ಪರಿಹಾರ; ಕಂಗಾಲಾದ ರೈತರು

09:58 AM Jul 22, 2018 | |

ಮಹಾನಗರ: ಜಿಲ್ಲೆಯ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಸಿಬಂದಿ ಕೊರತೆಯಿಂದ ಈಗ ಇರುವರ ಕೆಲಸದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲಾಖೆಯಲ್ಲಿ ಸಿಬಂದಿ ಕೊರತೆ ಇದು ಇಂದು ನಿನ್ನೆಯ ಕಥೆಯಲ್ಲ. ಹಲವಾರು ವರ್ಷಗಳಿಂದ ಈ ಸಮಸ್ಯೆ ಎದುರಾಗಿದ್ದರೂ ಈ ಬಗ್ಗೆ ಸಚಿವರಿಗೆ ಮನವಿಗಳನ್ನು ನೀಡಿದ್ದರೂ ಇಲಾಖೆಗೆ ಸಿಬಂದಿ ನೇಮಕ ಮಾಡುವ ಗೋಜಿಗೆ ಸರಕಾರ ಹೋಗಿಲ್ಲ.

Advertisement

ಜಿಲ್ಲೆಯಲ್ಲಿ ಇಲಾಖೆಯ ಪ್ರಮುಖ ಹುದ್ದೆಗಳಾದ ಮುಖ್ಯ ಪಶು ವೈದ್ಯಾಧಿಕಾರಿ ಹಾಗೂ ಪಶು ವೈದ್ಯಾಧಿಕಾರಿ ಸಹಿತ ಪ್ರಮುಖ ಹುದ್ದೆಗಳು ಇನ್ನೂ ಖಾಲಿ ಇವೆ. ಇನ್ನೂ ಉಳಿದಂತೆ ಅರೆ ತಾಂತ್ರಿಕ ಸಿಬಂದಿ, ಆಡಳಿತ ಸಹಾಯಕರು, ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಬೆರಳಚ್ಚುಗಾರ, ಜಾನುವಾರು ಅಭಿವೃದ್ಧಿ ಅಧಿಕಾರಿ, ಜಾನುವಾರು ಅಧಿಕಾರಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಸಹಾಯಕರು, ಎಕ್ಸ್‌ರೇ ಟೆಕ್ನಿಶಿಯನ್‌, ವಾಹನ ಚಾಲಕರು ಮತ್ತು ಡಿ ದರ್ಜೆ ನೌಕರರ ಹುದ್ದೆ ಹುದ್ದೆಗಳು ಜಿಲ್ಲೆಯಲ್ಲಿ ಖಾಲಿ ಇವೆ.

ವೈದ್ಯರು, ಡಿ ನೌಕರರ ಕೊರತೆ ಹೆಚ್ಚಳ
ಇಲಾಖೆಯಲ್ಲಿ ಪಶು ವೈದ್ಯರ ಕೊರತೆ ಹೆಚ್ಚಿರುವುದರಿಂದ ಚಿಕಿತ್ಸೆ ಹಾಗೂ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿವೆ. ಇನ್ನುಳಿದಂತೆ ಡಿ ದರ್ಜೆ ನೌಕರರ ಕೊರತೆ ಬಹಳಷ್ಟಿದೆ. ಸುಮಾರು 30 ವರ್ಷಗಳ ಹಿಂದೆ ಜಿಲ್ಲೆಯಲ್ಲಿ 310 ಮಂದಿ ಡಿ ದರ್ಜೆ ನೌಕರರ ನೇಮಕವಾದ ಅನಂತರ ಈ ಹುದ್ದೆಗೆ ಯಾವ ನೇಮಕಾತಿಯು ನಡೆದಿಲ್ಲ. ಇಂದು ಒಬ್ಬರಾದ ಮೇಲೆ ಒಬ್ಬರಂತೆ ನಿವೃತ್ತಿ ಹೊಂದುತ್ತಿದ್ದಾರೆ. ಈಗ 267ಕ್ಕೂ ಅಧಿಕ ಡಿ ದರ್ಜೆ ನೌಕರ ಹುದ್ದೆಗಳು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಖಾಲಿ ಇವೆ. ಕೆಲವು ತಾಲೂಕಿನ ಆಸ್ಪತ್ರೆ ಗಳಲ್ಲಿ ವೈದ್ಯರೇ ಆಸ್ಪತ್ರೆ ಬಾಗಿಲು ತೆರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕಿತ್ಸೆ ಸಂದರ್ಭದಲ್ಲಿ ನಾಲ್ವರು ಮಾಡುವ ಕೆಲಸವನ್ನು ವೈದ್ಯರೊಬ್ಬರೇ ಮಾಡುವ ಸ್ಥಿತಿ ಇದೆ ಎಂದು ಇಲಾಖೆಯ ಅಧಿಕಾರಿಗಳು ಉದಯವಾಣಿ ಸುದಿ ನಕ್ಕೆ ತಿಳಿಸಿದ್ದಾರೆ. 

ಮಾಹಿತಿ ಕೊರತೆ
ರೈತರು ಬ್ಯಾಂಕ್‌ಗಳಿಂದ ಸಾಲ ಪಡೆದು ಕುರಿ, ಆಡು, ಹಂದಿ, ಕೋಳಿ ಸಾಕಣೆ, ಘಟಕ ನಿರ್ಮಾಣ ಕೈಗೊಂಡಾಗ ಮಾರ್ಗದರ್ಶನ ನೀಡಲು ಮಂಗಳೂರು ತಾಲೂಕು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಅಲ್ಲದೆ ಕುರಿ, ಆಡುಗಳ ಆಹಾರ ಪದ್ಧತಿ, ನಿರ್ವಹಣೆ ಬಗ್ಗೆ ಸರಿಯಾದ ಮಾರ್ಗದರ್ಶಕರಿಲ್ಲದೆ ಸಾಕಣಿಕೆದಾರರು ಇತಹ ಉದ್ಯಮಕ್ಕೆ ಹಿಂಜರಿಯುತ್ತಿದ್ದಾರೆ.

312 ಹುದ್ದೆ ಖಾಲಿ
ಜಿಲ್ಲೆಯ ರೈತರಲ್ಲಿ ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ ಹೆಚ್ಚಿದ್ದು, ಇಲಾಖೆ ಸಿಬಂದಿ ಕೊರತೆಯಿಂದಾಗಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ದ.ಕ. ಜಿಲ್ಲಾ ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಒಟ್ಟು 448 ಹುದ್ದೆಗಳು ಮಂಜೂರಾಗಿದ್ದರೂ ಸದ್ಯ 136 ಸಿಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 312 ಹುದ್ದೆ ಭರ್ತಿಯಾಗದೆ ಖಾಲಿಯಾಗಿ ಉಳಿದಿವೆ. 

Advertisement

ಹಲವು ಬಾರಿ ಮನವಿ
ಸರಕಾರದ ನೂತನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ಫ‌ಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳ ಆವಶ್ಯಕತೆ ಇದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಇಲಾಖಾ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಕಳೆದ ಬಾರಿ ಸಚಿವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲೂ ಮನವಿ ನೀಡಲಾಗಿದೆ. ಈಗ ಕರ್ತವ್ಯ ನಿರ್ವಹಿಸುತ್ತಿರುವ ಸಿಬಂದಿಗೆ ಒತ್ತಡ ಹೆಚ್ಚುತ್ತಿದೆ.
– ಡಾ| ಎಸ್‌. ಮೋಹನ್‌,
ಉಪ ನಿರ್ದೇಶಕರು, ಪಶು ಪಾಲನ ಇಲಾಖೆ ಮಂಗಳೂರು

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next