Advertisement

ಕಾನೂನು ಮಾಪನಶಾಸ್ತ್ರ ಇಲಾಖೆಗೆ ಸಿಬ್ಬಂದಿ ಬರ!

03:24 PM Aug 27, 2019 | Suhan S |

ಬಳ್ಳಾರಿ: ನ್ಯಾಯಬೆಲೆ ಅಂಗಡಿ ಸೇರಿ ಖಾಸಗಿ ವಲಯದಲ್ಲೂ ತೂಕ ಮತ್ತು ಅಳತೆ ಮೇಲೆ ನಿಗಾವಹಿಸಬೇಕಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಸಿಬ್ಬಂದಿ ಕೊರತೆಯಿಂದಾಗಿ ಈಗ ಗರಬಡಿದಂತಾಗಿದೆ. ಇಲಾಖೆಗೆ ವಾಹನವಿದ್ದರೂ ಅದನ್ನು ಚಲಾಯಿಸಲು ಚಾಲಕನೇ ಇಲ್ಲದ ಸ್ಥಿತಿಯಿಂದಾಗಿ ಅಧಿಕಾರಿಗಳಿಗೆ ತಪಾಸಣೆಗೆ ತೆರಳಲು ಸಮಸ್ಯೆಯಾಗಿದೆ.

Advertisement

ನ್ಯಾಯಬೆಲೆ ಅಂಗಡಿ ಸೇರಿ ಖಾಸಗಿ ವಲಯದಲ್ಲಿ ಗ್ರಾಹಕರು ಖರೀದಿಸುವ ವಿವಿಧ ರೀತಿಯ ವಸ್ತು, ಆಹಾರ ಪದಾರ್ಥಗಳ ತೂಕ ಮತ್ತು ಅಳತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೋಸ ನಡೆಯುವುದು ಸರ್ವೆ ಸಾಮಾನ್ಯ. ಮುಖ್ಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲೇ ಪಡಿತರ ಧಾನ್ಯಗಳು ಸಮರ್ಪಕ ಮತ್ತು ನಿಗದಿತ ಅಳತೆಯಲ್ಲಿ ಗ್ರಾಹಕರ ಕೈಸೇರುವುದು ಅನುಮಾನ. ಅಂತಹುದರಲ್ಲಿ ಖಾಸಗಿ ವಲಯದಲ್ಲಿ ತೂಕ ಮತ್ತು ಅಳತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರು ನಿತ್ಯ ಅನ್ಯಾಯ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಾಮಾನ್ಯ ಜನರ್ಯಾರೂ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡದಿರುವುದು ಈ ಅನ್ಯಾಯ ಮತ್ತಷ್ಟು ಹೆಚ್ಚಲು ಪುಷ್ಟಿ ನೀಡದಂತಾಗಿದೆ. ಆದರೆ ಈ ಬಗ್ಗೆ ಎಚ್ಚೆತ್ತುಕೊಂಡು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ಮತ್ತು ಖಾಸಗಿ ಮಳಿಗೆಗಳ ಮೇಲೆ ದಾಳಿ ನಡೆಸಬೇಕಿದ್ದ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಸಿಬ್ಬಂದಿ ಕೊರತೆಯಿಂದ ಅಸಹಾಯಕ ಸ್ಥಿತಿಯಲ್ಲಿದೆ.

ಜಿಲ್ಲೆಯಲ್ಲಿ ಮೂರು ವಲಯ: ಕಾನೂನು ಮಾಪನ ಶಾಸ್ತ್ರ ಇಲಾಖೆ ಜಿಲ್ಲೆಯಲ್ಲಿ ಬಳ್ಳಾರಿ 1, ಬಳ್ಳಾರಿ 2, ಹೊಸಪೇಟೆ ಸೇರಿ ಮೂರು ವಲಯಗಳನ್ನು ಹೊಂದಿದೆ. ಬಳ್ಳಾರಿ 1 ವ್ಯಾಪ್ತಿಗೆ ಬಳ್ಳಾರಿ ನಗರ, ಸಿರುಗುಪ್ಪ ತಾಲೂಕು ಬರುತ್ತದೆ. ಅದೇ ರೀತಿ ಬಳ್ಳಾರಿ 2 ವಲಯಕ್ಕೆ ಬಳ್ಳಾರಿ ತಾಲೂಕು, ಸಂಡೂರು, ಕೂಡ್ಲಿಗಿ ತಾಲೂಕು, ಹೊಸಪೇಟೆ ವಲಯಕ್ಕೆ ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕುಗಳು ಬರುತ್ತವೆ. ಇತ್ತೀಚೆಗಷ್ಟೇ ಬಳ್ಳಾರಿಗೆ ಸೇರ್ಪಡೆಯಾದ ಹರಪನಹಳ್ಳಿ ತಾಲೂಕು ಈ ಇಲಾಖೆ ಮಟ್ಟಿಗೆ ಇನ್ನು ಬಳ್ಳಾರಿಗೆ ಸೇರಿಲ್ಲ. ಈ ಮೂರು ವಲಯಗಳಲ್ಲಿ ಒಬ್ಬ ಜಿಲ್ಲಾಮಟ್ಟದ ಅಧಿಕಾರಿ, ಮೂರು ನಿರೀಕ್ಷಕರು, ಮೂರು ಎಸ್‌ಡಿಸಿ ಸೇರಿ ಒಟ್ಟು 11 ಹುದ್ದೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಜಿಲ್ಲಾಮಟ್ಟದ ಅಧಿಕಾರಿ, ನಿರೀಕ್ಷಕರನ್ನು ಹೊರತುಪಡಿಸಿ, ಉಳಿದಂತೆ ದ್ವಿತೀಯ ದರ್ಜೆ ಸಹಾಯಕರು, ಮ್ಯಾನ್ವಲ್ ಅಸಿಸ್ಟೆಂಟ್, ಕಂಪ್ಯೂಟರ್‌ ಆಪರೇಟರ್‌, ಜವಾನ ಹುದ್ದೆಗಳು ಖಾಲಿ ಇವೆ. ಹೀಗಾಗಿ ಎಲ್ಲ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಮಳಿಗೆಗಳ ಮೇಲೆ ತಪಾಸಣೆ ನಡೆಸಲು ಕಷ್ಟಸಾಧ್ಯವಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ವಾಹನ ಚಾಲಕರೇ ಇಲ್ಲ: ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಎರಡು ವರ್ಷಗಳ ಹಿಂದೆ ಸರ್ಕಾರ ವಾಹನ ವ್ಯವಸ್ಥೆ ಕಲ್ಪಿಸಿದೆಯಾದರೂ ಅದನ್ನು ಚಲಾಯಿಸಲು ಚಾಲಕರನ್ನು ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಪರಿಣಾಮ ತೂಕ ಮತ್ತು ಅಳತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ (ಹೆಸರಿಲ್ಲದೆ) ಬರುವ ದೂರುಗಳನ್ನು ಆಧರಿಸಿ ಗ್ರಾಮೀಣ ಭಾಗಕ್ಕೆ ಹೋಗಿ ಖಾಸಗಿ ಮಳಿಗೆ, ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ನಡೆಸಲು ಕಷ್ಟಸಾಧ್ಯವಾಗುತ್ತಿದೆ. ಒಂದು ವೇಳೆ ಸಾರಿಗೆ ಬಸ್‌, ವಾಹನಗಳಲ್ಲಿ ತೆರಳಿ ಅಲ್ಲಿಗೆ ತಲುಪುವಷ್ಟರಲ್ಲಿ ಅಂಗಡಿ ಮುಚ್ಚಿರುತ್ತದೆ. ಹಾಗಾಗಿ ಇಲಾಖೆಗೆ ಒಬ್ಬ ಚಾಲಕರನ್ನು ನೀಡಿದಲ್ಲಿ ದೂರುಗಳನ್ನು ಆಧರಿಸಿ ನಿರ್ದಿಷ್ಟ ಸ್ಥಳಕ್ಕೆ ನಿರ್ದಿಷ್ಟ ಸಮಯಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲು ಸಾಧ್ಯವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಒಟ್ಟು 207 ಪ್ರಕರಣ: ಇಲಾಖೆಯಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು 207 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 192 ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗಿ ಪ್ರಕರಣ ದಾಖಲಾಗಿದ್ದು, 1,68,500 ರೂಗಳನ್ನು ದಂಡ ವಿಧಿಸಲಾಗಿದೆ. ಪೊಟ್ಟಣ ಸಾಮಗ್ರಿಯಲ್ಲಿ 12 ಪ್ರಕರಣ ದಾಖಲಾಗಿದ್ದು, 55,000ರೂಗಳನ್ನು ದಂಡ ವಿಧಿಸಲಾಗಿದೆ. ಎಲೆಕ್ಟ್ರಾನಿಕ್‌ ಮತ್ತು ಮ್ಯಾನ್ವಲ್ ತೂಕದ ತಕ್ಕಡಿಗಳಿಗೆ ಸತ್ಯಾಪನೆ ಸೀಲ್ ಹಾಕಿ ಒಟ್ಟು 35,68,590 ರೂ. ಗಳ ಶುಲ್ಕವನ್ನು ಸಂಗ್ರಹಿಸಲಾಗಿದೆ ಎಂದು ಇಲಾಖೆಯ ಅಂಕಿ ಸಂಖ್ಯೆಗಳು ಸ್ಪಷ್ಟಪಡಿಸುತ್ತವೆ.

ಕಾರ್ಯರೂಪಕ್ಕೆ ಬರುತ್ತಿಲ್ಲ: ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಸಿಬ್ಬಂದಿ ಕೊರತೆಯಿದೆ. ಕಂಪ್ಯೂಟರ್‌ ಆಪರೇಟರ್‌ನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ. ಸರ್ಕಾರ ವಾಹನ ನೀಡಿದರೂ, ಅದಕ್ಕೆ ಚಾಲಕರೇ ಇಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೂ ಅವರು ಸರ್ಕಾರಕ್ಕೆ ಬರೆಯಲಾಗಿದೆ ಎನ್ನುತ್ತಾರೆ ಹೊರತು, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಚಾಲಕನನ್ನು ನೀಡಿದರೆ, ತಪಾಸಣೆ ನಡೆಸಲು ನಿರೀಕ್ಷಕರಿಗೆ ಅನುಕೂಲವಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ದಾಳಿಗಳನ್ನು ನಡೆಸಲು ಅನುಕೂಲವಾಗಲಿದೆ.•ಅಮೃತ ಚೌವ್ಹಾಣ್‌, ಸಹಾಯಕ ನಿರ್ದೇಶಕರು, ಕಾನೂನು ಮಾಪನಶಾಸ್ತ್ರ ಇಲಾಖೆ, ಬಳ್ಳಾರಿ
Advertisement

 

•ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next