Advertisement

ದಕ್ಕೆಯಲ್ಲಿ ಸ್ಥಳಾವಕಾಶದ ಕೊರತೆ

10:28 AM Oct 07, 2018 | |

ಮಹಾನಗರ: ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮ ಹಾಗೂ ಡೀಸೆಲ್‌ ಬೆಲೆ ಏರಿಕೆ ಸಮಸ್ಯೆಯಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಶೇ.90 ಮೀನುಗಾರಿಕಾ ಬೋಟುಗಳು ವಾಪಾಸ್‌ ಬಂದಿವೆ. ಉತ್ತಮ ಮೀನುಗಾರಿಕೆ ನಿರೀಕ್ಷೆಯಿಂದ ಕಡಲಿನತ್ತ ತೆರಳಿದ್ದ ಮೀನುಗಾರರಿಗೆ ಮತ್ಸ್ಯಕ್ಷಾಮ ಸಂಕಷ್ಟ ಒಡ್ಡಿದ್ದರೆ, ಈಗ ಚಂಡಮಾರುತ ಭೀತಿ ಮತ್ತಷ್ಟು ಹೊಡೆತ ನೀಡಿದೆ.

Advertisement

ಪ್ರತಿಕೂಲ ಹವಾಮಾನ, ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲೇ ಈ ಮೊದಲೇ ಹಲವು ಬೋಟುಗಳು ನಿರಾಸೆಯಿಂದ ದಡ ಸೇರಿದ್ದವು. ಈ ನಡುವೆ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಸಮುದ್ರಕ್ಕಿಳಿದ ಬೋಟುಗಳು ದಡ ಸೇರಬೇಕು ಎಂದು ಸೂಚನೆ ನೀಡಲಾಗುತ್ತಿದೆ. ಇದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಲಂಗರು ಹಾಕಲು ಜಾಗದ ಸಮಸ್ಯೆ
ಜಿಲ್ಲೆಯಲ್ಲಿ ಸುಮಾರು 1,250 ಟ್ರಾಲ್‌ ಬೋಟ್‌ಗಳಿವೆ. ಚಂಡ ಮಾರುತ ಎಚ್ಚರಿಕೆ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬಹುತೇಕ ಬೋಟುಗಳು ಬರಿಗೈಯಲ್ಲಿ ಹಿಂತಿರುಗುತ್ತಿವೆ. ಬೋಟುಗಳು ಒಂದೇ ಸಮಯದಲ್ಲಿ ಮರಳಿ ಬಂದಿರುವುದರಿಂದ ಹಳೆ ಬಂದರು ಪ್ರದೇಶದಲ್ಲಿ ಬೋಟು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಎದುರಾಗಿದೆ. ಸಾಮಾನ್ಯವಾಗಿ 400 ಬೋಟುಗಳು ನಿಲ್ಲಲು ಸ್ಥಳವಕಾಶ ಇರುವ ಮಂಗಳೂರು ದಕ್ಕೆಯಲ್ಲಿ ಈಗ 1,200 ಕ್ಕಿಂತಲೂ ಅಧಿಕ ಬೋಟುಗಳು ಲಂಗಾರು ಹಾಕಿವೆ. ಸ್ಥಳಾವಕಾಶ ಕೊರತೆ ಇರುವುದರಿಂದ ನಾಲ್ಕು ಸಾಲುಗಳಲ್ಲಿ ಬೋಟುಗಳನ್ನು ನಿಲ್ಲಿಸಲಾಗಿದೆ.

ಕೋಟ್ಯಂತರ ರೂ. ನಷ್ಟ
ಮಳೆಗಾಲ ಬಂದಾಗ ಮೀನುಗಾರಿಕಾ ಬೋಟುಗಳ ರಿಪೇರಿ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುತ್ತದೆ. ಇದಕ್ಕಾಗಿ ಬೋಟುಗಳ ಮಾಲಕರು ಸಾಲ ಮಾಡಿರುತ್ತಾರೆ. ಅದನ್ನು ತೀರಿಸಲು ಮೀನುಗಾರರು ಪರ್ಯಾಯ ದಾರಿ ನೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೀನುಗಾರಿಕಾ ಋತು ಆರಂಭವಾಗುತ್ತಿದ್ದಂತೆ ಸಂತಸದಿಂದ ಕಡಲಿನತ್ತ ಹೆಜ್ಜೆ ಹಾಕಿದ್ದ ಮೀನುಗಾರರಿಗೆ ಹವಾಮಾನ ವೈಪರೀತ್ಯ ಹಾಗೂ ಮತ್ಸ್ಯಕ್ಷಾಮ ಆಘಾತ ನೀಡಿತ್ತು. ಆದಾದ ಕೆಲವೇ ದಿನಗಳಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಬೋಟುಗಳು ವಾಪಸ್‌ ಬಂದಿದ್ದವು. ಮೀನುಗಾರಿಕೆಯೊಂದಿಗೆ ನಂಟಿರುವ ಮಂಜುಗಡ್ಡೆ, ಮಾರುಕಟ್ಟೆ ವ್ಯಾಪಾರ, ಸಾಗಾಟ ಉದ್ಯಮವೂ ನಷ್ಟ ಅನುಭವಿಸಿದೆ.

Advertisement

ಲಕ್ಷಾಂತರ ರೂ.ನಷ್ಟ
‘ಮೀನುಗಾರಿಕಾ ಋತು ಆರಂಭಗೊಂಡಗಿನಿಂದಲೇ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಪ್ರತಿ ಬೋಟಿಗೂ ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಇದನ್ನು ಯಾವ ರೀತಿ ಸಂಭಳಿಸಬಹುದು ಎಂಬುದು ತಿಳಿಯುತ್ತಿಲ್ಲ. ಈಗಾಗಲೇ ಮೀನುಗಾರಿಕೆಗೆ ತೆರಳಿದ ಶೇ.90ಕ್ಕಿಂತಲೂ ಅಧಿಕ ಬೋಟುಗಳು ವಾಪಾಸ್ಸಾಗಿದೆ.
– ನಿತಿನ್‌ ಕುಮಾರ್‌, ಅಧ್ಯಕ್ಷರು,
ಮಂಗಳೂರು ಟ್ರಾಲ್‌ ಮೀನುಗಾರರ
ಸಂಘ

ಮೀನುಗಾರರಿಗೆ ಸಮಸ್ಯೆ 
ಪರ್ಸಿನ್‌ ಬೋಟುಗಳು ಮೀನುಗಾರಿಕೆಗೆ ತೆರಳಿದರೂ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಡೀಸೆಲ್‌ ಬೆಲೆ ಏರಿಕೆ ಹಾಗೂ ಹವಾಮಾನ ವೈಪರೀತ್ಯ ಮೀನುಗಾರರನ್ನು ಕಂಗಡಿಸಿದೆ. ಮೀನುಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳಬೇಕು.
-ಮೋಹನ್‌ ಬೆಂಗ್ರೆ,
ಅಧ್ಯಕ್ಷರು, ಪರ್ಸಿನ್‌ ಬೋಟು
ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next