ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಹಾವುಗಳು ಕಾಣಿಸಿಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ 28 ವಿಧಾನಸಭಾ ಕ್ಷೇತ್ರಗಳಿಗೆ ಕೇವಲ 7 ಮಂದಿ ಮಾತ್ರ ವನ್ಯಜೀವಿ ಸಂರಕ್ಷಕರಿದ್ದು, ಸಕಾಲಕ್ಕೆ ಹಾವು ಕಾಣಿಸಿಕೊಳ್ಳುವ ಸ್ಥಳಕ್ಕೆ ಹೋಗಲಾರದ ಪರಿಸ್ಥಿತಿ ಉಂಟಾಗಿದೆ.
ರಾಜ್ಯ ರಾಜಧಾನಿಯ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪಾಲಿಕೆ ನಗರದಲ್ಲಿ ಕಾಣಿಸಿಕೊಳ್ಳುವ ಹಾವುಗಳನ್ನು ಸಂರಕ್ಷಣೆ ಮಾಡುವ ವನ್ಯಜೀವಿ ಸಂರಕ್ಷಕರ ಕೊರತೆ ಎದುರಿಸುತ್ತಿದೆ. ಎಲ್ಲೆಂದರಲ್ಲಿ ಕಸಹಾಕುವುದು, ಆಹಾರ ಎಸೆಯುವುದು ಹಾಗೂ ಮನೆ, ಕಟ್ಟಡ ನಿರ್ಮಾಣಕ್ಕಾಗಿ ಮಣ್ಣಿನ ಅಗೆತ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.
ಬೆಂಗಳೂರು ವ್ಯಾಪ್ತಿಯಲ್ಲಿ ಹಾವುಗಳು ಕಾಣಿಸಿಕೊಳ್ಳುವ ಸಂಖ್ಯೆ ಶೇ.20 ಹೆಚ್ಚಳವಾಗಿದೆ. ಪ್ರತಿ ದಿನ 5-10 ಕರೆಗಳು ಬೆಂಗಳೂರಿನ ಸುತ್ತ-ಮುತ್ತಲಿನ ಭಾಗದಿಂದ ಪಾಲಿಕೆ ಸಹಾಯವಾಣಿಗೆ ಬರುತ್ತಿವೆ. ಆದರೆ, ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ಸಿಬ್ಬಂದಿ ಹಾವು ಕಾಣಿಸಿಕೊಂಡಿರುವ ಜಾಗಕ್ಕೆ ತಲುಪುವ ವೇಳೆಗಾಗಲೇ ಆ ಪ್ರದೇಶದಿಂದ ಹಾವುಗಳು ಬೇರೆಡೆಗೆ ಪಲಾಯನ ಮಾಡಿರುತ್ತವೆ. ಸರ್ಜಾಪುರ, ಎಚ್‌ಬಿಆರ್ ಲೇಔಟ್, ಹೆಬ್ಟಾಳ, ವೈಟ್‌ಫೀಲ್ಡ್, ಯಲಹಂಕ, ಕೋಣನಕುಂಟೆ, ಯಲಹಂಕ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಗೋವಿಂದರಾಜನಗರ, ಪೀಣ್ಯ, ಮಾಗಡಿ ರಸ್ತೆ ,ಕೆ.ಆರ್.ಪುರಂ, ಮಹಾದೇವಪುರ ಸೇರಿದಂತೆ ಹಲವು ಬಡಾವಣೆಗಳಲ್ಲಿ ನಾಗರಹಾವು ಮತ್ತು ಕೇರೆ ಹಾವು ಹೆಚ್ಚಾಗಿ ಕಂಡು ಬರುತ್ತವೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ವನ್ಯಜೀವ ಸಂರಕ್ಷಕರು ಎಷ್ಟಿರಬೇಕಿತ್ತು: ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನ ಕ್ಷೇತ್ರಗಳು ಸೇರಿವೆ. ಪ್ರತಿಯೊಂದು ಕ್ಷೇತ್ರಕ್ಕೆ ಕನಿಷ್ಠ ಇಬ್ಬರಾದರೂ ವನ್ಯಜೀವಿ ಸಂರಕ್ಷಕರು ಇರಬೇಕು. ಆದರೆ, ಈಗಿರುವುದು ಕೇವಲ 7 ಜನ ಸಿಬ್ಬಂದಿ ಮಾತ್ರ. ಈ ಏಳು ಜನ ಸಿಬ್ಬಂದಿಯೇ ಹಾವು, ಮಂಗ, ಹಕ್ಕಿಗಳ ಕಾಟ ನೀಡುವ ಸ್ಥಳಕ್ಕೆ ಭೇಟಿ ನೀಡಬೇಕಾಗಿದೆ. ಹೀಗಾಗಿ ಸಕಾಲಕ್ಕೆ ಎಲ್ಲ ಕಡೆ ತಲುಪುವುದು ಕಟ್ಟ ಎನ್ನುತ್ತಾರೆ ಉರಗ ತಜ್ಞ ಮೋಹನ್. ಮಾರ್ಚ್, ಏಪ್ರಿಲ್ ಉರಗಗಳು ಮೊಟ್ಟೆ ಇಡುವ ಸಮಯ. ಈ ಮೊಟ್ಟೆಗಳು ಜೂನ್ ನಲ್ಲಿ ಒಡೆದು ಮರಿಗಳು ಹೊರಬರುತ್ತವೆ.
ಪ್ರಸ್ತುತ ಕಾಡುಗಳು, ಚರಂಡಿ, ಕಲ್ಲು ಚಪ್ಪಡಿಗಳು ಸಿಗುತ್ತಿಲ್ಲ. ಎಲ್ಲವೂ ಕಾಂಕ್ರಿಟ್ ಮಯವಾಗಿದ್ದು ಹಾವುಗಳಿಗೆ ಸೂಕ್ತ ಆವಾಸ ಸ್ಥಾನವಿಲ್ಲ. ಹಾಗಾಗಿ ಮನೆ, ಕಾಂಪೌಂಡ್ ಸಂದಿಗಳು, ಪಾರ್ಕ್‌ಗಳು ಇತ್ಯಾದಿಗಳಲ್ಲಿ ಹಾವುಗಳು ಕಂಡು ಬರುತ್ತಿವೆ. ಉರಗಗಳು ಅತಿ ಶೀತ ಪ್ರದೇಶ ಮತ್ತು ಹೆಚ್ಚು ಉಷ್ಣತೆಯಿರುವ ಪ್ರದೇಶಗಳಲ್ಲಿ ಜೀವಿಸುವುದಿಲ್ಲ. ಆದ್ದರಿಂದ ಜೀವಿಸಲು ಸೂಕ್ತವಾದ ಸ್ಥಳಗಳನ್ನು ಹುಡುಕಿಕೊಂಡು ಹೊರಬರುತ್ತಿವೆ ಎಂದು ತಿಳಿಸುತ್ತಾರೆ.
ಸರಿಯಾಗಿ ಸಂದಾಯವಾಗದ ಗೌರವಧನ : ಈ ಹಿಂದೆ ಪಾಲಿಕೆ ವ್ಯಾಪ್ತಿ 11 ಮಂದಿ ಗೌರವ ವನ್ಯಜೀವಿ ಸಂರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಬಿಬಿಎಂಪಿ ಸರಿಯಾಗಿ ಗೌರವಧನ ಸಂದಾಯ ಮಾಡದ ಹಿನ್ನೆಲೆಯಲ್ಲಿ ಹಲವು ಮಂದಿ ಕೆಲಸ ಬಿಟ್ಟಿದ್ದಾರೆ. ವರ್ಷದ ಗೌರವಧನವನ್ನು ಪಡೆಯಲು ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಪಾಲಿಕೆಯ ಗೌರವ ವನ್ಯಜೀವ ಸಂರಕ್ಷಕರಾದ ಉರಗ ತಜ್ಞರೊಬ್ಬರು ಮಾಹಿತಿ ನೀಡಿದರು. ಈ ಹಿಂದೆ ನಾನು ಕೆಲಸ ಮಾಡುವಾಗ ಪ್ರತಿ ದಿನ 30- 40 ಸಹಾಯವಾಣಿಗೆ ಕರೆ ಬರುತ್ತಿದ್ದವು. ಸಂಚಾರದಟ್ಟಣೆ ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ನಾವು ಅಲ್ಲಿಗೆ ತೆರಳುವ ವೇಳೆಗಾಗಲೇ ಅಲ್ಲಿಂದ ಹಾವುಗಳು ಬೇರೆ ಕಡೆಗಳಿಗೆ ಹೋಗಿರುತ್ತಿದ್ದವು. ವನ್ಯಜೀವಿ ಸಂರಕ್ಷಣಾ ತಂಡದವರು ಹಿಡಿದ ಹಾವುಗಳನ್ನು ಜಾರಕಬಂಡೆ, ತುರುವೆಹಳ್ಳ ಕಾಡು ಅಥವಾ ಜನವಸತಿ ಇಲ್ಲದ ಪ್ರದೇಶಗಳಲ್ಲಿ ಹೋಗಿ ಬಿಟ್ಟು ಬರಲಾಗುತ್ತಿತ್ತು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿ 28 ವಿಧಾನ ಸಭಾಕ್ಷೇತ್ರಗಳು ಸೇರಿವೆ. ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಪಾಲಿಕೆ ಕೇವಲ ಏಳು ಮಂದಿ ವನ್ಯಜೀವಿ ಸಂರಕ್ಷಕರು ಇದ್ದಾರೆ. ವನ್ಯಜೀವಿ ಸಂರಕ್ಷರ ಹುದ್ದೆ ಭರ್ತಿಗಾಗಿ ಈಗಾಗಲೇ ಅರಣ್ಯವಿಭಾಗದ ಹಿರಿಯ ಅಧಿಕಾರಿಗಳು ಪಾಲಿಕೆ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ. ●
ಹೆಸರು ಹೇಳಲಿಚ್ಛಿಸದ ಪಾಲಿಕೆ ಅರಣ್ಯವಿಭಾಗಾಧಿಕಾರಿ
– ದೇವೇಶ ಸೂರಗುಪ್ಪ