Advertisement
ತಾಲೂಕಿನಲ್ಲಿ ಮಳೆ ಈ ಬಾರಿ ಸಂಪೂರ್ಣವಾಗಿ ಕ್ಷೀಣಿಸಿದ್ದು ಜೂನ್ ತಿಂಗಳು ಮುಗಿದರು ಸಹ ಮಳೆ ಬಿರುಸಾಗುವ ಲಕ್ಷಣ ಗಳು ಕಾಣಿಸುತ್ತಿಲ್ಲ. ವಾಡಿಕೆಯಂತೆ ಮಳೆ ಸುರಿದಿದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ಇರುವ ಪರಿಸ್ಥಿತಿ ನಿರ್ಮಾಣ ವಾಗುತ್ತಿತ್ತು. ಆದರೆ ವಾಡಿಕೆ ಮಳೆಯಾಗದ ಕಾರಣ ರೈತರು ನಿಧಾನವಾಗಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
Related Articles
Advertisement
ಭೂಮಿಯಲ್ಲಿ ತೇವಾಂಶದ ಕೊರತೆ: ಕೆಲ ವರ್ಷ ಗಳಿಂದ ಅತಿವೃಷ್ಟಿಯಿಂದ ಕಾಫಿ, ಅಡಕೆ ಬೆಳೆಯಲ್ಲಿ ತೇವಾಂಶ ಹೆಚ್ಚಾಗಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿತ್ತು. ಈ ಬಾರಿ ಕೊಳೆ ರೋಗ ಬರುವ ಪ್ರಮೇಯ ಇಲ್ಲ, ಬದಲಾಗಿ ತೇವಾಂಶದ ಅಭಾವದಿಂದ ಅಡಕೆ ಕಾಯಿಗಳು ನೆಲಕಚ್ಚುತ್ತಿವೆ. ಇನ್ನೊಂದೆಡೆ ಉಷ್ಣಾಂಶ ಹೆಚ್ಚಾಗಿ ಕಾಫಿ ಗಿಡಗಳು ಬೋರರ್ ಕಾಯಿಲೆಗೆ ತುತ್ತಾಗುತ್ತಿವೆ. ಅವಧಿಗೂ ಮುನ್ನವೇ ಅರೇಬಿಕ ಕಾಪಿ ಹಣ್ಣಾಗುತ್ತಿದ್ದು, ಗಿಡದಿಂದ ಉದುರಿ ಬೀಳುತ್ತಿದೆ.
ನದಿಗಳಲ್ಲಿ ಖಾಲಿಯಾಗಿರುವ ನೀರು: ತಾಲೂಕಿನಲ್ಲಿ ಹರಿಯುವ ಪ್ರಮುಖ ನದಿಯಾದ ಹೇಮಾವತಿ ಸೊರಗಿ ಹೋಗಿದ್ದು ನದಿಯಲ್ಲೆ ನೀರಿನ ಒಳಹರಿವೆ ಇಲ್ಲದಂತಾ ಗಿದೆ. ಇದೇ ರೀತಿ ಎತ್ತಿನಹೊಳೆ ಸೇರಿದಂತೆ ಸಣ್ಣಪುಟ್ಟ ನದಿಗಳು, ಹಳ್ಳಗಳು, ಕೆರೆಗಳಲ್ಲಿ ಸಹ ನೀರಿನ ಹರಿವು ಕಡಿಮೆಯಾಗಿದ್ದು ಮಳೆಯಾದಲ್ಲಿ ಮಾತ್ರ ನದಿಮೂಲಗಳು ತುಂಬಬಹುದಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ತೀವ್ರ ಸಂಕಷ್ಟ ಎದುರಿ ಸಬೇಕಾಗುತ್ತದೆ. ಹೇಮಾವರಿ ತವರಿನಲ್ಲಿ ಮಳೆಯ ಕೊರತೆ ರೈತರ ಚಿಂತೆಗೆ ಕಾರಣವಾಗಿದೆ.
ಕಾಫಿ ಫಸಲು ಇಳಿಮುಖ ಸಾಧ್ಯತೆ: ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಾರರಿಗೆ ಈ ಬಾರಿ ನಿರೀಕ್ಷಿಸಿದ ಫಸಲು ಕೈಗೆ ಬರುವ ಸಾಧ್ಯತೆ ಕಡಿಮೆಯಿದೆ. ಒಂದು ವೇಳೆ ಅಲ್ಪ ಪ್ರಮಾಣದಲ್ಲಿ ಕಾಫಿ ದೊರೆತರೂ, ಅಡಕೆ ಬೆಳೆಯಲ್ಲಿ ಬಹುಪಾಲು ನಷ್ಟ ಆಗುವ ಸಾಧ್ಯತೆಯಿದೆ. ಇದೀಗ ಮಳೆ ಪ್ರಮಾಣ ಕಡಿ ಮೆಯಾಗಿ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ಮಳೆ ಸುರಿದರೆ ಕಾಫಿ ಫಸಲಿಗೆ ವ್ಯಾಪಕ ಹಾನಿಯಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಭೋರ್ಗರೆದು ಸುರಿಯಬೇಕಿದ್ದ ಮಳೆಗಾಲದ ದಿನಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಮೊದಲೆಲ್ಲ ಮಳೆಗಾಲ ದಲ್ಲಿ ಬಿಸಿಲು ಕಾಣಿಸುವುದೇ ಅಪರೂಪವಾಗಿತ್ತು. ಇದೀಗ ಮಲೆನಾಡಿನಲ್ಲೂ ಸಹ ಮಳೆಗಾಲದಲ್ಲಿ ಬಿಸಿಲು ಕಾಣಿಸುತ್ತಿರುವುದು ಆತಂಕದ ಸಂಗತಿಯಾಗಿದೆ.
1482 ಕ್ವಿಂಟಲ್ ಭತ್ತದ ಬೀಜ ಲಭ್ಯವಿದ್ದು 1390 ,ಕ್ವಿಂಟಲ್ ಭತ್ತದ ಬೀಜ ವಿತರಣೆ ಮಾಡಲಾಗಿದೆ. 13677 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು 8122 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದ್ದು 5555 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಈ ಬಾರಿ ಮಳೆ ಕೊರೆತೆಯಿಂದ ಬೆಳೆ ಹಾನಿ ಆಗುವ ಸಾಧ್ಯತೆಯಿದ್ದು ಈ ಹಿನ್ನೆಲೆ ರೈತರು ಬೆಳೆವಿಮೆ ಮಾಡಿಸಿಕೊಳ್ಳುವುದು ಒಳ್ಳೆಯದು. – ಚೆಲುವರಂಗಪ್ಪ, ಸಹಾಯಕ ಕೃಷಿ ನಿರ್ದೇಶಕ
ಮಲೆನಾಡಿನಲ್ಲಿ ಜೂನ್ ತಿಂಗಳಿನಲ್ಲಿ ಬೀಳಬೇಕಾದ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದಾಗಿ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯುಂಟು ಮಾಡಿದೆ. ಹವಮಾನ ವೈಪರೀತ್ಯ ವಿಪರೀತವಾಗಿದ್ದು ಕಳೆದ ಮೂರು ನಾಲ್ಕು ವರ್ಷಗಳಿಂದ ಮಳೆಗಾಲ ಆರಂಭವಾಗುವುದು ಒಂದು ತಿಂಗಳು ಮುಂದಕ್ಕೆ ಹೋಗಿದೆ. ಇದರಿಂದ ಹಲವು ಅಡ್ಡ ಪರಿಣಾಮಗಳು ಆಗುತ್ತಿದೆ. – ಸುಧೀಶ್ ಗೌಡ, ಕೃಷಿಕ
ಸುಧೀರ್ ಎಸ್.ಎಲ್