Advertisement

ಮಳೆ ಕೊರತೆಯಲ್ಲೂ ಮೈದುಂಬಿದ ನದಿಗಳು

10:33 AM Jul 14, 2019 | Suhan S |

ಹಾವೇರಿ: ಕಳೆದ ಬೇಸಿಗೆಯಲ್ಲಿ ಸಂಪೂರ್ಣ ಒಣಗಿದ್ದ ತುಂಗಾ ಹಾಗೂ ವರದಾ ನದಿಗಳು ಈಗ ಮೈದುಂಬಿಕೊಂಡಿದ್ದು ನದಿ ಪಾತ್ರದ ಜನರಲ್ಲಿ ಹರ್ಷ ಮೂಡಿದೆ.

Advertisement

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ದಾಖಲೆ ಮಳೆಯಾಗದಿದ್ದರೂ ಜಿಲ್ಲೆಯಲ್ಲಿ ಹರಿದಿರುವ ತುಂಗಾ ಹಾಗೂ ವರದಾ ನದಿಗಳು ಮಾತ್ರ ಮೈದುಂಬಿ ಹರಿಯುತ್ತಿವೆ. ಇದಕ್ಕೆ ಪಕ್ಕದ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯೇ ಕಾರಣ.

ಬಗೆಹರಿದ ನೀರಿನ ಸಮಸ್ಯೆ: ಪಕ್ಕದ ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿದ ಮಳೆ ಪರಿಣಾಮದಿಂದ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ ನದಿ ಜತೆಗೆ ತುಂಗಾ ಮೇಲ್ದಂಡೆ ಕಾಲುವೆಯಲ್ಲಿಯೂ ನೀರು ಹರಿಯುವಂತಾಗಿದೆ. ಹೀಗಾಗಿ ಈ ಭಾಗದ ಹಳ್ಳಿಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದೆ. ಈ ನದಿ ಮೂಲ ಆಶ್ರಯಿಸಿದ್ದ ಅನೇಕ ಬಹುಗ್ರಾಮದ ನದಿ ನೀರು ಯೋಜನೆಗಳಿಗೆ ಪುನರ್ಜೀವ ಬಂದಿದೆ.

ಈ ವರ್ಷ ಜೂನ್‌ ಕಳೆದರೂ ಜಿಲ್ಲೆಯಲ್ಲಿ ಮಳೆಯಾಗಿರಲಿಲ್ಲ. ಕಳೆದ ವಾರದಿಂದಷ್ಟೇ ಜಿಲ್ಲೆಯಲ್ಲಿ ಒಂದಿಷ್ಟು ಮಳೆ ಸುರಿಯುವ ಮೂಲಕ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ. ಮಳೆ ಕೊರತೆ ಅನುಭವಿಸುತ್ತಿರುವಾಗಲೂ ಜಿಲ್ಲೆಯಲ್ಲಿನ ನದಿಗಳು ತುಂಬಿ ಹರಿಯುತ್ತಿರುವುದು ನದಿ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ನದಿಗುಂಟ ಹಸಿರು: ತುಂಗಾ, ವರದಾ ನದಿ ನೀರು ಬಳಸಿಕೊಂಡು ನೂರಾರು ಎಕರೆ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆದಿದ್ದು, ನದಿಗುಂಟದ ಹೊಲಗಳಲ್ಲಿ ಈಗ ಹಸಿರು ಕಾಣುತ್ತಿದೆ. ವರದಾ ನದಿಗುಂಟ ಇರುವ ಕಳಸೂರ, ಮನ್ನಂಗಿ, ನಾಗನೂರ, ಸಂಗೂರ, ಆಡೂರ, ಅರೇಲಕ್ಮಾಪುರ, ಕೂಸನೂರ, ಶೇಷಗಿರಿ, ಹೊಂಕಣ, ಮಕರಳ್ಳಿ, ಗೊಂದಿ, ಕರಜಗಿ, ಹಿರೇಮರಳಿಹಳ್ಳಿ, ಹೊಸರಿತ್ತಿ, ಬೆಳವಿಗಿಯ, ಮರೋಳ ಗ್ರಾಮ ಸೇರಿದಂತೆ ನದಿ ಪಾತ್ರದ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ, ಜನ-ಜಾನುವಾರುಗಳಿಗೆ ಅನುಕೂಲವಾಗಿದೆ. ನದಿಗಳು ತುಂಬಿ ಹರಿಯುತ್ತಿರುವ ಕಾರಣದಿಂದಾಗಿಯೇ ಮುಂಗಾರು ಬಿತ್ತನೆಯೂ ಹೆಚ್ಚಾಗಿದೆ.

Advertisement

ಗೇಟ್ ಬಂದ್‌ ಮಾಡಿ: ಜಿಲ್ಲೆಯಲ್ಲಿ ವರದಾ ನದಿಯ 16, ಕುಮದ್ವತಿ ನದಿಯ 10, ಧರ್ಮಾ ನದಿಯ 12, ಹಳ್ಳಗಳು 12 ಹೀಗೆ 50 ಬ್ಯಾರೇಜ್‌ಗಳಿವೆ. ಸಾಮಾನ್ಯವಾಗಿ ಅಕ್ಟೋಬರ್‌ ಕೊನೆಯಲ್ಲಿ ಇಲ್ಲವೇ ನವೆಂಬರ್‌ ತಿಂಗಳಲ್ಲಿ ನದಿಗಳ ಬ್ಯಾರೇಜ್‌ಗಳಿಗೆ ಗೇಟ್ ಹಾಕಲಾಗುತ್ತದೆ. ಈ ವರ್ಷ ಜುಲೈ, ಆಗಸ್ಟ್‌ನಲ್ಲಿ ಮಳೆ ಸಮರ್ಪಕವಾಗಿ ಆಗದಿದ್ದರೆ ಅವಧಿಗೂ ಮುನ್ನವೇ ವರದಾ, ಧರ್ಮಾ ನದಿಗಳ ಬ್ಯಾರೇಜ್‌ಗಳ ಗೇಟ್‌ಗಳನ್ನು ಬಂದ್‌ ಮಾಡಬೇಕು. ಇದರಿಂದ ಮುಂದೆ ಸ್ಥಳೀಯರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಈ ಭಾಗದ ರೈತರಿಂದ ಕೇಳಿಬರುತ್ತಿದೆ.

ಈಗ ಕೆರೆ ತುಂಬಿಸಿ: ಇನ್ನು ಮುಂದೆ ಉತ್ತಮ ಮಳೆಯಾದರೆ ಒಳಿತು. ಇಲ್ಲದೆ ಇದ್ದರೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್‌ ತಿಂಗಳಲ್ಲೇ ನದಿಗಳ ಬ್ಯಾರೇಜ್‌ಗಳಿಗೆ ಬಾಗಿಲು ಹಾಕುವ ಕೆಲಸ ಮಾಡಬೇಕಾಗುತ್ತದೆ. ಇನ್ನು ಹರಿಯುವ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯವನ್ನು ಜಿಲ್ಲಾಡಳಿತ ಶೀಘ್ರ ಕೈಗೊಂಡರೆ ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೂ ಬೇಸಿಗೆಯಲ್ಲಿ ಜನ- ಜಾನುವಾರುಗಳಿಗೆ ನೀರಿನ ತೊಂದರೆಯಾಗುವುದನ್ನು ತಪ್ಪಿಸಬಹುದಾಗಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕಿದೆ.

ಜಿಲ್ಲಾ ಕೇಂದ್ರ ಹಾವೇರಿ ನಗರವಂತೂ ಸದಾ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಬೇಸಿಗೆಯಲ್ಲಂತೂ ನೀರಿನ ಹಾಹಾಕಾರ ಏಳುತ್ತದೆ. ಕೊಳವೆಬಾವಿಗಳು ಸಹ ಒಣಗಿ ಕಳೆದ ವರ್ಷ ಜನರು ನೀರಿಗಾಗಿ ಪರಿತಪಿಸಿದ್ದರು. ಜಿಲ್ಲಾಡಳಿತ ತುಂಬಿ ಹರಿಯುತ್ತಿರುವ ವರದೆ ಹಾಗೂ ತುಂಗಾ ನದಿ ನೀರನ್ನು ನಗರದ ಹೆಗ್ಗೇರಿ ಕೆರೆ, ಅಕ್ಕಮಹಾದೇವಿ ಹೊಂಡ, ಇಜಾರಿ ಲಕಮಾಪುರ ಕೆರೆ ಸೇರಿದಂತೆ ಎಲ್ಲ ಕೆರೆಗಳನ್ನು ತುಂಬಿಸಿದರೆ ಅಂತರ್ಜಲಮಟ್ಟ ಹೆಚ್ಚಾಗಿ ನಗರದಲ್ಲಿ ಬತ್ತಿರುವ ಕೊಳವೆಬಾವಿಗಳು ಪುನರ್ಜೀವ ಪಡೆದುಕೊಳ್ಳಲಿವೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next